ಕೊಡಗು: ಮುಂದುವರೆದ ಮಳೆ; ತಗ್ಗು ಪ್ರದೇಶ ನಿವಾಸಿಗಳಲ್ಲಿ ಆತಂಕ
ಮಡಿಕೇರಿ, ಜು.8: ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ನದಿ, ತೊರೆಗಳ ನೀರಿನ ಮಟ್ಟ ತಗ್ಗಿಲ್ಲ. ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ ದಟ್ಟ ಮೋಡದೊಂದಿಗೆ ಗಾಳಿ, ಚಳಿ ಸಹಿತ ಮಳೆಯಾಗುತ್ತಿದೆ.
ನಿತ್ಯ ಮಳೆಯಿಂದಾಗಿ ಎತ್ತರ ಹಾಗೂ ತಗ್ಗು ಪ್ರದೇಶದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಮಳೆಯ ಪ್ರಮಾಣ ತಗ್ಗಿದೆಯಾದರೂ ತ್ರಿವೇಣಿ ಸಂಗಮದಲ್ಲಿ ಏರಿಕೆಯಾಗಿರುವ ನೀರಿನ ಮಟ್ಟ ಯಥಾಸ್ಥಿತಿಯಲ್ಲಿದೆ.
ಮಡಿಕೇರಿ ನಗರದಲ್ಲಿ ದಟ್ಟ ಮಂಜಿನೊಂದಿಗೆ ಮೈಕೊರೆಯುವ ಚಳಿ ಮತ್ತು ಮಳೆಯ ವಾತಾವರಣ ಮುಂದುವರೆದಿದೆ.
ಸಹಾಯಕ್ಕಾಗಿ ಕಂಟ್ರೋಲ್ ರೂಮ್
ಅತಿವೃಷ್ಟಿ ಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ಹಾಗೂ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಮತ್ತು ತಾಲ್ಲೂಕು ಕಚೇರಿಗಳು ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಮ್) ತೆರೆಯಲಾಗಿದೆ. ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆ ವಿವರ ಹೀಗಿದೆ. ಜಿಲ್ಲಾಧಿಕಾರಿ ಕಚೇರಿ-08272-221077, ಜಿಲ್ಲಾ ಅಗ್ನಿಶಾಮಕ ಕಚೇರಿ-101, 08272-229299, ಮಡಿಕೇರಿ ತಾಲೂಕು ಕಚೇರಿ-08272-228396, ನಗರಸಭೆ-08272-220111, ಸೋಮವಾರಪೇಟೆ ತಾಲೂಕು ಕಚೇರಿ-08276-282045, ವಿರಾಜಪೇಟೆ ತಾಲೂಕು ಕಚೇರಿ- 08274-256328 ಈ ದೂರವಾಣಿ ಸಂಖ್ಯೆಗಳಿಗೆ ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಸಮಸ್ಯೆಗಳಿದ್ದಲ್ಲಿ ಕರೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.
ಮಳೆ ವಿವರ
ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 73.7 ಮಿ.ಮೀ. ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 119.7 ಮಿ.ಮೀ. ವಿರಾಜಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 64.1 ಮಿ.ಮೀ. ಸೋಮವಾರಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 37.3 ಮಿ.ಮೀ. ಆಗಿದೆ.