×
Ad

ಅಹಮದಾಬಾದ್‍ಗೆ ಶಿವಮೊಗ್ಗದಿಂದ 6 ಚಿರತೆಗಳ ರವಾನೆ

Update: 2018-07-08 22:54 IST

ಶಿವಮೊಗ್ಗ, ಜು. 7: ನಗರದ ಹೊರವಲಯ ತ್ಯಾವರೆಕೊಪ್ಪ ಗ್ರಾಮದಲ್ಲಿರುವ ಹುಲಿ-ಸಿಂಹಧಾಮದಲ್ಲಿನ ಆರು ಚಿರತೆಗಳನ್ನು ಗುಜರಾತ್ ರಾಜ್ಯದ ಅಹಮದಾಬಾದ್‍ನ ಕಮಲಾ ನೆಹರು ಪ್ರಾಣಿ ಸಂಗ್ರಹಾಲಯಕ್ಕೆ ಶನಿವಾರ ಕಳುಹಿಸಿ ಕೊಡಲಾಗಿದೆ. 

ಆರು ಚಿರತೆಗಳನ್ನು ಪ್ರತ್ಯೇಕ ಪಂಜರಗಳಲ್ಲಿಟ್ಟು, ಅತ್ಯಂತ ಸುರಕ್ಷಿತವಾಗಿ ಲಾರಿಯಲ್ಲಿ ಕಳುಹಿಸಿ ಕೊಡಲಾಯಿತು. ಕಮಲಾ ನೆಹರು ಪ್ರಾಣಿ ಸಂಗ್ರಹಾಲಯದ ಅಧಿಕಾರಿ ಹಾಗೂ ವೈದ್ಯರು ಜೊತೆಯಲ್ಲಿ ತೆರಳಿದರು. ಈ ಸಂದರ್ಭದಲ್ಲಿ ಸ್ಥಳೀಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 

ಚಿರತೆಗಳ ವಂಶಾಭಿವೃದ್ದಿ ಹಿನ್ನೆಲೆಯಲ್ಲಿ ಅಹಮದಾಬಾದ್ ಮೃಗಾಲಯದವರು ಕರ್ನಾಟಕದ ಆರು ಚಿರತೆಗಳನ್ನು ಕೇಳಿದ್ದರು. ರಾಜ್ಯ ಅರಣ್ಯ ಇಲಾಖೆ ವನ್ಯಜೀವಿ ವಿಭಾಗವು 3 ವರ್ಷ ಪ್ರಾಯದ ತಲಾ 3 ಗಂಡು ಹಾಗೂ ಹೆಣ್ಣು ಚಿರತೆ ನೀಡಲು ಒಪ್ಪಿಗೆ ಸೂಚಿಸಿತ್ತು. ಚಿರತೆ ಹಸ್ತಾಂತರಕ್ಕೆ ಭಾರತೀಯ ಮೃಗಾಲಯ ಪ್ರಾಧಿಕಾರ ಕೂಡ ಹಸಿರು ನಿಶಾನೆ ತೋರಿಸಿತ್ತು. 

ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಒಟ್ಟು 24 ಚಿರತೆಗಳಿದ್ದ ಕಾರಣದಿಂದ, ಇಲ್ಲಿಂದಲೇ ಅಹಮದಾಬಾದ್‍ಗೆ ಚಿರತೆ ಕಳುಹಿಸಿಕೊಡಲು ನಿರ್ಧರಿಸಲಾಗಿತ್ತು. ಅದರಂತೆ ಬನಶಂಕರಿ, ತುಂಗಾ, ಕಲ್ಪನಾ, ಪ್ರದೀಪ, ಪ್ರವೀಣ ಮತ್ತು ಸಂದೀಪ ಹೆಸರಿನ ಚಿರತೆಗಳನ್ನು ಅಮಹದಾಬಾದ್‍ಗೆ ಕಳುಹಿಸಿಡಲಾಗಿದೆ. ಆರು ಚಿರತೆಗಳ ರವಾನೆಯಿಂದ ಪ್ರಸ್ತುತ ತ್ಯಾವರೆಕೊಪ್ಪ ಮೃಗಾಲಯದಲ್ಲಿನ ಚಿರತೆಗಳ ಸಂಖ್ಯೆ 18 ಕ್ಕೆ ಇಳಿಕೆಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News