ಪರೀಕ್ಷೆಗಾಗಿ ತಾಳಿ, ಕಾಲುಂಗುರ ಬಿಚ್ಚಿಸಿದರು..!

Update: 2018-07-08 14:24 GMT

ಬೆಂಗಳೂರು, ಜು.8: ರಾಷ್ಟ್ರೀಯ ಅರ್ಹತಾ ಪರೀಕ್ಷೆ(ನೆಟ್) ಬರೆಯಲು ಹೋದ ಮಹಿಳಾ ಅಭ್ಯರ್ಥಿಗಳಿಗೆ ತಾಳಿ, ಕಾಲುಂಗುರ ಬಿಚ್ಚಿಸಿರುವುದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿ, ಇಂತಹ ಅನಗತ್ಯ ನಿಯಮಾವಳಿಗೆ ಕಡಿವಾಣ ಹಾಕಬೇಕೆಂದು ಹೇಳಿದ್ದಾರೆ.

ರವಿವಾರ ಇಲ್ಲಿನ ಜೆಪಿ ನಗರದ ಬ್ರಿಗೇಡ್ ಶಾಲೆ ಪರೀಕ್ಷಾ ಕೇಂದ್ರದಲ್ಲಿ ಇಪ್ಪತ್ತಕ್ಕೂ ಹೆಚ್ಚು ವಿವಾಹಿತ ಮಹಿಳಾ ಅಭ್ಯರ್ಥಿಗಳಿಗೆ ತಾಳಿ, ಕಾಲುಂಗುರ ತೆಗೆಯುವಂತೆ ಸೂಚಿಸಿರುವುದಾಗಿ ವರದಿಯಾಗಿದೆ.

ನೆಟ್ ಪರೀಕ್ಷಾ ಪತ್ರದಲ್ಲಿ ಲೋಹದ ಆಭರಣಗಳನ್ನು ಪರೀಕ್ಷಾ ಕೊಠಡಿಗಳಲ್ಲಿ ಇಡಬಾರದೆಂದು ಹೇಳಲಾಗಿದೆ. ಇದನ್ನು ಪರಿಗಣಿಸಿದ ವೀಕ್ಷಕರು, ಅಭ್ಯರ್ಥಿಗಳ ಮೈಮೇಲೆ ಇದ್ದ ಆಭರಣಗಳನ್ನು ತೆಗೆಯಬೇಕೆಂದು ಸೂಚನೆ ನೀಡಿದರು ಎಂದು ತಿಳಿದುಬಂದಿದೆ.

ಇನ್ನು ಈ ಬಗ್ಗೆ ಲಕ್ಷ್ಮೀ ಎಂಬಾಕೆ ಮಾತನಾಡಿ, ಯಾವ ಕೇಂದ್ರದಲ್ಲೂ ಈ ರೀತಿ ಮಾಡಲಿಲ್ಲ. ಆದರೆ, ಪ್ರಥಮ ಬಾರಿಗೆ ಈ ಕೇಂದ್ರದಲ್ಲಿ ನಿಯಮಾವಳಿಗಳನ್ನು ಇಟ್ಟುಕೊಂಡು ಅಭ್ಯರ್ಥಿಗಳಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಅಷ್ಟೇ ಅಲ್ಲದೆ, ಆಭರಣಗಳನ್ನು ಎಲ್ಲಿ ಇಡಬೇಕೆಂದು ಹೇಳದೆ, ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿದರು.

ಕೇಂದ್ರ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್‌ಇ) ನೆಟ್ ಪರೀಕ್ಷೆಯನ್ನು ಹಮ್ಮಿಕೊಂಡಿರುವುದರಿಂದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ ಕಟ್ಟು ನಿಟ್ಟಾದ ನಿಯಮಗಳನ್ನೇ ಇದಕ್ಕೂ ಅಳವಡಿಸಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News