×
Ad

ಮಾನವನ ಹಸ್ತಕ್ಷೇಪದಿಂದಾಗಿ ಜೀವ ಪರಿಸರ ವಿನಾಶ: ಪರಿಸರ ತಜ್ಞ ಕುಮಾರಸ್ವಾಮಿ

Update: 2018-07-08 22:34 IST

ದಾವಣಗೆರೆ,ಜು.09: ಮಾನವನ ಹಸ್ತಕ್ಷೇಪದಿಂದಾಗಿ ಜೀವ ಪರಿಸರ ವಿನಾಶದಂಚಿಗೆ ತಲುಪಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪರಿಸರ ತಜ್ಞ ಶಿವಮೊಗ್ಗದ ಬಿ.ಎಂ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಭಾರತ ವಿಕಾಸ ಪರಿಷತ್ ಗೌತಮ ಶಾಖೆಯಿಂದ ಹಮ್ಮಿಕೊಂಡಿದ್ದ ಹಸಿರು ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು. '460 ಕೋಟಿ ವರ್ಷಗಳಷ್ಟು ಸುದೀರ್ಘ ಇತಿಹಾಸವುಳ್ಳ ಭೂಮಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ಪರಿಸರವಿರೋಧಿ ಚಟುವಟಿಕೆಗಳಿಂದ ಇಡೀ ಜೀವ ಸಂಕುಲ ಅಪಾಯ ಎದುರಿಸುತ್ತಿದೆ. ಕಳೆದ 150 ವರ್ಷಗಳಲ್ಲಿ ಆರ್ಥಿಕ ಅಭಿವೃದ್ಧಿಗಾಗಿ ನಾವು ಪರಿಸರಕ್ಕೆ ಭರಿಸಲಾಗದಷ್ಟು ಹಾನಿ ಮಾಡಿದ್ದೇವೆ. ಸದ್ಯ ಭೂ ಪರಿಸರ ತುರ್ತು ನಿಗಾ ಘಟಕದಲ್ಲಿದ್ದು, ಇದು ಇದೇ ರೀತಿ ಮುಂದುವರೆದರೆ ಮನುಷ್ಯ ಸೇರಿದಂತೆ ಯಾವ ಜೀವಿಗಳಿಗೂ ಉಳಿಗಾಲವಿಲ್ಲ ಎಂದು ಅವರು ಎಚ್ಚರಿಸಿದರು.

ಕೈಗಾರಿಕಾ ಕ್ರಾಂತಿ, ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಅತಿ ಬಳಕೆಯಿಂದ ವಾತಾವರಣದಲ್ಲಿ ಇಂಗಾಲ ಡೈ ಆಕ್ಸೈಡ್ ಅಪಾಯಕಾರಿ ಮಟ್ಟ ತಲುಪುತ್ತಿದೆ. ಶೇ.0.03ರಷ್ಟು ಇರಬೇಕಿದ್ದ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಕಳೆದ 60 ವರ್ಷಗಳಲ್ಲಿ 24 ಪಟ್ಟು ಹೆಚ್ಚಾಗಿದೆ. 2016ರ ಹೊತ್ತಿಗೆ ವರ್ಷಕ್ಕೆ 3600 ಕೋಟಿ ಟನ್ ಇಂಗಾಲವನ್ನು ವಾತಾವರಣಕ್ಕೆ ಸೇರಿಸಿದ್ದೇವೆ. ಇದರಲ್ಲಿ ಚೀನಾ ಶೇ.25, ಅಮೇರಿಕಾ ಶೇ.14.4, ಯೂರೋಪಿಯನ್ ರಾಷ್ಟ್ರಗಳು ಶೇ.10.16 ಹಾಗೂ ಭಾರತ ಶೇ.6.96ರಷ್ಟು ಕೊಡುಗೆ ನೀಡಿದೆ. ಅಭಿವೃದ್ಧಿ ವೇಗದಲ್ಲಿ ನಮ್ಮ ದೇಶವೂ ಪರಿಸರ ಮಾಲಿನ್ಯಕ್ಕೆ ಗಣನೀಯ ಕೊಡುಗೆ ನೀಡುತ್ತಿದೆ ಎಂದು ಅವರು ವಿವರಿಸಿದರು.

ಪರಿಷತ್ತಿನ ಕರ್ನಾಟಕ ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷ ಬಿ.ಕೆ.ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷತ್ತಿನ ಗೌತಮ ಶಾಖೆ ಅಧ್ಯಕ್ಷ ಮಹಾಂತೇಶ ಅಗಡಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುರೇಶ ಜೈನ್, ದೇವತಾ ಶ್ರೀನಿವಾಸ್, ಉಮಾಪತಿ, ಟಿ.ಎಸ್.ಜಯರುದ್ರೇಶ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News