ಕೊಡಗಿನಲ್ಲಿ ಮುಂದುವರೆದ ಮಳೆಯ ಅಬ್ಬರ: ವಿವಿಧೆಡೆ ಗುಡ್ಡ, ಮನೆ ಕುಸಿತ

Update: 2018-07-09 14:06 GMT

ಮಡಿಕೇರಿ, ಜು.9: ಕೊಡಗು ಜಿಲ್ಲೆಯಲ್ಲಿ ಪುನರ್ವಸು ಮಳೆಯ ಅಬ್ಬರ ಮುಂದುವರೆದಿದ್ದು, ವಿವಿಧೆಡೆ ಬರೆ, ಮನೆ ಕುಸಿತ ಹಾಗೂ ಮರಗಳು ಬಿದ್ದ ಘಟನೆ ನಡೆದಿದೆ.

ಕಾವೇರಿಯ ಕ್ಷೇತ್ರ ತಲಕಾವೇರಿ ಮತ್ತು ಭಾಗಮಂಡಲ ವಿಭಾಗಗಳಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದ್ದರೂ, ಅಲ್ಲಿನ ಅಯ್ಯಂಗೇರಿ ರಸ್ತೆಯ ಮೇಲಿನ ಪ್ರವಾಹದ ನೀರು ಹರಿಯುತ್ತಿರುವುದರಿಂದ ಕಳೆದ ಮೂರು ದಿನಗಳಿಂದ ಸಂಪರ್ಕ ಕಡಿತಗೊಂಡಿದೆ. ಮಡಿಕೇರಿ ರಸ್ತೆಯಲ್ಲಿ ದಿನದ ಹಿಂದೆ ಪ್ರವಾಹದ ನೀರು ಆವರಿಸಿದ್ದು, ಇಂದು ಇಳಿದಿದ್ದರಿಂದ ವಾಹನ ಸಂಚಾರ ಸುಗಮವಾಗಿದೆ.

ಕಾವೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದೊಂದು ದಿನದ ಅವಧಿಯಲ್ಲಿ 5 ಇಂಚಿಗಿಂತಲೂ ಹೆಚ್ಚಿನ ಮಳೆಯಾಗಿದೆ. ಇದಕ್ಕೆ ಹೋಲಿಸಿದಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಿನ್ನೆ ಬೆಳಗ್ಗಿನಿಂದ ಇಂದು ಬೆಳಗ್ಗಿನವರೆಗೆ 6 ಇಂಚಿನಷ್ಟು ಮಳೆ ದಾಖಲಾಗಿದೆ. ನಗರದ ಚರಂಡಿಗಳು ಉಕ್ಕಿ ಹರಿಯುತ್ತಿದ್ದು, ಓಂಕಾರೇಶ್ವರ ದೇವಸ್ಥಾನದ ಪುಷ್ಕರಣಿಯ ನೀರಿನ ಪ್ರಮಾಣ ಹೆಚ್ಚಾಗಿ ಆವರಣದಿಂದ ಹೊರಕ್ಕೆ ಹರಿಯಲಾರಂಭಿಸಿದೆ. ಮಡಿಕೇರಿಯ ಎವಿ ಶಾಲೆಯ ಬಳಿಯ ರಶ್ಮಿಪ್ರದೀಪ್ ಎಂಬವರ ಮನೆಯೊಂರ ಭಾಗ ಭಾನುವಾರ ರಾತ್ರಿ ಕುಸಿದಿದೆ. ಈ ಸಂದರ್ಭ ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತ್ಯಾಗರಾಜ ಕಾಲೋನಿಯ ಅಬೂಬಕ್ಕರ್ ಹಾಗೂ ಗದ್ದಿಗೆ ಹಿಂಭಾಗದ ನಬೀಸಾ ಅವರ ಮನೆ ಮತ್ತು ತಡೆಗೋಡೆಗೆ ಹಾನಿಯಾಗಿದೆ.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ನಗರ ಘಟಕದ ಅಧ್ಯಕ್ಷರಾದ ಖಲೀಲ್, ಪ್ರಮುಖರಾದ ಬಷೀರ್, ಉಮ್ಮರ್, ನಾಸಿರ್, ಮಹಮ್ಮದ್ ಮತ್ತಿತರರು ಹಾನಿಗೀಡಾದ ಬಡಾವಣೆಗಳಿಗೆ ಭೇಟಿ ನೀಡಿ ಹಾನಿಯಾದ ಮನೆಗಳಿಗೆ ಪ್ಲಾಸ್ಟಿಕ್ ಶೀಟ್‍ಗಳನ್ನು ವಿತರಿಸುವುದೊಂದಿಗೆ ಶ್ರಮದಾನವನ್ನು ಮಾಡಿದರು.

