ಮರ್ಯಾದಾ ಹತ್ಯೆಗೆ ಬಾಲಕಿ ಬಲಿ
ದಾವಣಗೆರೆ, ಜು. 9: ಮರ್ಯಾದೆಗೆ ಅಂಜಿ ಸ್ವಂತ ಮಗಳನ್ನೇ ತಂದೆ ಹಾಗೂ ಅಜ್ಜಿ ಸೇರಿಕೊಂಡು ಕೊಲೆಗೈದಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮರವಂಜಿ ಗ್ರಾಮದ ಅಜ್ಜಿ ದಾಕ್ಷಾಯಣಮ್ಮ, ಪುತ್ರ ಪರ ಮೇಶ್ವರಪ್ಪ ಎಂಬವರು ಕೊಲೆ ಗೈದಿರುವ ಆರೋಪಿಗಳು.
ಪರಮೇಶ್ವರಪ್ಪ, ಪುಪ್ಪಾ ದಂಪತಿಯ ಹಿರಿಯ ಮಗಳು (ಅಪ್ರಾಪ್ತ ಬಾಲಕಿ) ಕಳೆದ ಕೆಲ ತಿಂಗಳ ಹಿಂದೆ ಅದೇ ಗ್ರಾಮದ ಅನ್ಯಜಾತಿಯ ಯುವಕ ಪ್ರವೀಣ್ ಎಂಬಾತನನ್ನು ಪ್ರೀತಿ ಮಾಡಿ ಆತನೊಂದಿಗೆ ನಾಪತ್ತೆಯಾಗಿದ್ದಳು ಎನ್ನಲಾಗಿದೆ. ನಂತರ ಬಾಲಕಿಯ ಪೋಷಕರು, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಕರೆದುಕೊಂಡು ಬಂದು, ಪೊಸ್ಕೊ ಕಾಯ್ದೆಯಡಿ ಪ್ರಿಯಕರ ಪ್ರವೀಣ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಇದಾದ ಬಳಿಕ ಯುವತಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಗ ತಂದೆ ಪರಮೇಶ್ವರಪ್ಪ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು, ಆಕೆ ಗುಣ ಮುಖಳಾಗಿದ್ದಳು. ಇದೇ ಸಂದರ್ಭ ಪೋಷಕರು ಯುವತಿಗೆ ಮದುವೆ ಮಾಡಲು ತಯಾರಿ ನಡೆಸಿದ್ದರು ಎನ್ನಲಾಗಿದೆ.
ಆದರೆ, ಇದೇ ವೇಳೆ ತಂದೆ ಪರಮೇಶ್ವರಪ್ಪ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಕಾರಣ ಅವರ ಪತ್ನಿ ಪುಷ್ಪಾರೊಂದಿಗೆ ಮಣಿಪಾಲ ಆಸ್ಪತ್ರೆಗೆ ತೆರಳಿದ್ದರು. ಆ ವೇಳೆ ಅಜ್ಜಿಯೊಂದಿಗೆ ಇದ್ದ ಬಾಲಕಿ, ಮಾನಸಿಕ ಖಿನ್ನತೆಗೆ ಒಳಗಾಗಿ ವಿಷ ಕುಡಿದಿದ್ದು, ನೆಲದಲ್ಲಿ ನರಳುತ್ತಿರುವಾಗ ಸ್ಥಳಕ್ಕೆ ಬಂದ ಅಜ್ಜಿ ತಕ್ಷಣ ಪುತ್ರ ಪರಮೇಶ್ವರಪ್ಪಅವರಿಗೆ ಕರೆ ಮಾಡಿ ತಿಳಿಸಿದ್ದಾಳೆ.
ಮಗಳ ವರ್ತನೆಯಿಂದ ಬೇಸತ್ತಿದ್ದ ಪರಮೇಶ್ವರಪ್ಪ ಅವಳಿಂದ ಮರ್ಯಾದೆ ಹೋಗಿದೆ. ಅವಳು ಇರುವುದೇ ಬೇಡ ಸಾಯಿಸಿಬಿಡು ಎಂದು ಫೋನ್‌ನಲ್ಲಿ ತಿಳಿಸಿದ್ದು, ಅದರಂತೆ ಅಜ್ಜಿ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ. ಬಳಿಕ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬಿಂಬಿಸಿದ್ದರು ಎಂದು ತಿಳಿದು ಬಂದಿದೆ.
ಜೂನ್ 27 ರಂದು ಮರಣೋತ್ತರ ಪರೀಕ್ಷೆ ನಡೆಸಿದ್ದು, ಜುಲೈ 1 ರಂದು ಬಂದ ವರದಿಯಲ್ಲಿ ಯುವತಿಯ ಕುತ್ತಿಗೆ ಹಗ್ಗ ಬೀಗಿದು ಕೊಲೆಗೈದಿರುವುದು ದೃಢ ಪಟ್ಟಿದೆ. ತಕ್ಷಣ ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸಿದಾಗ ಅಜ್ಜಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ, ಅಲ್ಲದೇ ಇದಕ್ಕೆ ಪ್ರೇರಣೆ ನೀಡಿದ ಆರೋಪದ ಮೇಲೆ ತಂದೆ ಪರಮೇಶ್ವರಪ್ಪನನ್ನೂ ಪೊಲೀಸರು ಬಂದಿಸಿದ್ದಾರೆ.
ಒಟ್ಟಿನಲ್ಲಿ ಮರ್ಯಾದೆಗೆ ಹೆದರಿದ ಅಜ್ಜಿ ಹಾಗೂ ಆಕೆಯ ತಂದೆ ಮಗಳನ್ನು ಸಾಯಿಸಿ ಈಗ ಜೈಲು ಸೇರಿದ್ದಾರೆ. ಇತ್ತ ಮಗಳನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.