ಭಾರೀ ಮಳೆ: ಮುಳ್ಳಯ್ಯನಗಿರಿ ಸಂಪರ್ಕ ರಸ್ತೆಯ ನಾಲ್ಕು ಕಡೆ ಮಣ್ಣು ಕುಸಿತ

Update: 2018-07-08 12:32 GMT

ಚಿಕ್ಕಮಗಳೂರು, ಜು.8: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಸಂಪರ್ಕ ರಸ್ತೆ ಬಂದ್ ಆಗುವ ಸಾಧ್ಯತೆ ಎದುರಾಗಿದ್ದು, ನಗರದಿಂದ ಮುಳ್ಳಯ್ಯನ ಗಿರಿ ಸಂಪರ್ಕ ರಸ್ತೆಯಲ್ಲಿ ಶನಿವಾರ ಸಂಜೆ ಗುಡ್ಡ ಕುಸಿದು ಮಣ್ಣು, ಬಂಡೆ ಕಲ್ಲುಗಳು ಬಿದ್ದಿದ್ದು, ಪ್ರವಾಸಿಗರ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಮುಳ್ಳಯ್ಯನಗಿರಿ ವ್ಯಾಪ್ತಿಯಲ್ಲೂ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಸತತ ಮಳೆಯಿಂದಾಗಿ ಮುಳ್ಳಯ್ಯನಗಿರಿ ಸಮೀಪದ ಗುಡ್ಡಗಳಲ್ಲಿ ಮಣ್ಣು ಸಡಿಲಗೊಂಡು ನಾಲ್ಕು ಕಡೆಗಳಲ್ಲಿ ಮಣ್ಣು ಕುಸಿದ ಪರಿಣಾಮ ರಸ್ತೆಗೆ ಬಂಡೆಕಲ್ಲುಗಳು ಉರುಳಿ ಬಿದ್ದಿದ್ದು, ಹೊರ ಜಿಲ್ಲೆಗಳಿಂದ ಬರುತ್ತಿರುವ ಪ್ರವಾಸಿಗರ ನೂರಾರು ವಾಹನಗಳು ಮುಳ್ಳಯ್ಯನ ಗಿರಿ ರಸ್ತೆಯಲ್ಲಿ ಮಣ್ಣು ಕುಸಿತದಿಂದಾಗಿ ಸಂಚಾರಕ್ಕೆ ಹರಸಾಹಸಪಡುವಂತಾಗಿದೆ ಎಂದು ತಿಳಿದು ಬಂದಿದೆ.

ಚಿಕ್ಕಮಗಳೂರು ನಗರದಿಂದ ಮುಳ್ಳಯ್ಯನಗಿರಿ ತಲುಪಲು ಇರುವ ರಸ್ತೆ ಭಾರೀ ಕಿರಿದಾಗಿದ್ದು, ಸದ್ಯ ರಸ್ತೆ ಮಧ್ಯೆ ಅಲ್ಲಲ್ಲಿ ಕುಸಿದು ಬಿದ್ದಿರುವ ಬಂಡೆಕಲ್ಲುಗಳು ಹಾಗೂ ಮಣ್ಣಿನಿಂದಾಗಿ ಪ್ರವಾಸಿಗರು ಆತಂಕದಲ್ಲೇ ಪ್ರಯಾಣ ಮಾಡುವಂತಾಗಿದ್ದು, ಅನಾಹುತಗಳಿಗೆ ಎಡೆಮಾಡಿಕೊಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಗಿರಿಯ ರಸ್ತೆಯ ಅಲ್ಲಲ್ಲಿ ಭಾರೀ ಮಳೆಗೆ ಮಣ್ಣು ಕುಸಿಯುತ್ತಲೇ ಇರುವುದರಿಂದ ಮುಳ್ಳಯ್ಯನಗಿರಿ ಸಂಪರ್ಕ ರಸ್ತೆ ಬಂದ್ ಆಗುವ ಆತಂಕ ಪ್ರವಾಸಿಗರನ್ನು ಕಾಡುತ್ತಿದೆ.

ಮಳೆಗಾಲವಾದ್ದರಿಂದ ಮುಳ್ಳಯ್ಯನಗಿರಿ ವ್ಯಾಪ್ತಿಯ ಬೆಟ್ಟಗುಡ್ಡಗಳು ಹಸಿರಿನಿಂದ ಕಂಗೊಳಿಸಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಕಾರಣಕ್ಕೆ ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ದೂರುದ ಊರುಗಳಿಂದ ಶನಿವಾರ, ರವಿವಾರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಸಾಮಾನ್ಯ. ಸದ್ಯ ಮುಳ್ಳಯ್ಯನಗಿರಿ ಸಂಪರ್ಕ ರಸ್ತೆಯಲ್ಲಿ ಬಂಡೆಕಲ್ಲು, ಮಣ್ಣು ಕುಸಿದಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿ, ಸಂಚಾರ ಅಸ್ತವ್ಯಸ್ತವಾಗುವ ಭೀತಿ ಪ್ರವಾಸಿಗರು ಹಾಗೂ ವಾಹನ ಚಾಲಕರನ್ನು ಕಾಡುತ್ತಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News