2019 ಕ್ಕೆ 12 ರಾಕೆಟ್‌ಗಳ ಉಡಾವಣೆಗೆ ಕಾರ್ಯಕ್ರಮ: ಇಸ್ರೋ ಅಧ್ಯಕ್ಷ ಕೈಲಾಸವದಿವು ಶಿವನ್

Update: 2018-07-09 17:09 GMT

ಬೆಂಗಳೂರು, ಜು.9: ಮುಂದಿನ ವರ್ಷ ಜು.19ಕ್ಕೆ 12ರಾಕೆಟ್‌ಗಳನ್ನು ಉಡಾಯಿಸಲು ಇಸ್ರೊ ಸಂಸ್ಥೆ ಕಾಲಾವಧಿ ಹಾಕಿಕೊಂಡಿದೆ ಎಂದು ಇಸ್ರೋ ಅಧ್ಯಕ್ಷ ಕೈಲಾಸವದಿವು ಶಿವನ್ ಹೇಳಿದ್ದಾರೆ.

ಏರ್ ಚೀಫ್ ಮಾರ್ಷಲ್ ಎಲ್.ಎಂ.ಕಟ್ರೆ ಸ್ಮರಣಾರ್ಥ ಉಪನ್ಯಾಸದ ಕಾರ್ಯಕ್ರಮದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮುಂದಿನ ನಾಲ್ಕು ವರ್ಷಗಳಲ್ಲಿ ಅಂತರಿಕ್ಷಕ್ಕೆ 40 ರಾಕೆಟ್‌ಗಳನ್ನು ಹಾರಿಸುವ ಯೋಜನೆ ಭಾರತದ್ದಾಗಿದ್ದು, ಈ ಮೂಲಕ ಉದ್ಯೋಗ ವಲಯವನ್ನು ಉತ್ತೇಜಿಸಲಾಗುವುದು. ಇನ್ನು ಒಂದು ವರ್ಷದಲ್ಲಿ 12 ರಾಕೆಟ್‌ಗಳನ್ನು ಮೊದಲ ವಿಭಾಗವನ್ನು ಹಾರಿಸಲು ಸಿದ್ಧತೆ ನಡೆಯುತ್ತಿದೆ ಎಂದು ತಿಳಿಸಿದರು. ಈ ಯೋಜನೆಗಾಗಿ ಕೇಂದ್ರ ಸರಕಾರದಿಂದ ಕಳೆದ ತಿಂಗಳು 10,900 ಕೋಟಿ ರೂಪಾಯಿಗಳಲ್ಲಿ ಶೇ.85ರಷ್ಟು ಅನುದಾನ ಬಿಡುಗಡೆಯಾಗಿದೆ. ಖಾಸಗಿಯವರಿಂದ ರಾಕೆಟ್‌ಗಳ ಭಾಗಗಳನ್ನು ಖರೀದಿಸಲು ಹಣ ಸಂಗ್ರಹಿಸಲಾಗುವುದು ಎಂದು ಹೇಳಿದರು.

ಒಟ್ಟು 30 ಪೋಲಾರ್ ಸ್ಯಾಟಲೈಟ್ ಉಡ್ಡಯನ ವಾಹನಗಳು(ಪಿಎಸ್‌ಎಲ್‌ವಿ) ಮತ್ತು 10 ಜಿಯೊ ಸಿಂಕ್ರೋನಸ್ ಸ್ಯಾಟಲೈಟ್ ಉಡ್ಡಯನ ವಾಹನಗಳು, ಎಂಕೆ 3 ರಾಕೆಟ್‌ಗಳನ್ನು 2022ರ ವೇಳೆಗೆ ಅಂತರಿಕ್ಷಕ್ಕೆ ಹಾರಿಬಿಡುವ ಯೋಜನೆಯಿದೆ ಎಂದರು.

ಇಸ್ರೋ ಕೇಂದ್ರ ವರ್ಷಕ್ಕೆ ಮೂರರಿಂದ ನಾಲ್ಕು ರಾಕೆಟ್‌ಗಳನ್ನು ಉಡಾಯಿಸುತ್ತದೆ. ಇನ್ನು ಮುಂದೆ ಪ್ರತಿವರ್ಷ ಸ್ವದೇಶಿ ನಿರ್ಮಿತ 12 ರಿಂದ 18 ರಾಕೆಟ್‌ಗಳನ್ನು ಉಡಾಯಿಸುವ ಯೋಜನೆಯಿದೆ. ನಮಗೆ ರಾಕೆಟ್‌ನ ಬಿಡಿ ಭಾಗಗಳನ್ನು ಒದಗಿಸುವ ಕಂಪೆನಿಗಳು ತಮ್ಮ ಉತ್ಪಾದನೆಯನ್ನು ವೇಗವಾಗಿ ಹೆಚ್ಚಿಸಬೇಕಾಗುತ್ತದೆ. ಅಲ್ಲದೆ ಹೆಚ್ಚಿನ ಮಾನವ ಸಂಪನ್ಮೂಲದ ಅಗತ್ಯ ಕೂಡ ಇರುತ್ತದೆ. ಉತ್ಪಾದನೆ, ತಯಾರಿಕೆ ಮತ್ತು ಗುಣಮಟ್ಟ ನಿಯಂತ್ರಣ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಿಗಳ ನೇಮಕ ಆಗಬೇಕಾಗುತ್ತದೆ ಎಂದು ಶಿವನ್ ಅಭಿಪ್ರಾಯಿಸಿದ್ದಾರೆ.

ಪ್ರಸ್ತುತ ಇಸ್ರೋಗೆ ಸ್ಯಾಟಲೈಟ್ ತಯಾರಿಕೆಗೆ ಬಿಡಿ ಭಾಗಗಳನ್ನು ಮಿಶ್ರಾ ದಾತು ನಿಗಮ್ ಲಿಮಿಟೆಡ್, ಗೋದ್ರೆಜ್ ಏರೋಸ್ಪೇಸ್, ವಾಲ್ಚಂದ್ ಇಂಡಸ್ಟ್ರೀಸ್ ಲಿಮಿಟೆಡ್, ಲಾರ್ಸೆನ್ ಅಂಡ್ ಟರ್ಬೊ ಮತ್ತು ಎಚ್‌ಎಎಲ್ನಂತಹ ಸುಮಾರು 500 ಸಂಸ್ಥೆಗಳು ಪೂರೈಸುತ್ತವೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News