ಚಿಕ್ಕಮಗಳೂರು: ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮಹೇಂದ್ರ ಆಯ್ಕೆ
ಚಿಕ್ಕಮಗಳೂರು, ಜು.9: ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿಸಮಿತಿ ಅಧ್ಯಕ್ಷರಾಗಿ ಬೇಲೇನಹಳ್ಳಿ ಕ್ಷೇತ್ರದ ಕೆ.ಹೆಚ್.ಮಹೇಂದ್ರ ಆಯ್ಕೆಯಾಗಿದ್ದಾರೆ.
ಜಿಪಂ ಸಭಾಂಗಣದಲ್ಲಿ ಸೋಮವಾರ ಮಾಜಿ ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ರವೀಂದ್ರ ಬೆಳವಾಡಿ ಅವರು ಕೆ.ಎಚ್.ಮಹೇಂದ್ರ ರವರ ಹೆಸರನ್ನು ಸೂಚಿಸಿದಾಗ ಸದಸ್ಯೆ ಅನುಸೂಯಾ ಗೋಪಿಕೃಷ್ಣ ಅನುಮೋದಿಸಿದರು. ಜಿಪಂ ಉಪ ಕಾರ್ಯದರ್ಶಿ ಅಧ್ಯಕ್ಷರ ಆಯ್ಕೆಯನ್ನು ಎಲ್ಲರ ಸಹಮತ ಪಡೆದು ಪ್ರಕಟಿಸಿದರು.
ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ಕೆ.ಹೆಚ್.ಮಹೇಂದ್ರ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದಾಗ ಉತ್ತಮ ಸ್ಥಾನಕ್ಕೆ ಹೋಗಬಹುದು. ಪಕ್ಷ ನೀಡಿದ ಜವಾಬ್ದಾರಿ ಮತ್ತು ನನ್ನ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿ ಶಾಸಕರು ಮತ್ತು ಜಿಲ್ಲಾ ಪಂಚಾಯತ್ ನ ಎಲ್ಲಾ ಸದಸ್ಯರೊಂದಿಗೆ ಚರ್ಚಿಸಿ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಕೃಷ್ಣಪ್ಪ, ಮಾತನಾಡಿ ಕೃಷಿ ಮತ್ತು ಕೈಗಾರಿಕೆ ಇಲಾಖೆಯ ಸ್ಥಾಯಿಸಮಿತಿ ಅಧ್ಯಕ್ಷ ಮಹೇಂದ್ರ ರವರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ರೈತರಿಗೆ ಮತ್ತು ಸ್ವ ಉದ್ಯೋಗ ಮಾಡುವವರಿಗೆ ಹೆಚ್ಚಿನ ಸಹಕಾರ ಮಾಡಬೇಕೆಂದರು. ಜಿಲ್ಲೆಯ ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿಯಲ್ಲಿ ಹೆಚ್ಚಿನ ಮಳೆಯಾಗಿ ರಸ್ತೆ, ಸೇತುವೆಗಳು ಹಾಳಾಗಿವೆ. ಕಡೂರು, ತರೀಕೆರೆ, ಚಿಕ್ಕಮಗಳೂರಿನ ಕೆಲವು ಭಾಗದಲ್ಲಿ ಮಳೆ ಇಲ್ಲದೆ ಜಿಲ್ಲೆಯಲ್ಲಿ ಅತಿವೃಷ್ಠಿ, ಅನಾವೃಷ್ಠಿಯಾಗಿದೆ. ಶಾಸಕರು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರುಗಳು ಮುಖ್ಯಮಂತ್ರಿಗಳನ್ನು ಬೇಟಿಮಾಡಿ ವಿಶೇಷ ಅನುಧಾನ ನೀಡುವಂತೆ ಮನವಿ ಮಾಡಲಾಗುವುದು ಎಂದರು.
ಜಿಲ್ಲಾಪಂಚಾಯತ್ ಉಪಾಧ್ಯಕ್ಷ ಕೆ.ಆರ್.ಆನಂದಪ್ಪ ಮಾತನಾಡಿ, ಕೃಷಿ ಮತ್ತು ಕೈಗಾರಿಕಾ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯಿಂದ ಜನ ಸಾಮಾನ್ಯರಿಗೆ ಇಲಾಖೆಯ ಮಾಹಿತಿಯನ್ನು ತಲುಪಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ನೂತನ ಅಧ್ಯಕ್ಷರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಇಲಾಖೆಯ ಮಾಹಿತಿಯನ್ನು ಜನಸಾಮಾನ್ಯರಿಗೆ ತಿಳಿಸುವುದರ ಜೊತೆಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರ್ಕಾರದ ಸೌಲಭ್ಯಗಳನ್ನು ನೀಡಬೇಕೆಂದರು.
ಈ ಸಂದರ್ಭ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಮಂಜುನಾಥ್, ಉಪಾಧ್ಯಕ್ಷ ಪ್ರೇಮ್‍ಕುಮಾರ್, ವಕ್ತಾರ ವರಸಿದ್ಧಿ ವೇಣುಗೋಪಾಲ್, ಜಿಪಂ ಸದಸ್ಯ ಸೋಮಶೇಖರ್, ಹಿರಿಗಯ್ಯ, ಸ್ಥಾಯಿ ಸಮಿತಿಯ ಸದಸ್ಯ ಬೆಳವಾಡಿ ರವೀಂದ್ರ, ಕೆ.ಆರ್.ಪ್ರಭಾಕರ್, ಕೆ.ಆರ್.ಮಹೇಶ್ ಒಡೆಯರ್, ಪ್ರೇಮ ಮಂಜುನಾಥ್, ಅನುಸೂಯ ಗೋಪಿಕೃಷ್ಣ, ಸುಧಾಯೋಗೀಶ್, ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.