ಶಿವಮೊಗ್ಗ: ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ವಿದ್ಯಾರ್ಥಿನಿ
ಶಿವಮೊಗ್ಗ,ಜು.9: ಶಿವಮೊಗ್ಗ ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ವರ್ಷಧಾರೆಯ ಆರ್ಭಟ ಮುಂದುವರಿದಿದೆ. ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಗಳ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಸೋಮವಾರ ಬೆಳಿಗ್ಗೆ ತೀರ್ಥಹಳ್ಳಿ ತಾಲೂಕಿನಲ್ಲಿ ಶಾಲಾ ಬಾಲಕಿಯೋರ್ವಳು ಹಳ್ಳದಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಗುಡ್ಡೆಕೆರೆ ಬಳಿಯ ಕೆಂದಾಳುಬೈಲುವಿನ ದೊಡ್ಲುಮನೆ ಪ್ರದೇಶ ಬಳಿ ಕಾಲು ಸೇತುವೆ ದಾಟಲು ಯತ್ನಿಸಿದ ಶಾಲಾ ಬಾಲಕಿಯೋರ್ವಳು ನೀರುಪಾಲಾಗಿರುವ ಘಟನೆ ನಡೆದಿದೆ. ಆಶಿಕಾ (14) ನೀರುಪಾಲಾದ ಬಾಲಕಿ ಎಂದು ಗುರುತಿಸಲಾಗಿದೆ.
ಬಾಲಕಿಯು ಗುಡ್ಡೇಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ 9 ನೇ ತರಗತಿ ಅಭ್ಯಾಸ ಮಾಡುತ್ತಿದ್ದಳು. ಧಾರಾಕಾರ ಮಳೆಯ ಕಾರಣದಿಂದ ಸೋಮವಾರ ತೀರ್ಥಹಳ್ಳಿ ತಾಲೂಕಿನ ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಮಾಹಿತಿ ತಿಳಿಯದ ಬಾಲಕಿಯು ಎಂದಿನಂತೆ ಶಾಲೆಗೆ ತೆರಳಿದ್ದಳು. ರಜೆಯಿರುವ ವಿಷಯ ಗೊತ್ತಾಗಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಹಳ್ಳದ ಮೇಲಿನ ಕಾಲು ಸೇತುವೆ ದಾಟುವ ವೇಳೆ, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಬಾಲಕಿಯು ತನ್ನ ತಾಯಿಯೊಂದಿಗೆ ಮನೆಗೆ ಆಗಮಿಸುವ ವೇಳೆ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೊಚ್ಚಿ ಹೋಗಿರುವ ಬಾಲಕಿಯ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸಂಜೆಯವರೆಗೂ ಬಾಲಕಿಯ ಸುಳಿವು ಲಭ್ಯವಾಗಿಲ್ಲ. ನಿರಂತರವಾಗಿ ಸುರಿಯುತ್ತಿರುವ ಮಳೆಯು ಶೋಧ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ.
ಆರ್ಭಟ: ಜಿಲ್ಲೆಯ ಅರೆ ಮಲೆನಾಡು ಭಾಗಗಳಲ್ಲಿ ಸೋಮವಾರ ಮಳೆಯ ಆಬ್ಬರ ಕಡಿಮೆಯಾಗಿತ್ತು. ಆದರೆ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ನಿರಂತರ ವರ್ಷಧಾರೆ ಮುಂದುವರಿದಿದೆ.
ಅಪಾಯ ಮಟ್ಟ: ಜಿಲ್ಲೆಯ ಜೀವ ನದಿಗಳಾದ ತುಂಗಾ, ಭದ್ರಾ, ಶರಾವತಿ, ದಂಡಾವತಿ, ಮಾಲತಿ, ಕುಮದ್ವತಿ ನದಿಗಳು ಮೈದುಂಬಿ ಹರಿಯಲಾರಂಭಿಸಿವೆ. ತುಂಗಾ ನದಿಯು ಹಲವೆಡೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತೀರ್ಥಹಳ್ಳಿ ಹಾಗೂ ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಮೈದುಂಬಿ ಹರಿಯುತ್ತಿರುವುದು ಕಂಡುಬರುತ್ತಿದೆ.
ಒಂದೇ ದಿನ ಲಿಂಗನಮಕ್ಕಿಗೆ 4 ಅಡಿ ನೀರು
ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಮುಂದುವರಿದಿರುವುದರಿಂದ ಶರಾವತಿ ನದಿ ಮೈದುಂಬಿ ಹರಿಯಲಾರಂಭಿಸಿದೆ. ಇದರಿಂದ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿಗೆ ನಿರಂತರವಾಗಿ ಒಳಹರಿವಿನಲ್ಲಿ ಏರಿಕೆ ಕಂಡುಬರಲಾರಂಭಿಸಿದ್ದು, ಸೋಮವಾರ ಬೆಳಿಗ್ಗೆ 8 ಗಂಟೆಯ ಮಾಹಿತಿಯಂತೆ ಕಳೆದ 24 ಗಂಟೆ ಅವಧಿಯಲ್ಲಿ ಜಲಾಶಯದಲ್ಲಿ ನಾಲ್ಕು ಅಡಿಯಷ್ಟು ನೀರು ಸಂಗ್ರಹವಾಗಿದೆ.
ಶಾಲೆಗಳಿಗೆ ರಜೆ ಘೋಷಣೆ
ಎಡೆಬಿಡದೆ ಮಳೆಯಾಗುತ್ತಿರುವ ತೀರ್ಥಹಳ್ಳಿ ತಾಲೂಕಿನ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿತ್ತು. ಪರಿಸ್ಥಿತ ಅವಲೋಕಿಸಿ ಮಂಗಳವಾರ ಕೂಡ ರಜೆ ಮುಂದುವರಿಸಲು ಸ್ಥಳೀಯ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಉಳಿದಂತೆ ಹೊಸನಗರ ತಾಲೂಕಿನ ನಗರ ಹೋಬಳಿ ಭಾಗದ ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಸ್ಥಳೀಯ ಪರಿಸ್ಥಿತಿ ಗಮನಿಸಿ ಶಾಲೆಗಳಿಗೆ ರಜೆ ಘೋಷಣೆಯ ನಿರ್ಧಾರ ಕೈಗೊಳ್ಳುವಂತೆ ತಾಲೂಕು ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಚ್ಛಾಡೋ ಅವರು ತಿಳಿಸಿದ್ದಾರೆ.