ಮಲೆನಾಡಿನಲ್ಲಿ ನಿಲ್ಲದ ವರುಣನ ಆರ್ಭಟ: ಸತತ ನಾಲ್ಕನೆ ದಿನವೂ ಧಾರಾಕಾರ ಮಳೆ

Update: 2018-07-09 14:38 GMT

ಚಿಕ್ಕಮಗಳೂರು, ಜು.9: ಜಿಲ್ಲೆಯ ಮಲೆನಾಡಿನಲ್ಲಿ ಕಳೆದ ಶುಕ್ರವಾರದಿಂದ ಆರಂಭವಾಗಿದ್ದ ಮಳೆಯ ಆರ್ಭಟ ಸತತ ನಾಲ್ಕನೇ ದಿನವೂ ಮುಂದುವರೆದಿದ್ದು, ಬೆಳಗೆ ಮತ್ತು ಸಾಯಂಕಾಲದ ಹೊತ್ತಿನಲ್ಲಿ ಮಲೆನಾಡು ಭಾಗದಲ್ಲಿ ಎಡಬಿಡದೆ ಮಳೆಯಾಗುತ್ತಿದೆ.

ಭಾರೀ ಮಳೆಯಿಂದಾಗಿ ತುಂಗಾ, ಭದ್ರಾ, ಹೇಮಾವತಿ ನದಿಗಳು ಉಕ್ಕಿ ಹರಿಯುತ್ತಿವೆ. ಮೂಡಿಗೆರೆ ತಾಲೂಕಿನಲ್ಲಿ ಭದ್ರಾನದಿ ಉಕ್ಕಿ ಹರಿಯುತ್ತಿರುವುದರಿಂದ ಹೊಳೆಕುಡಿಗೆ ಗ್ರಾಮದಲ್ಲಿ ವಾಸವಾಗಿರುವ ಐದು ಕುಟುಂಬಗಳು ಒಂದು ವಾರದಿಂದ ಹೊರ ಪ್ರಪಂಚದ ಸಂಪರ್ಕ ಕಡಿದುಕೊಂಡಂತಹ ಸ್ಥಿತಿ ನಿರ್ಮಾಣವಾಗಿದ್ದು, ಅಕ್ಷರಶಃ ದ್ವೀಪದಂತಾಗಿದೆ.

ರವಿವಾರ ಮಲೆನಾಡಿನಲ್ಲಿ ಧಾರಾಕಾರ ಮಳೆಯ ಹೊತ್ತು ಮಳೆ ಕೊಂಚ ಬಿಡುವು ನೀಡಿತ್ತು. ಸೋಮವಾರ ಬೆಳಗೆಯಿಂದಲೇ ಅಬ್ಬರಿಸಿದ ಮಳೆ ಸಂಜೆಯಾಗುತ್ತಲೇ ಬಿರುಸುಗೊಂಡಿತ್ತು. ಸೋಮವಾರದ ಮಳೆಯಿಂದಾಗಿ ಕಳಸದ ಹೆಬ್ಬಾಳೆ ಸೇತುವೆ ಮತ್ತೆ ಮುಳುಗುವ ಭೀತಿ ಪ್ರವಾಸಿಗರನ್ನು ಕಾಡುತ್ತಿದ್ದು, ನದಿಯಲ್ಲಿ ನೀರಿನ ಹರಿವು ತೀವ್ರ ಗೊಂಡಿದೆ. ತುಂಗಾನದಿಯ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ. ಶೃಂಗೇರಿ ತಾಲೂಕಿನ ಸುತ್ತಮುತ್ತಲ ಹಳ್ಳಕೊಳ್ಳಗಳ ನೀರಿನ ಹರಿವು ಜಾಸ್ತಿಯಾಗಿದೆ. ತಾಲೂಕಿನ ಮೆಣಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಕ್ರಹಳ್ಳ ಸೇತುವೆ ನದಿಯಲ್ಲಿ ಮುಳುಗಿದೆ. ಗ್ರಾಮದ ಜನತೆ ಶೃಂಗೇರಿಯನ್ನು ತಲುಪಲು ಪರ್ಯಾಯ ಮಾರ್ಗವನ್ನು ಬಳಸುವಂತಾಗಿದೆ. ಎನ್.ಆರ್.ಪುರ ಹಾಗೂ ಕೊಪ್ಪ ತಾಲೂಕುಗಳಲ್ಲಿಯೂ ಮಳೆ ಬೆಳಗಿನಿಂದಲೂ ಬರುತ್ತಿದೆ. ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕಿನ ವಿವಿದೆಡೆಗಳಲ್ಲಿ ಸೋಮವಾರ ಬೆಳಗ್ಗೆಯಿಂದ ಸಂಜೆಯ ವರೆಗೂ ಸಾಧಾರಣ ಮಳೆಯಾಗುತ್ತಿದೆ. ಬಯಲು ಸೀಮೆ ತಾಲೂಕುಗಳಾದ ಕಡೂರು ಮತ್ತು ತರೀಕೆರೆ ತಾಲೂಕು ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಸಾಧಾರಣ ಮಳಯಾಗಿದೆ. 

