ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ: ಲೇಖಕ ಸಲೀಮ್ ಖಾನ್

Update: 2018-07-09 15:56 GMT

ಬೆಂಗಳೂರು, ಜು.9: ಸತ್ಯಕ್ಕಾಗಿ ಧ್ವನಿಯೆತ್ತುವವರ ಸದ್ದಡಗಿಸಲಾಗುತ್ತಿದೆ. ದೇಶದಲ್ಲಿ ಅಂದು ಘೋಷಿತ ತುರ್ತುಪರಿಸ್ಥಿತಿ ಇದ್ದರೆ ಇಂದು ಅಘೋಷಿತ ತುರ್ತುಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಮುಂಬೈನ ಲೇಖಕ ಡಾ.ಸಲೀಮ್ ಖಾನ್ ಅಭಿಪ್ರಾಯಪಟ್ಟರು.

ಸೋಮವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ದಾರುಸ್ಸಲಾಮ್ ಕಟ್ಟಡದ ಬಿಫ್ಟ್ ಸಭಾಂಗಣದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆ ಆಯೋಜಿಸಿದ್ದ ‘ನಮ್ಮ ದೇಶದ ಪ್ರಸ್ತುತ ಪರಿಸ್ಥಿತಿ’ ಕುರಿತು ಮುಸ್ಲಿಮ್ ಮಾಧ್ಯಮ ಪ್ರತಿನಿಧಿಗಳು ಹಾಗೂ ಬರಹಗಾರರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿದ ಸಂದರ್ಭದಲ್ಲೇ ಧೀರೂಭಾಯಿ ಅಂಬಾನಿ ಪ್ಲಾಂಟ್ ಸ್ಥಾಪಿಸಿದರು. ಇಂದಿರಾಗಾಂಧಿ ಜೊತೆ ಅಂಬಾನಿಗೆ ಆತ್ಮೀಯತೆ ಇತ್ತು. ಕಾಂಗ್ರೆಸ್ ಆಡಳಿತಾವಧಿಯಲ್ಲೇ ಅಂಬಾನಿ ಉದ್ಯಮಗಳು ಬಹಳ ಎತ್ತರಕ್ಕೆ ಬೆಳೆದವು ಎಂದು ಅವರು ಹೇಳಿದರು.

ಕೇಂದ್ರ ಸರಕಾರದ ಪರವಿರುವ ನ್ಯೂಸ್ 18 ಚಾನಲ್ ರಿಲಯನ್ಸ್ ಒಡೆತನದಲ್ಲಿದ್ದರೆ ಕೇಂದ್ರವನ್ನು ವಿರೋಧಿಸುವ ಎನ್‌ಡಿಟಿವಿಯಲ್ಲೂ ರಿಲಯನ್ಸ್‌ನ ಶೇ.52ರಷ್ಟು ಶೇರುಗಳಿವೆ. ಅಂದರೆ, ಕಾಂಗ್ರೆಸ್ ಹಾಗೂ ಬಿಜೆಪಿ ಪರ ಮಾಧ್ಯಮವನ್ನು ಒಬ್ಬನೇ ನಿಯಂತ್ರಿಸುತ್ತಿದ್ದಾನೆ. ಅಂಬಾನಿ ಎರಡೂ ಪಕ್ಷಗಳಿಗೂ ಆತ್ಮೀಯ ಎಂದು ಸಲೀಮ್‌ಖಾನ್ ವಿವರಿಸಿದರು.

ಉರ್ದು ಭಾಷೆ ಪ್ರಚಾರ: ದೇಶದ ಜನರು ಉರ್ದು ಭಾಷೆಯ ಪತ್ರಿಕೆಗಳನ್ನು ಓದುವುದು ಕಡಿಮೆಯಾಗಿದೆ. ಆದುದರಿಂದ, ಉರ್ದುವನ್ನು ಪ್ರಚಾರಪಡಿಸಲು ಆಯಾ ವರದಿಯನ್ನು ಉರ್ದುವಿನಲ್ಲಿ ಆಡಿಯೋ ಹಾಗೂ ವಿಡಿಯೋ ಮಾಡಿ ಅಂತರ್ಜಾಲದಲ್ಲಿ ಹರಿಯಬಿಡಬೇಕು ಎಂದು ಅವರು ಸಲಹೆ ನೀಡಿದರು.

