ಎಬಿವಿಪಿ ಕಾರ್ಯಕರ್ತರ ಮೇಲಿನ ಲಾಠಿ ಚಾರ್ಜ್ ಖಂಡನೀಯ: ಶಾಸಕ ಜ್ಯೋತಿ ಗಣೇಶ್
ತುಮಕೂರು,ಜು.08: ಉಚಿತ ಬಸ್‍ಪಾಸ್‍ಗೆ ಒತ್ತಾಯಿಸಿ ಎಬಿವಿಪಿ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ನಡೆಸುವ ವೇಳೆ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿರುವುದು ಖಂಡನೀಯ. ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುವುದಾಗಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಎಬಿವಿಪಿ ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿ ಚಾರ್ಚ್ ಅಮಾನುಷವಾದದ್ದು. ಅಮಾಯಕ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ನಡೆಸಿಕೊಂಡ ರೀತಿ ಹೇಯ ಕೃತ್ಯವಾಗಿದ್ದು, ನಿಮ್ಮ ಸಾಮರ್ಥ್ಯವನ್ನು ಮುಗ್ದ ವಿದ್ಯಾರ್ಥಿಗಳ ತೋರಿಸದೇ ದಿನ ನಿತ್ಯ ನಗರದಲ್ಲಿ ಸಮಾಜಘಾತುಕ ಶಕ್ತಿಗಳಂತೆ ವರ್ತಿಸುತ್ತಾ, ನಗರದ ನಾಗರೀಕರ ನೆಮ್ಮದಿ ಕೆಡಿಸಿರುವ ಕಳ್ಳರ ಮೇಲೆ, ಬೈಕ್ ವಿಲಿಂಗ್ ಮಾಡುತ್ತಾ, ಕರ್ಕಶ ಸೈಲೆನ್ಸರ್ ಶಬ್ದದಿಂದ ವೃದ್ದರ ಮೇಲೆ ಅಘಾತ ಉಂಟುಮಾಡುತ್ತಿರುವವರ ಮೇಲೆ, ಕಾಲೇಜು ಆವರಣಗಳಲ್ಲಿ ಹೆಣ್ಣು ಮಕ್ಕಳನ್ನು ಚುಡಾಯಿಸುವ ಪೋಲಿ, ಪುಂಡರ ಮೇಲೆ ತೋರಿಸಿ ಎಂದರು.
ಬಡ ಗ್ರಾಮೀಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ದೃಷ್ಟಿಯಿಂದ ರಾಜ್ಯ ಸರಕಾರ ವಿರುದ್ಧ ಉಚಿತ ಪಾಸ್ ವಿತರಿಸುವಂತೆ ಪ್ರತಿಭಟನೆ ನಡೆಸಲು ಹೋಗಿದ್ದ ಎಬಿವಿಪಿ ಕಾರ್ಯಕರ್ತರ ಮೇಲೆ ಪೋಲಿಸರು ಮಾಡಿದಂತಹ ದೌರ್ಜನ್ಯ ಖಂಡನೀಯ. ಪೋಲಿಸ್ ಇಲಾಖೆ ತಕ್ಷಣ ಅಮಾಯಕ ವಿದ್ಯಾರ್ಥಿಗಳ ಮೇಲೆ ಹಾಗೂ ವಿದ್ಯಾಸಂಸ್ಥೆಯ ಮೇಲೆ ದಾಖಲಿಸಿರುವ ಕೇಸನ್ನು ಹಿಂಪಡೆಯಬೇಕೆಂದು ಎಂದು ಆಗ್ರಹಿಸಿದರು.
ಪೋಲಿಸ್ ಇಲಾಖೆಯ ಈ ಕೃತ್ಯ ಪ್ರಜೆಯ ಪ್ರಭಟನೆಯ ಹಕ್ಕನ್ನು ಕಸಿದಂತೆ ಭಾಸವಾಗುತ್ತಿದೆ. ಈ ಸಂಬಂಧವಾಗಿ ವಿಧಾನಸಭೆ ಅಧಿವೇಶನದಲ್ಲಿ ಗೃಹಮಂತ್ರಿಗಳ ಗಮನಕ್ಕೆ ತಂದು ಚರ್ಚಿಸಲಾಗುವುದು. ಪೊಲೀಸರು ವಿದ್ಯಾರ್ಥಿಗಳ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ನಗರದಲ್ಲಿ ವಾಸಿಸುವ ಕಡು ಬಡವನಿಂದ ಆರಂಭಿಸಿ ಆಗರ್ಭ ಶ್ರೀಮಂತನೂ ಸಹ ಒಂದು ಸ್ವಂತ ಮನೆ ನಿರ್ಮಿಸಿಕೊಳ್ಳುವುದು ಅವರ ಹಕ್ಕು ಮತ್ತು ಅವರಿಗೆ ನೆರವು ನೀಡುವುದು ಸರಕಾರದ ಕರ್ತವ್ಯ. ತುಮಕೂರು ಮಹಾನಗರ ಪಾಲಿಕೆ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ, ಕೊಳಚೆ ನಿರ್ಮೂಲನಾ ಮಂಡಳಿ ಮತ್ತು ಹೌಸಿಂಗ್ ಬೋರ್ಡ್, ಕುಶಲ ಕರ್ಮಿಗಳಿಗೆ ಲಿವಿಂಗ್ ಕಮ್ ವರ್ಕ್ ಷೆಡ್ ನಿರ್ಮಿಸಿಕೊಡುವ ಕೈಗಾರಿಕಾ ಇಲಾಖೆಗಳು ಮತ್ತು ಎಲ್ಲಾ ವಸತಿಗೆ ಸಂಬಂಧಿಸಿ ಇಲಾಖೆಗಳು ಸಹ ಕಟ್ಟು ನಿಟ್ಟಿನಲ್ಲಿ ಬೇಡಿಕೆ ಆಧಾರಿತ ಸಮೀಕ್ಷೆ ನಡೆಸಲು ಎಲ್ಲಾ ಇಲಾಖೆಗಳಿಗೆ ಸೂಚಿಸಿದ್ದೇನೆ ಎಂದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಸಿ.ಎನ್. ರಮೇಶ್, ನಗರ ವಕ್ತಾರ ಶಂಭುಲಿಂಗಸ್ವಾಮಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಕಾರ್ಯದರ್ಶಿ ರಕ್ಷಿತ್, ಜಿಲ್ಲಾ ಕಚೇರಿ ಕಾರ್ಯದರ್ಶಿ ಸಂದೀಪ್ ಗೌಡ, ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಗೌಡ ಮುಂತಾದವರು ಉಪಸ್ಥಿತರಿದ್ದರು.