ಶೃಂಗೇರಿ ತಾಲೂಕಿನಲ್ಲಿ ಮಳೆಯ ಪ್ರಮಾಣ ರವಿವಾರಕ್ಕಿಂತ ಜಾಸ್ತಿಯಾಗಿದ್ದು, ಸೋಮವಾರ ಕಿಗ್ಗಾ-143.5ಮಿ.ಮೀ ಅತಿ ಹೆಚ್ಚು ಮಳೆಯಾದ ಬಗ್ಗೆ ವರದಿಯಾಗಿದೆ. ಕೆರೆಕಟ್ಟೆ-94.0ಮಿ.ಮೀ ಮತ್ತು ಶೃಂಗೇರಿ 134.0ಮಿ.ಮೀ ಮಳೆಯಾದ ಬಗ್ಗೆ ವರದಿಯಾಗಿದೆ. ಶಾಲೆಗಳಿಗೆ ರಜಾ ನೀಡಲಾಗಿದೆ. ತುಂಗಾ ನದಿಯ ನೀರಿನ ಹರಿವು  ಏರಿಕೆ ಕಂಡಿದೆ. ತಾಲೂಕಿನಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಮೆಣಸೆ ಗ್ರಾ.ಪಂ ವ್ಯಾಪ್ತಿಯ ಕಿಕ್ರೆ ಹಳ್ಳವುಲ ತುಂಬಿ ಹರಿದು ರಸ್ತೆ ಜಲಾವೃಗೊಂಡಿದೆ. ಕಿಕ್ರೆಯ ಅಸುಪಾಸಿನ ನಿವಾಸಿಗಳು ಪಟ್ಟಣಕ್ಕೆ ಬರಲು ಕೆರೆಮನೆ-ಸಸಿಮನೆ ರಸ್ತೆಯನ್ನು ಅವಲಂಬಿಸಬೇಕಾಗಿದೆ. ತಾಲೂಕಿನಲ್ಲಿ 7018.6ಮಿ.ಮೀ(81ಇಂಚು) ಮಳೆಯಾಗಿದ್ದು ಅಡಿಕೆತೋಟಗಳಿಗೆ ಕೊಳೆರೋಗ ಎದುರಾಗುವ ಭೀತಿ ಎದುರಾಗಿದೆ. ಅಡಿಕೆ ತೋಟಗಳಿಗೆ ಹಲವು ಕಡೆ ಜೌಷಧಿ ಸಿಂಪಡಣೆಯ ಕಾರ್ಯ ಸ್ಥಗಿತಗೊಂಡಿದೆ. ಭತ್ತದ ಗದ್ದೆಗಳಿಗೆ ಸಸಿಮುಡಿ ತಯಾರಿಸಲು ತೊಂದರೆ ಎದುರಾಗಿದೆ. 

ಮಳೆಯಿಂದಾಗಿ ಮಲೆನಾಡಿನ ಎಸ್ತೆ ಬದಿಗಳ ಸಣ್ಣಪುಟ್ಟ ಧರೆಗಳು ಕುಸಿತಗೊಂಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಕೊಪ್ಪ ತಾಲೂಕಿನ ನಾರ್ವೇ ಸಮೀಪದಲ್ಲಿನ ಕೊಪ್ಪ-ಜಯಪುರ ಸಂಪರ್ಕದ ರಾಜ್ಯ ಹೆದ್ದಾರಿಗೆ ಸೋಮವಾರ ಬೆಳಿಗ್ಗೆ ತುಂಗಾ ನದಿಯ ನೀರು ನುಗ್ಗಿದ್ದು, ಸುಮಾರು 1 ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಬಂದ್ ಆಗಿತ್ತು. ಇನ್ನು ಕೊಪ್ಪ ತಾಲೂಕಿನ ಜಯಪುರ ಸಮೀಪದ ಕೂಳೂರು ಎಂಬಲ್ಲಿ ಮಳೆಯ ನೀರಿಗೆ ರಸ್ತೆ ಬದಿಯ ಚರಂಡಿ ಮಣ್ಣು ಕೊಚ್ಚಿ ಹೋಗಿ ಕಾರೊಂದು ಪಲ್ಟಿಯಾದ ಘಟನೆ ರವಿವಾರ ಸಂಜೆ ನಡೆದಿದ್ದು, ಕಾರಿನಲ್ಲಿದ್ದ ಪ್ರವಾಸಿಗರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಟ್ಟಿನಲ್ಲಿ ಮಲೆನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಆ ಭಾಗದ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಬ್ಗಲ್ ಗ್ರಾಪಂ ವ್ಯಾಪ್ತಿಯ ಹೊಳೆಕುಡಿಗೆ ಗ್ರಾಮಕ್ಕೆ ಸಂಪರ್ಕ ರಸ್ತೆಯಿಲ್ಲದಿರುವುದರಿಂದ ಗ್ರಾಮದಲ್ಲಿ ವಾಸಿಸುತ್ತಿರುವ ಐದು ಮನೆಗಳ ಸದಸ್ಯರು ಗ್ರಾಮದಿಂದ ಹೊರಬರಲು ಭದ್ರಾನದಿಯನ್ನು ದಾಟಿ ಬರಬೇಕಿದೆ. ಭದ್ರಾನದಿಗೆ ಸೇತುವೆ ನಿರ್ಮಾಣ ಮಾಡುವಂತೆ ಕಳೆದ 40 ವರ್ಷಗಳಿಂದ ಸರಕಾರ ಮುಂದಿಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಈ ಭಾಗದ ಜನರು 40 ವರ್ಷಗಳಿಂದ ತೆಪ್ಪವನ್ನೇ ಆಶ್ರಯಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಎಡಬಿಡದೆ ಮಳೆಯಾಗುತ್ತಿರುವುದರಿಂದ ಭದ್ರಾನದಿ ಉಕ್ಕಿ ಹರಿಯುತ್ತಿದ್ದು, ನದಿಯಲ್ಲಿ ತೆಪ್ಪ ಬಳಕೆ ಅಸಾಧ್ಯವಾಗಿದೆ. ಈ ಕಾರಣದಿಂದ ಈ ಗ್ರಾಮ ಹೊರ ಪ್ರಪಂಚದ ಸಂಪರ್ಕವನ್ನೇ ಕಳೆದುಕೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News