ಲಲ್ಲನ್‌ಟಾಪ್ ಆನ್‌ಲೈನ್ ಸುದ್ದಿ ತಾಣ ಉತ್ತರ ಪ್ರದೇಶದ ಕೈರಾನಾದಲ್ಲಿ ನಡೆದ ಕುಟುಂಬ ರಾಜಕೀಯವನ್ನು ಬಯಲಿಗೆಳೆಯಿತು. ಅವರು ವಿಡಿಯೋದಲ್ಲಿ ಸಂಪೂರ್ಣ ಉರ್ದುವಿನಲ್ಲೇ ಮಾತನಾಡಿದ್ದಾರೆ. ಆ ಮೂಲಕವೇ ಉರ್ದು ಭಾಷೆಯ ಸವಿಯನ್ನು ನಾವಿಂದು ಹೆಚ್ಚು ಜನರಿಗೆ ತಿಳಿಸಬಹುದು ಎಂದು ಸಲೀಮ್‌ಖಾನ್ ಹೇಳಿದರು.

ಸತ್ಯ ಹೊರಗೆಡವಿ: ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಮರ ವಿರುದ್ಧ ಕೋಮುಪ್ರಚೋದಕ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಇವುಗಳನ್ನು ಎದುರಿಸಬೇಕಾದರೆ ಮುಸ್ಲಿಮರು ನವಮಾಧ್ಯಮಗಳನ್ನು ಕ್ರಿಯಾಶೀಲವಾಗಿ ಬಳಸಿಕೊಂಡು ಸತ್ಯವನ್ನು ಹೊರಗೆಡವಬೇಕು ಎಂದು ಅವರು ಕರೆ ನೀಡಿದರು.

ಆಲ್ಟ್ ನ್ಯೂಸ್, ಕ್ವಿಂಟ್, ಪ್ರಿಂಟ್, ವೈರ್‌ನಂತೆ ಇನ್ನಷ್ಟು ಸತ್ಯ ಶೋಧಕ ಆನ್‌ಲೈನ್ ಮಾಧ್ಯಮಗಳು ಹುಟ್ಟಬೇಕು. ವಾಟ್ಸ್ ಆ್ಯಪ್, ಫೇಸ್‌ಬುಕ್, ಯೂಟ್ಯೂಬ್ ಚಾನೆಲ್ ಮುಂತಾದವುಗಳನ್ನು ಕಡಿಮೆ ಖರ್ಚಿನಲ್ಲಿ ನಿರ್ವಹಿಸಬಹುದು. ಅದರ ಮೂಲಕ ಸತ್ಯ ಹರಡಿ ಆದಾಯವನ್ನೂ ಗಳಿಸಬಹುದು. ಹೀಗೆ ಮಾಡಿ ಯಶಸ್ವಿಯಾದ ಉದಾಹರಣೆಗಳು ನಮ್ಮ ಎದುರಿಗೆ ಇವೆ. ಯುವಪೀಳಿಗೆ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.

ಗೋಷ್ಠಿಯಲ್ಲಿ ಜಮಾತೆ ಇಸ್ಲಾಮಿ ಹಿಂದ್‌ನ ಪ್ರಮುಖರಾದ ಡಾ.ಮುಹಮ್ಮದ್ ಸಾದ್ ಬೆಳಗಾಮಿ, ಡಾ.ಮುಹಮ್ಮದ್ ತಾಹಾ ಮತೀನ್, ರಾಜ್ಯ ಉರ್ದು ಅಕಾಡೆಮಿಯ ಮಾಜಿ ಅಧ್ಯಕ್ಷ ಅಝೀಝುಲ್ಲಾ ಬೇಗ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಒಂದು ಕ್ರಿಯಾಶೀಲ, ಸತ್ಯನಿಷ್ಠರ ತಂಡವನ್ನು ರಚಿಸಬೇಕು. ಅಂತರ್ಜಾಲದಲ್ಲಿ ಹರಡಲಾಗುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಆ ತಂಡ ಸಂಶೋಧನೆ ನಡೆಸಿ ಅಂಕಿ-ಅಂಶಗಳ ಸಮೇತ ವರದಿ ಮುಂದಿಡಬೇಕು. ಆ ವರದಿಗಳನ್ನು ಜನಗಳು ಉರ್ದುವಿನಲ್ಲಿ ಓದಲು ಇಷ್ಟಪಡದಿದ್ದರೆ ಆಡಿಯೋ ಹಾಗೂ ವಿಡಿಯೋಗಳಲ್ಲಿ ಆ ವರದಿಗಳನ್ನು ಮಂಡಿಸಬೇಕು.
-ಡಾ.ಸಲೀಮ್ ಖಾನ್, ಲೇಖಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News