ದೇಶವನ್ನು ಪ್ರತಿನಿಧಿಸುತ್ತಿರುವ ರೌಡಿಗಳು, ಕೊಲೆಗಾರರು!

Update: 2018-07-08 18:33 GMT

‘‘ಗೋರಕ್ಷಣೆ ಹೆಸರಲ್ಲಿ ಹಲ್ಲ್ಲೆ ಒಪ್ಪಲಾಗದು’’ ‘‘ಇಂತಹ ಹಿಂಸೆಗಳನ್ನು ತಡೆಯುವುದು ರಾಜ್ಯ ಸರಕಾರಗಳ ಕರ್ತವ್ಯ’’ ‘‘ಧರ್ಮದ ಜೊತೆ ಸಂತ್ರಸ್ತರನ್ನು ತಳಕು ಹಾಕಬಾರದು’’ ಇಂತಹ ಎಚ್ಚರಿಕೆಗಳನ್ನು ಸುಪ್ರೀಂಕೋರ್ಟ್ ನೀಡಿದ ಮರುದಿನವೇ ಕೇಂದ್ರ ಸಚಿವರೊಬ್ಬರು, ಗೋರಕ್ಷಣೆಯ ಹೆಸರಿನಲ್ಲಿ ವ್ಯಕ್ತಿಯೊಬ್ಬನನ್ನು ಕೊಂದ ಆರೋಪಿಗಳನ್ನು ಸಾರ್ವಜನಿಕವಾಗಿ ಹಾರ ಹಾಕಿ ಸನ್ಮಾನಿಸಿದ್ದಾರೆ. ಗೋರಕ್ಷಣೆಯ ಹೆಸರಿನಲ್ಲಿ ದುಷ್ಕರ್ಮಿಗಳು ನಡೆಸುತ್ತಿರುವ ಹಿಂಸಾಚಾರವನ್ನು ತಡೆಯುವುದು ಬದಿಗಿರಲಿ, ಇಂದು ದೇಶದಲ್ಲಿ ಅಂತಹ ಗೂಂಡಾಗಳನ್ನು ಸರಕಾರವೇ ಸಾರ್ವಜನಿಕವಾಗಿ ಸನ್ಮಾನಿಸುತ್ತದೆ ಎಂದ ಮೇಲೆ, ಸುಪ್ರೀಂಕೋರ್ಟ್ ಎನ್ನುವುದು ಈ ದೇಶದಲ್ಲಿ ಅಸ್ತಿತ್ವದಲ್ಲಿದೆ ಎಂದು ನಂಬುವುದಾದರೂ ಹೇಗೆ?

ಸುಪ್ರೀಂಕೋರ್ಟ್ ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಹಿಂಸಾಚಾರದ ವಿರುದ್ಧ ಹೇಳಿಕೆಯನ್ನು ನೀಡಿದ ಬೆನ್ನಿಗೇ ಕೇಂದ್ರ ಸಚಿವರು, ದುಷ್ಕರ್ಮಿಗಳಿಗೆ ಸನ್ಮಾನ ಮಾಡುತ್ತಾರೆ ಎಂದಾದರೆ, ಸರಕಾರ ನೇರವಾಗಿ ಸುಪ್ರೀಂಕೋರ್ಟ್‌ನ್ನು ವ್ಯಂಗ್ಯ ಮಾಡಿದೆ. ಅಥವಾ ಸುಪ್ರೀಂಕೋರ್ಟ್ ಹೊಡೆದಂತೆ ಮಾಡಿದರೆ, ಸರಕಾರ ಅತ್ತಂತೆ ನಾಟಕವಾಡುತ್ತಿದೆ. ಜಾರ್ಖಂಡ್‌ನಲ್ಲಿ ಗೋ ಮಾಂಸ ಸಾಗಾಟದ ಶಂಕೆಯ ಮೇರೆಗೆ ಕಾರಿನಲ್ಲಿ ಹೋಗುತ್ತಿದ್ದ ವ್ಯಾಪಾರಿಯೊಬ್ಬನನ್ನು ಗುಂಪೊಂದು ಥಳಿಸಿ ಕೊಂದು ಹಾಕಿತ್ತು. ಇದು ಕೋಮುದ್ವೇಷದಿಂದ ನಡೆಸಿದ ಕೃತ್ಯವಾಗಿತ್ತು. ಕಾರಿನಲ್ಲಿ ಗೋಮಾಂಸ ಪಕ್ಕಕ್ಕಿರಲಿ, ಯಾವುದೇ ರೀತಿಯ ಮಾಂಸವೂ ಇದ್ದಿರಲಿಲ್ಲ. ಥಳಿಸಿದವರಲ್ಲಿ ಎಂಟು ಮಂದಿ ಸಾಮಾನ್ಯ ನಾಗರಿಕರೇನೂ ಆಗಿರಲಿಲ್ಲ. ಅವರ ಮೇಲೆ ಅದಾಗಲೇ ಹಲವು ಕ್ರಿಮಿನಲ್ ಕೇಸುಗಳಿದ್ದವು. ಈ ಪ್ರಕರಣದಲ್ಲಿ ಒಟ್ಟು 12 ಮಂದಿ ಆರೋಪಿಗಳಾಗಿದ್ದು, 11 ಮಂದಿಯ ಅಪರಾಧ ಸಾಬೀತಾಗಿತ್ತು. ಇದೀಗ ಎಂಟು ಮಂದಿ ಆರೋಪಿಗಳನ್ನು ಜಾರ್ಖಂಡ್ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಆರೋಪಿಗಳನ್ನು ಕೇಂದ್ರ ಸಚಿವ ಜಯಂತ್ ಸಿನ್ಹಾ ಹೂಮಾಲೆ ಹಾಕಿ ಸನ್ಮಾನಿಸಿದ್ದಾರೆ. ಈ ಘಟನೆಯನ್ನು ಕೇಂದ್ರ ಸರಕಾರದ ಯಾವುದೇ ನಾಯಕರೂ ಈವರೆಗೆ ಖಂಡಿಸಿಲ್ಲ. ಅಂದರೆ ಅವರೆಲ್ಲ ಸಚಿವ ಮಾಡಿರುವುದನ್ನು ಮೌನವಾಗಿ ಬೆಂಬಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ನಾಯಕ ಯಶವಂತ ಸಿನ್ಹಾ ಮಾತ್ರ ಸಚಿವರ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ. ಜಯಂತ್ ಸಿನ್ಹಾ ಅವರು ಯಶವಂತ ಸಿನ್ಹಾ ಅವರ ಪುತ್ರನಾಗಿದ್ದಾರೆ.