ನಗರದ ಮಂಗಳೂರು ರಸ್ತೆಯ ಮದೆನಾಡು ಗ್ರಾಮದ ಬಳಿ ಮುಖ್ಯ ರಸ್ತೆಯ ಪಾರ್ಶ್ವದಲ್ಲಿ ಬರೆ ಕುಸಿತ ಸಂಭವಿಸಿದೆ. ಇದನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ರಸ್ತೆಯನ್ನು ಸುಗಮಗೊಳಿಸಲಾಗಿದೆ. ಕಡಗದಾಳು, ಕಗ್ಗೋಡ್ಲು, ಬೋಯಿಕೇರಿ ಭಾಗದಲ್ಲಿ ರಸ್ತೆಗೆ ಮರ ಬಿದ್ದು, ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮಡಿಕೇರಿಯ ನಾಪೋಕ್ಲು, ದಕ್ಷಿಣ ಕೊಡಗಿನ ಶ್ರೀಮಂಗಲ, ಬಾಳೆಲೆ, ಪೊನ್ನಂಪೇಟೆ ವಿಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಲಕ್ಷ್ಮಣತೀರ್ಥ ನದಿ ಉಕ್ಕಿ ಹರಿಯುತ್ತಿದೆ. 

ಸೋಮವಾರಪೇಟೆಯಲ್ಲಿ ಭಾರೀ ಮಳೆ
ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಅಲ್ಲಲ್ಲಿ ಹಾನಿ ಸಂಭವಿಸಿದೆ.

ಚೌಡ್ಲು ಗ್ರಾ.ಪಂ ವ್ಯಾಪ್ತಿಯ ಆಲೇಕಟ್ಟೆ ರಸ್ತೆಯಿಂದ ಗಾಂಧಿ ನಗರಕ್ಕೆ ತೆರಳುವ ರಸ್ತೆಯಲ್ಲಿ ಅಬ್ದುಲ್ ಅಜೀಜ್ ಎಂಬವರ ಮನೆಯ ಸಮೀಪ ಬರೆ ಕುಸಿಯುತ್ತಿದ್ದು, ರಸ್ತೆಯೇ ಇಲ್ಲದಂತಾಗುವ ಆತಂಕ ಎದುರಾಗಿದೆ. ಈ ರಸ್ತೆ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗಕ್ಕೆ ಸೇರಿದ್ದು, ಸ್ಥಳೀಯರು ಈ ಹಿಂದೆಯೇ ಅನೇಕ ಬಾರಿ ಇಲಾಖೆ ತಿಳಿಸಿ ರಸ್ತೆಗೆ ತಡೆಗೋಡೆ ಕಟ್ಟುವಂತೆ ಆಗ್ರಹಿಸಿದ್ದರು. ಆದರೆ ಇದುವರೆಗೆ ಅನುದಾನ ಕಲ್ಪಿಸಿಲ್ಲ ಎಂಬ ದೂರು ಕೇಳಿಬರುತ್ತಿದೆ. ಈ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಾಹನಗಳು, ಶಾಲಾ ವಾಹನಗಳು ಸಂಚರಿಸುತ್ತವೆ. ಮುಂದೆ ಅನಾಹುತವಾದರೆ ಜಿ.ಪಂ ಇಂಜಿನಿಯರಿಂಗ್ ವಿಭಾಗ ನೇರ ಹೊಣೆ ಹೊರಬೇಕು ಎಂದು ಎಚ್ಚರಿಸಿದ್ದಾರೆ.

ಶಾಂತಳ್ಳಿ ಹೋಬಳಿಯ ಬಹುತೇಕ ಕಡೆ ಮಳೆ ಸುರಿಯುತ್ತಿದ್ದು ನದಿ ತೊರೆಗಳು ತುಂಬಿ ಹರಿಯುತ್ತಿವೆ. ಗದ್ದೆ ನಾಟಿಗೆ ಹದ ಮಾಡುತ್ತಿದ್ದ ಸಂದರ್ಭ ಗದ್ದೆಯಲ್ಲಿ ನೀರು ಉಕ್ಕಿದ ಹಿನ್ನೆಲೆಯಲ್ಲಿ  ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News