ಪ್ರಾದೇಶಿಕ ಅಸಮತೋಲನದ ಬಜೆಟ್: ಶಾಸಕ ಶ್ರೀರಾಮುಲು
ಮಂಡ್ಯ, ಜು.9: ಸಮ್ಮಿಶ್ರ ಸರಕಾರದ ಬಜೆಟ್ ಸಮಗ್ರ ರಾಜ್ಯ ಬಜೆಟ್ ಅಲ್ಲ, ಪ್ರಾದೇಶಿಕ ಅಸಮತೋಲನದಿಂದ ಕೂಡಿರುವ ಬಜೆಟ್ ಆಗಿದೆ ಎಂದು ಶಾಸಕ ಬಿ.ಶ್ರೀರಾಮುಲು ಟೀಕಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ, ಕರಾವಳಿ, ಹಳೇ ಮೈಸೂರು, ಮಲೆನಾಡೆಂದು ವಿಂಗಡಿಸಲಾಗಿದೆ. ಕೇವಲ ಮೂರ್ನಾಲ್ಕು ಜಿಲ್ಲೆಗಳಿಗೆ ಸೀಮಿತವಾಗಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ರೈತರ ಸಾಲಮನ್ನಾ ಸಮರ್ಪಕವಾಗಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆದ ಮೇಲೂ ರೈತರ ಆತ್ಮಹತ್ಯೆ ನಿಂತಿಲ್ಲ. ಆದ್ದರಿಂದ ಸಂಪೂರ್ಣವಾಗಿ ಸಾಲಮನ್ನಾ ಮಾಡಬೇಕು ಎಂದು ಅವರು ಒತ್ತಾಯಿಸಿದರು. ದೇಶದಲ್ಲಿ ಮತ್ತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಶಾಸಕ ಬಿ.ಶ್ರೀರಾಮುಲು ತಿಳಿಸಿದರು.
2019ರ ಲೋಕಸಭೆ ಚುನಾವಣೆಯಲ್ಲಿ ಮತ್ತೆ ನರೇಂದ್ರಮೋದಿ ಪ್ರಧಾನಿಯಾಗಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾದರೂ ಬಿಜೆಪಿ ಹೆಚ್ಚು ಸ್ಥಾನ ಗಳಿಸಲಿದೆ. ದೇವೇಗೌಡರು ಮತ್ತೆ ಪ್ರಧಾನಿ ಆಗುವುದಿಲ್ಲ ಎಂದು ಅವರು ಹೇಳಿದರು.