ಕೇಂದ್ರದ ಸಚಿವರೇ ದುಷ್ಕರ್ಮಿಗಳನ್ನು ಸನ್ಮಾನಿಸುತ್ತಾರೆ ಎಂದ ಮೇಲೆ, ಜಾರ್ಖಂಡ್‌ನಲ್ಲಿರುವ ಬಿಜೆಪಿ ಸರಕಾರ ನಕಲಿ ಗೋರಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವೇ? ಒಂದೆಡೆ ಕೇಂದ್ರ ಸರಕಾರ ಬಹಿರಂಗವಾಗಿ ನಕಲಿ ಗೋರಕ್ಷಕರ ವೇಷದಲ್ಲಿರುವ ಕೊಲೆಗಾರರನ್ನು ಸನ್ಮಾನ ಮಾಡಿಸುತ್ತಿರುವಾಗ, ಹಿಂಸೆಯನ್ನು ತಡೆಯುವುದು ರಾಜ್ಯ ಸರಕಾರಗಳ ಹೊಣೆ ಎಂದು ಸುಪ್ರೀಂಕೋರ್ಟ್ ಹೇಳುವುದರಲ್ಲಿ ಏನು ಅರ್ಥವಿದೆ.

ಸರಕಾರದ ಭಾಗವಾಗಿರುವ ಒಬ್ಬ ಸಚಿವ ಒಬ್ಬನನ್ನು ಸನ್ಮಾನ ಮಾಡುವ ಮೂಲಕ ಕೆಲವು ಸಂದೇಶಗಳು ಸಮಾಜಕ್ಕೆ ರವಾನೆಯಾಗುತ್ತವೆೆ. ಸನ್ಮಾನಕ್ಕೊಳಗಾಗುವವರು ಸಾಧಾರಣವಾಗಿ ವಿಜ್ಞಾನಿಗಳು, ಸಾಹಿತಿಗಳು, ಚಿಂತಕರು, ಕೃಷಿಕರು ಆಗಿದ್ದರೆ, ಅವರನ್ನು ಸಮಾಜ ಮಾದರಿಯಾಗಿಟ್ಟುಕೊಳ್ಳುತ್ತದೆ. ಗೋಸಾಕಣೆಯ ಮೂಲಕ ಅಪಾರ ಸಾಧನೆ ಮಾಡಿ, ಯಶಸ್ವಿ ಹೈನೋದ್ಯಮ ಬೆಳವಣಿಗೆಗೆ ಕಾರಣನಾದ ರೈತನನ್ನು ಸಚಿವನೊಬ್ಬ ಸನ್ಮಾನಿಸಿದರೆ ಅದು ಈ ದೇಶದಲ್ಲಿ ಗೋರಕ್ಷಣೆಗೆ, ಹೈನೋದ್ಯಮಕ್ಕೆ ಸ್ಫೂರ್ತಿಯಾಗುತ್ತದೆ. ಆ ರೈತನನ್ನು ಮಾದರಿಯಾಗಿಟ್ಟುಕೊಂಡು ಇತರರೂ ಸಾಧನೆಯನ್ನು ಮಾಡುತ್ತಾರೆ. ಇದರಿಂದ ಗೋರಕ್ಷಣೆಯನ್ನೂ ಮಾಡಿದಂತಾಯಿತು, ಜೊತೆಗೆ ಗ್ರಾಮೀಣ ಪ್ರದೇಶದಲ್ಲಿರುವ ನಿರುದ್ಯೋಗಿಗಳಿಗೆ ಒಂದು ಉದ್ಯೋಗದ ದಾರಿಯನ್ನೂ ತೋರಿಸಿದಂತಾಯಿತು. ಇಂದು ಕೇಂದ್ರದ ನಿರ್ಧಾರಗಳು ದೇಶದ ಎಲ್ಲ ಉದ್ದಿಮೆಗಳನ್ನು ಸರ್ವನಾಶ ಮಾಡುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸಚಿವರು ಕೊಲೆಗಾರರನ್ನು ಸನ್ಮಾನಿಸುವ ಮೂಲಕ ಜನರಿಗೆ ಉದ್ಯೋಗದ ಹೊಸ ದಾರಿಯನ್ನು ತೋರಿಸಿಕೊಟ್ಟಿದ್ದಾರೆ.

