ಸರಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ: ಶಿಕ್ಷಣ ಸಚಿವ ಎನ್.ಮಹೇಶ್

Update: 2018-07-08 12:00 GMT

ಕಲಬುರಗಿ, ಜು. 8: ರಾಜ್ಯದ ಯಾವುದೇ ಸರಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿ ಎನ್.ಮಹೇಶ್ ಸ್ಪಷ್ಟಪಡಿಸಿದ್ದಾರೆ.

ರವಿವಾರ ಇಲ್ಲಿನ ಕಲಬುರ್ಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಸರಕಾರಿ ಶಾಲೆಗಳನ್ನು ವಿಲೀನ ಮಾಡುವುದಿಲ್ಲ. ಕಡಿಮೆ ಹಾಜರಾತಿ ಇರುವ ಶಾಲೆಗಳನ್ನು ಕೂಡ ಮುಂದುವರೆಸಲಾಗುವುದು ಎಂದು ಇದೇ ವೇಳೆ ಸ್ಪಷ್ಟಣೆ ನೀಡಿದರು.

ಸರಕಾರಿ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಆದ್ಯತೆ ನೀಡಲಾಗುವುದು. ಸರಕಾರದಿಂದಲೆ ಎಲ್ಕೆಜಿ/ಯುಕೆಜಿ ಒಳಗೊಂಡ ಶಾಲೆಗಳನ್ನು ತೆರೆಯುವ ಚಿಂತನೆಯಿದೆ. ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವ ಯೋಜನೆಯೂ ಇದೆ. ಆ ಮೂಲಕ ಶಾಲೆಗಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹೇಶ್ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ಭಾಷೆ ಅನ್ನ ಕೊಡುವ ಭಾಷೆಯಾಗಿದೆ. ಗುಣಮಟ್ಟದ ಶಿಕ್ಷಣ ಹಾಗೂ ಕ್ರಿಯಾತ್ಮಕ ಮತ್ತು ಕೌಶಲ್ಯದಾಯಕ ಶಿಕ್ಷಣ ಸಿಗುವ ವ್ಯವಸ್ಥೆ ಆಗಬೇಕು. ಆಗ ಮಾತ್ರ ಸರಕಾರಿ ಶಾಲೆಗಳಲ್ಲಿ ಬದಲಾವಣೆ ತರಬಹುದು ಎಂದು ಅವರು ತಿಳಿಸಿದರು.

ರಾಜ್ಯದ ಸರಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ಹಿನ್ನಲೆಯಲ್ಲಿ ಈಗಾಗಲೇ 10 ಸಾವಿರ ಪ್ರಾಥಮಿಕ ಶಾಲೆ ಶಿಕ್ಷಕರ ನೇಮಕ ಪ್ರಕ್ರಿಯೆ ಆರಂಭವಾಗಿದೆ ಎಂದು ಅವರು, ಶೀಘ್ರದಲ್ಲೆ ಶಾಲಾ ಶಿಕ್ಷಕರ ನೇಮಕಾತಿಗೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News