×
Ad

ಕೇವಲ 4 ಜಿಲ್ಲೆಗಳಿಗೆ ಸೀಮಿತವಾದ ಬಜೆಟ್: ಶಾಸಕ ರೇಣುಕಾಚಾರ್ಯ

Update: 2018-07-09 23:19 IST

ದಾವಣಗೆರೆ,ಜು.09: ಕೇವಲ 4 ಜಿಲ್ಲೆಗಳಿಗೆ ಸೀಮಿತವಾದ ಬಜೆಟ್ ಮಂಡಿಸಿದ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಇತರೆ ಜಿಲ್ಲೆಗಳನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಹೊನ್ನಾಳಿ ಶಾಸಕ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು. 

ಈ ಕುರಿತು ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟ್ ಕೇವಲ 4 ಜಿಲ್ಲೆಗೆ ಸೀಮಿತವಾಗಿದ್ದು, ಉಳಿದ ಎಲ್ಲಾ ಜಿಲ್ಲೆಗಳನ್ನು ಬಜೆಟ್‍ನಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಕುಮಾರಸ್ವಾಮಿ ತಮ್ಮ ಬಜೆಟ್‍ನಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾದ ಸ್ಥಳಗಳಿಗೆ ಮಾತ್ರವೇ ಅನುದಾನ ಘೋಷಣೆ ಮಾಡಿದ್ದು, ಇದರಿಂದ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕಕ್ಕೆ ಏನನ್ನೂ ಕೊಟ್ಟಿಲ್ಲ ಎಂದು ದೂರಿದರು.

ರೈತರ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಘೋಷಣೆ ಮಾಡಿದ್ದರೂ ಆದಾಯ ಕ್ರೋಢೀಕರಿಸುವ ಬಗ್ಗೆ ಯಾವುದೇ ಮಾಹಿತಿ, ವಿವರವನ್ನೇ ಸಿಎಂ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಜು. 12ರಂದು ವಿಧಾನಸೌಧದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದರು. 

ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಅಪವಿತ್ರ ಮೈತ್ರಿ ಕೂಟದ ಸರ್ಕಾರ ರಚಿಸಿಕೊಂಡು ಒಂದೂವರೆ ತಿಂಗಳಾಗುತ್ತಿದ್ದರೂ ಈವರೆಗೆ ಮೈತ್ರಿ ಸರ್ಕಾರ ಮಾತ್ರ ಟೇಕ್ ಆಫ್ ಆಗಿಲ್ಲ. ಲೋಕಸಭೆ ಚುನಾವಣೆವರೆಗಷ್ಟೇ ಈ ಮೈತ್ರಿ ಸರ್ಕಾರವೆಂಬ ಮಾತು ಸ್ವತಃ ಮೈತ್ರಿ ಸರ್ಕಾರದ ಪಾಲುದಾರರ ಪಕ್ಷದ ಪಡಸಾಲೆಯಿಂದಲೇ ಕೇಳಿ ಬರುತ್ತಿದೆ. ಮತ್ತೆ ಕೆಲವರು ಕುಮಾರಸ್ವಾಮಿ 4 ವರ್ಷ ಅವದಿ ಪೂರ್ಣಗೊಳಿಸುವ ಮಾತನ್ನಾಡುತ್ತಾರೆ ಎಂದ ಅವರು, ಕುಮಾರಸ್ವಾಮಿ ಸಿಎಂ ಆದ್ರೆ ಕತ್ತು ಕೊಯ್ದುಕೊಳ್ಳುವುದಾಗಿ ಹೇಳಿದ್ದ ಝಮೀರ್ ಅಹಮ್ಮದ್, ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ಜಾರ್ಜ್ ಹೆಸರು ಕೇಳಿ ಬಂದಿದ್ದು, ಇಬ್ಬರ ವಿರುದ್ಧವೂ ಕುಮಾರಸ್ವಾಮಿ ಹೋರಾಟ ನಡೆಸಿದ್ದರು. ಈಗ ಅದೇ ಕುಮಾರಸ್ವಾಮಿ ಇಬ್ಬರನ್ನೂ ತಮ್ಮ ಸಂಪುಟದಲ್ಲಿಟ್ಟುಕೊಂಡಿದ್ದು, ನೈತಿಕತೆ ಎಲ್ಲಿದೆ ಸ್ವಾಮಿ? ಎಂದು ಪ್ರಶ್ನಿಸಿದರು.

ಪಕ್ಷದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಸಿ. ಶ್ರೀನಿವಾಸ, ಹಾಲೇಶ, ಗೌತಮ್ ಜೈನ್, ಧನುಷ್ ರೆಡ್ಡಿ, ರಾಜು, ಪ್ರವೀಣ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News