ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ವಾಗ್ಮೋರೆ ಮನೆಗೆ ಶ್ರೀರಾಮಸೇನೆ ಮುಖಂಡರು ಭೇಟಿ

Update: 2018-07-08 13:39 GMT

ವಿಜಯಪುರ, ಜು.8: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಬಂಧಿತನಾಗಿರುವ ಪರಶುರಾಮ್ ವಾಗ್ಮೋರೆ ಮನೆಗೆ ಶ್ರೀರಾಮ ಸೇನೆ ಮುಖಂಡರು ಭೇಟಿ ನೀಡಿದರು.

ಪರಶುರಾಮ್ ಬಂಧಿತನಾದ ವೇಳೆ ಆತನಿಗೂ ಸೇನೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆದರೆ, ಶನಿವಾರ ಶ್ರೀರಾಮ ಸೇನೆಯ ಕೆಲ ಮುಖಂಡರು ವಾಗ್ಮೋರೆ ಮನೆಗೆ ಭೇಟಿ ನೀಡಿ, ಪೋಷಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶ್ರೀರಾಮ ಸೇನೆ ದಕ್ಷಿಣ್ ಪ್ರಾಂತ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್ ಸೇರಿದಂತೆ ಅನೇಕರು ವಾಗ್ಮೋರೆ ಕುಟುಂಬದ ಸದಸ್ಯರನ್ನು ಭೇಟಿಯಾಗಿ, ಆತ ಪೋಷಕರೊಂದಿಗೆ ಮಾತನಾಡಿರುವ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ವಾಗ್ಮೋರೆ ಧರ್ಮ ರಕ್ಷಕ, ಆತನನ್ನು ಉಳಿಸುವ ಜವಾಬ್ದಾರಿ ನಮಗಿದೆ ಎಂದು ಕೆಲ ಸದಸ್ಯರು ಕುಟುಂಬಸ್ಥರಿಗೆ ತಿಳಿಸಿದ್ದಾರೆಂದು ತಿಳಿದುಬಂದಿದೆ.

ಈ ಕುರಿತು ವ್ಯಕ್ತಿಯೊಬ್ಬ ಫೇಸ್‌ಬುಕ್‌ನಲ್ಲಿ ವಾಗ್ಮೋರೆ ಕುಟುಂಬಸ್ಥರೊಂದಿಗೆ ಭೇಟಿಯಾಗಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾನೆ. ಇತ್ತೀಚಿಗೆ ವಾಗ್ಮೋರೆ ತಾಯಿ ಜಾನಕಿಭಾಯಿ, ತಂದೆ ಅಶೋಕ್ ಅವರು ಸಿಐಡಿ ಕಚೇರಿಯಲ್ಲಿ ಪುತ್ರ ಪರಶುರಾಮ್‌ನನ್ನು ಭೇಟಿಯಾಗಿದ್ದರು. 

ನಾಳೆ ಅಂತಿಮ ಆದೇಶ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿ ಕೆ.ಟಿ.ನವೀನ್‌ ಕುಮಾರ್ ಯಾನೆ ಹೊಟ್ಟೆ ಮಂಜ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ನಗರದ 70ನೆ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಅಂತಿಮ ಆದೇಶ ಕಾಯ್ದಿರಿಸಿದೆ. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಟಿ.ರಾಮಲೀಗೇಗೌಡ ಜು.9 ರಂದು ಅಂತಿಮ ಆದೇಶ ಪ್ರಕಟಿಸುವುದಾಗಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News