ಗೋರಕ್ಷಣೆಯ ಹೆಸರಿನಲ್ಲಿ ಕೊಲೆ ಮಾಡುವುದನ್ನು ಒಂದು ಸಾಧನೆಯಾಗಿ ಬಿಂಬಿಸಿದ್ದಾರೆ. ಕೊಲೆ ಮಾಡುವುದಕ್ಕೆ, ಸಮಾಜ ವಿದ್ರೋಹಿ ಕೃತ್ಯಗಳನ್ನು ಎಸಗುವುದಕ್ಕೆ ಹೆದರುತ್ತಿದ್ದ ತರುಣರಲ್ಲಿ ಸಚಿವರು ಈ ಮೂಲಕ ಆತ್ಮವಿಶ್ವಾಸವನ್ನು ತುಂಬಿದ್ದಾರೆ. ಅಷ್ಟೇ ಅಲ್ಲ, ಗೋರಕ್ಷಕರ ವೇಷದಲ್ಲಿ ನೀವು ಕೊಲೆ, ದರೋಡೆ ಏನೇ ಮಾಡಿದರೂ ಅದು ಅಪರಾಧವಲ್ಲ ಎನ್ನುವುದನ್ನು ಸಚಿವರು ದೇಶದ ಜನರಿಗೆ ತಿಳಿಸಿಕೊಟ್ಟಂತಾಗಿದೆ. ಕೊಲೆ ಸುಲಿಗೆಗಾರರು ಈ ದೇಶವನ್ನು ಜಗತ್ತಿನ ಮುಂದೆ ಪ್ರತಿನಿಧಿಸಲು ಹೊರಟಿದ್ದಾರೆ. ಒಂದು ಕಾಲದಲ್ಲಿ ಕೆಟ್ಟ ಕೆಲಸಗಳನ್ನು, ಕೊಲೆ, ದರೋಡೆಗಳನ್ನು ಮಾಡಿದ ಜನರಲ್ಲಿ ಒಳಗೊಳಗೆ ಪಾಪಪ್ರಜ್ಞೆಗಳಿರುತ್ತಿದ್ದವು. ಸಮಾಜ ಅವರನ್ನು ಅಸ್ಪಶ್ಯರಂತೆ ನೋಡುತ್ತಿತ್ತು. ರಾಜಕಾರಣಿಗಳು ಒಳಗೊಳಗೇ ಅವರೊಂದಿಗೆ ಸಂಬಂಧ ಹೊಂದಿದ್ದರೂ, ಬಹಿರಂಗವಾಗಿ ಅವರ ಜೊತೆಗೆ ಅಂತರವನ್ನು ಕಾಯುತ್ತಿದ್ದರು.

