ಮಾಜಿ ಸಚಿವ ಬಿ.ಎ.ಮೊಹಿದಿನ್ ನಿಧನ: ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

Update: 2018-07-10 12:58 GMT

ಬೆಂಗಳೂರು, ಜು. 10: ಮಾಜಿ ಶಿಕ್ಷಣ ಸಚಿವ ಬಿ.ಎ.ಮೊಹಿದಿನ್ ಅವರಿಗೆ ವಿಧಾನ ಮಂಡಲ ಉಭಯ ಸದನಗಳಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮಂಗಳವಾರ ಬೆಳಗ್ಗೆ ವಿಧಾನಸಭೆ ಅಧಿಕೃತ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ಕೆ.ಆರ್.ರಮೇಶ್‌ ಕುಮಾರ್, ಸಂತಾಪ ಸೂಚಕ ನಿರ್ಣಯವನ್ನು ಕೈಗೆತ್ತಿಕೊಂಡು ಬಿ.ಎ.ಮೊಹಿದಿನ್ ಅವರು ನಿಧನರಾಗಿರುವುದನ್ನು ಸದನಕ್ಕೆ ತಿಳಿಸಿದರು. ಅಲ್ಲದೆ, 1938ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೊಲಂಬೆ ಗ್ರಾಮದಲ್ಲಿ ಜನಿಸಿದ ಮೊಹಿದಿನ್ ಬಿಎಸ್ಸಿ ಪದವೀಧರರಾಗಿದ್ದು, ವೃತ್ತಿಯಲ್ಲಿ ಕೃಷಿಕರಾಗಿದ್ದರು ಎಂದು ಸ್ಮರಿಸಿದರು.

1978ರಲ್ಲಿ ಬಂಟ್ವಾಳ ಕ್ಷೇತ್ರದಿಂದ ಆರನೆ ವಿಧಾನಸಭೆಗೆ ಚುನಾಯಿತರಾಗಿ ಕಾರ್ಯ ನಿರ್ವಹಿಸಿದ್ದರು. 1990 ರಿಂದ 2002ರ ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಇವರು, 1995ರಿಂದ 1996ರ ವರೆಗೆ ಪರಿಷತ್‌ನ ಮುಖ್ಯ ಸಚೇತಕರಾಗಿ ಹಾಗೂ 1996ರಲ್ಲಿ ಸಣ್ಣ ಕೈಗಾರಿಕೆ ಮತ್ತು ಉನ್ನತ ಶಿಕ್ಷಣ ಸಚಿವರಾಗಿ ದಕ್ಷತೆಯಿಂದ ಸೇವೆ ಸಲ್ಲಿಸಿದ್ದಾರೆ. ತಮ್ಮ ಹಾಗೂ ಅವರ ಒಡನಾಟ 46 ವರ್ಷಗಳಷ್ಟು ಸುದೀರ್ಘವಾದದ್ದು ಎಂದ ಅವರು, ಸರಳ, ಸಜ್ಜನ, ಸ್ನೇಹಮಯಿಯಾಗಿದ್ದ ಮೊಹಿದಿನ್ ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ ಎಂದು ರಮೇಶ್ ಕುಮಾರ್ ಸ್ಮರಿಸಿದರು.

ಆ ಬಳಿಕ ಸಭಾನಾಯಕರೂ ಆದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಯಡಿಯೂರಪ್ಪಅವರು ಸಂತಾಪ ಸೂಚಕ ನಿರ್ಣಯವನ್ನು ಬೆಂಬಲಿಸಿ, ಮಾಜಿ ಸಚಿವ ಬಿ.ಎ.ಮೊಹಿದಿನ್ ಅವರು ಸಲ್ಲಿಸಿದ ಸೇವೆ ರಾಜ್ಯ ರಾಜಕಾರಣದಲ್ಲಿ ಅಚ್ಚಳಿಯದೆ ಉಳಿದಿದೆ. ಅವರ ನಿಧನದ ದುಃಖ ಭರಿಸಲು ಕುಟುಂಬಕ್ಕೆ ಭಗವಂತ ಶಕ್ತಿ ನೀಡಲಿ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿದರು.

ಗದ್ಗದಿತರಾದ ಸ್ಪೀಕರ್: ನಂತರ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ತಮ್ಮ ಹಿರಿಯ ಸಹೋದರನಷ್ಟೇ ಸ್ಥಾನವನ್ನು ನನ್ನ ವೈಯಕ್ತಿಕ ಬದುಕಿನಲ್ಲಿ ನಾನು ಮೊಹಿದಿನ್ ಅವರಿಗೆ ನೀಡಿದ್ದೆ. ನನ್ನ ತಪ್ಪುಗಳನ್ನು ತಿದ್ದಿ-ತೀಡುವ ಅಧಿಕಾರ ಇದ್ದದ್ದು ನನ್ನ ದೊಡ್ಡಣ್ಣ ಹಾಗೂ ಮೊಹಿದಿನ್ ಅವರಿಗೆ ಮಾತ್ರ. ಇಂದು ಅವರನ್ನು ನಾವು ಕಳೆದುಕೊಂಡಿದ್ದೇನೆ ಎಂದು ಗದ್ಗದಿತರಾದರು.

ಮೊಹಿದಿನ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ತೆರಳುತ್ತಿದ್ದೇನೆ. ಹೀಗಾಗಿ ಇಂದು ಮತ್ತು ನಾಳೆ ಉಪಸಭಾಧ್ಯಕ್ಷರು ಸದನ ನಿರ್ವಹಣೆ ಮಾಡುತ್ತಾರೆ. ಅವರು ಹೊಸಬರು. ಅವರಿಗೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ರಮೇಶ್‌ ಕುಮಾರ್ ಮನವಿ ಮಾಡಿದರು.

ಆ ಬಳಿಕ ಮೃತರ ಗೌರವಾರ್ಥ ಸದನದ ಸದಸ್ಯರೆಲ್ಲರೂ ಎದ್ದುನಿಂತು ಒಂದು ನಿಮಿಷ ಮೌನ ಆಚರಿಸುವ ಮೂಲಕ ಮೊಹಿದಿನ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂತಾಪ ಸೂಚನೆ ನಿರ್ಣಯವನ್ನು ಅವರ ಕುಟುಂಬದ ಸದಸ್ಯರಿಗೆ ಕಳುಹಿಸಲಾಗುವುದು ಎಂದು ಪ್ರಕಟಿಸಿದರು.

ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಹಣಕಾಸಿನ ಜವಾಬ್ದಾರಿಯನ್ನು ಮೊಹಿದಿನ್ ಅವರಿಗೆ ವಹಿಸಿದ್ದರು. ಅಲ್ಲದೆ, ರಾಮಜನ್ಮ ಭೂಮಿ ವಿವಾದ ಉತ್ತುಂಗಕ್ಕೇರಿದ್ದ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕರಾವಳಿಯಲ್ಲಿ ಮೊಹಿದಿನ್ ಅವರು ನಿರ್ವಹಿಸಿದ ರೀತಿ ಮೆಚ್ಚುಗೆಗೆ ಪಾತ್ರವಾಗಿತ್ತು.
-ಕೆ.ಆರ್.ರಮೇಶ್‌ ಕುಮಾರ್, ವಿಧಾನಸಭಾ ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News