ವಿಪರ್ಯಾಸವೆಂದರೆ, ಇಂದು ಅಂತರ ಕಾಯುವುದು ಪಕ್ಕಕ್ಕಿರಲಿ, ಅವರನ್ನು ಬಹಿರಂಗವಾಗಿ ಸನ್ಮಾನಿಸಿ; ಅವರು ಎಸಗಿದ ಕೃತ್ಯವನ್ನು ಸಾಧನೆಯನ್ನಾಗಿ ಸರಕಾರ ಬಿಂಬಿಸುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಸನ್ಮಾನಗಳನ್ನು ತಮ್ಮದಾಗಿಸಿಕೊಳ್ಳಲು ಹೆಚ್ಚು ಹೆಚ್ಚು ಯುವಕರು ಮುಂದೆ ಬರುವಲ್ಲಿ ಸಂಶಯವಿಲ್ಲ. ಆರೋಪಿಗಳು ಪೂರ್ಣ ಪ್ರಮಾಣದಲ್ಲಿ ಆರೋಪ ಮುಕ್ತರಾಗಿದ್ದಿದ್ದರೆ ಸಚಿವರ ಕೃತ್ಯವನ್ನು ಸಮರ್ಥಿಸಿಕೊಳ್ಳಬಹುದಿತ್ತೇನೋ. ಇಷ್ಟಕ್ಕೂ ಇವರನ್ನು ಸನ್ಮಾನಿಸುವ ಮೂಲಕ, ಕೊಲೆ ಆರೋಪ ಹೊತ್ತವರು ಒಂದು ನಿರ್ದಿಷ್ಟ ಪಕ್ಷಕ್ಕೆ ಸಂಬಂಧಿಸಿದ ಕಾರ್ಯಕರ್ತರು ಎನ್ನುವುದನ್ನು ಸರಕಾರವೇ ಘೋಷಿಸಿದಂತಾಯಿತು. ಇಲ್ಲವಾದರೆ ಜೈಲಿನಿಂದ ಬಿಡುಗಡೆಯಾಗಿರುವ ಈ ಕ್ರಿಮಿನಲ್‌ಗಳನ್ನು ಸನ್ಮಾನಿಸುವ ಉದ್ದೇಶವಾದರೂ ಏನು? ನ್ಯಾಯಾಲಯ ಹೇಳುತ್ತದೆ ‘‘ಸಂತ್ರಸ್ತರನ್ನು ಯಾವುದೇ ಧರ್ಮದ ಜೊತೆಗೆ ತಳಕು ಹಾಕಬಾರದು’’ ಎಂದು. ಆದರೆ ಬಿಜೆಪಿ ಸಚಿವನ ಕೃತ್ಯವೇ, ಹೇಗೆ ಗೋರಕ್ಷಕರು ಒಂದು ಧರ್ಮದ ಜನರನ್ನೇ ಗುರಿಯಾಗಿಟ್ಟುಕೊಂಡು ಹಿಂಸೆಯನ್ನು ಎಸಗುತ್ತಿದ್ದಾರೆ ಎನ್ನುವುದನ್ನು ಹೇಳುತ್ತಿದೆ.

ಗೋರಕ್ಷಕರ ಅಂತಿಮ ಉದ್ದೇಶ ಒಂದು ನಿರ್ದಿಷ್ಟ ಧರ್ಮದ ಜನರಲ್ಲಿ ಭೀತಿಯನ್ನು ಬಿತ್ತುವುದು ಮತ್ತು ಜನರನ್ನು ಭಾವನಾತ್ಮಕವಾಗಿ ಉದ್ವಿಗ್ನಗೊಳಿಸುವುದು. ಈ ಕೃತ್ಯದ ಲಾಭವನ್ನು ಪಡೆದುಕೊಳ್ಳುತ್ತಿರುವುದು ಒಂದು ನಿರ್ದಿಷ್ಟ ಪಕ್ಷವೇ ಆಗಿದೆ. ಆದುದರಿಂದಲೇ ಆ ಪಕ್ಷದ ಕೇಂದ್ರ ಸಚಿವರು ಕೊಲೆ ಆರೋಪಿಗಳಿಗೆ ಬಹಿರಂಗವಾಗಿ ಸನ್ಮಾನ ಮಾಡಿದ್ದಾರೆ. ಸುಪ್ರೀಂಕೋರ್ಟ್‌ಗೆ ನಕಲಿ ಗೋರಕ್ಷಕರ ಹಿಂಸಾಚಾರದ ಬಗ್ಗೆ ನಿಜಕ್ಕೂ ಕಳವಳವಿದ್ದರೆ ಅದು ಮೊದಲು ಕೇಂದ್ರ ಸರಕಾರಕ್ಕೆ ಸೂಚನೆಗಳನ್ನು ನೀಡಬೇಕು. ಜೊತೆಗೆ, ಗೋರಕ್ಷಕರ ಪಡೆಯನ್ನು ನಿಷೇಧಿಸಲು ಸ್ಪಷ್ಟ ಕ್ರಮಗಳನ್ನು ಸೂಚಿಸಬೇಕು. ಇಲ್ಲವಾದರೆ ಈ ದೇಶ ಕೊಲೆ, ದರೋಡೆಗಳನ್ನೇ ಸಂಸ್ಕೃತಿಯಾಗಿ ಪರಿವರ್ತಿಸಿಕೊಳ್ಳುವುದಕ್ಕೆ ಹೆಚ್ಚು ದಿನಗಳು ಬೇಡ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News