×
Ad

ಶಿವಮೊಗ್ಗ: ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿಯ ಶವ ಪತ್ತೆ

Update: 2018-07-10 19:22 IST

ಶಿವಮೊಗ್ಗ, ಜು. 10: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಗುಡ್ಡೆಕೆರೆ ಬಳಿಯ ಕೆಂದಾಳುಬೈಲುವಿನ ದೊಡ್ಲುಮನೆ ಪ್ರದೇಶ ಬಳಿ ಕಾಲು ಸೇತುವೆ ದಾಟುವ ವೇಳೆ ನೀರುಪಾಲಾದ ಶಾಲಾ ಬಾಲಕಿಯ ಶವ ಮಂಗಳವಾರ ಪತ್ತೆಯಾಗಿದೆ. 

ಆಶಿಕಾ (14) ನೀರುಪಾಲಾದ ಬಾಲಕಿ ಎಂದು ಗುರುತಿಸಲಾಗಿದೆ. ಘಟನೆ ನಡೆದ ಸ್ಥಳದಿಂದ ಸುಮಾರು 1 ಕಿ.ಮೀ. ದೂರದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. 

ಘಟನೆ ಹಿನ್ನೆಲೆ: ಮೃತ ಬಾಲಕಿಯು ಗುಡ್ಡೇಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ 9 ನೇ ತರಗತಿ ಅಭ್ಯಾಸ ಮಾಡುತ್ತಿದ್ದಳು. ಧಾರಾಕಾರ ಮಳೆಯ ಕಾರಣದಿಂದ ಸೋಮವಾರ ತೀರ್ಥಹಳ್ಳಿ ತಾಲೂಕಿನ ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಮಾಹಿತಿ ತಿಳಿಯದ ಬಾಲಕಿಯು ಎಂದಿನಂತೆ ಶಾಲೆಗೆ ತೆರಳಿದ್ದಳು. ರಜೆಯಿರುವ ವಿಷಯ ಗೊತ್ತಾಗಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಹಳ್ಳದ ಮೇಲಿನ ಕಾಲು ಸೇತುವೆ ದಾಟುವ ವೇಳೆ, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ ಎಂದು ಹೇಳಲಾಗಿತ್ತು. 

ವಿಷಯ ತಿಳಿಯುತ್ತಿದ್ದಂತೆ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಕೊಚ್ಚಿ ಹೋಗಿರುವ ಬಾಲಕಿಯ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಸಂಜೆಯವರೆಗೂ ಬಾಲಕಿಯ ಸುಳಿವು ಲಭ್ಯವಾಗದ ಕಾರಣ ಹಾಗೂ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. 

ಜಿಲ್ಲಾಧಿಕಾರಿಯಿಂದ 5 ಲಕ್ಷ ರೂ. ಪರಿಹಾರ ವಿತರಣೆ

ಮಂಗಳವಾರ ಮೃತ ಬಾಲಕಿಯ ಮನೆಗೆ ಜಿಲ್ಲಾಧಿಕಾರಿ ಎಂ.ಲೋಕೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಕುಮಾರ್, ತಹಶೀಲ್ದಾರ್ ಆನಂದ ನಾಯ್ಕ ಅವರು ಮೃತ ಬಾಲಕಿಯ ಮನೆಗೆ ತೆರಳಿ ಅಂತಿಮ ದರ್ಶನ ಪಡೆದರು. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಾಲಕಿಯ ಕುಟುಂಬದವರಿಗೆ 5 ಲಕ್ಷ ರೂ. ಮೊತ್ತದ ಚೆಕ್ ಹಸ್ತಾಂತರಿಸಿದರು. ಬಾಲಕಿಯು ಕಾಲು ಜಾರಿ ಬಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ತಾತ್ಕಾಲಿಕವಾಗಿ ತಕ್ಷಣ ಕಾಲುಸಂಕದ ಇಕ್ಕೆಲೆಗಳಲ್ಲಿ ಆಧಾರಕ್ಕಾಗಿ ತಡೆಯನ್ನು ಅಳವಡಿಸಲು ಹಾಗೂ ಹೊಸ ಸೇತುವೆ ನಿರ್ಮಾಣಕ್ಕಾಗಿ ಅಂದಾಜು ಪಟ್ಟಿಯನ್ನು ಸಲ್ಲಿಸುವಂತೆ ಪಂಚಾಯತ್‍ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೃತ ಬಾಲಕಿಯ ಕುಟುಂಬಕ್ಕೆ ಅಗತ್ಯ ಸಾಮಾಗ್ರಿಗಳನ್ನು ತಕ್ಷಣಕ್ಕೆ ಒದಗಿಸಲು ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರು ಬಾಲಕಿಯು ಕಲಿಯುತ್ತಿದ್ದ ಶಾಲೆಗೆ ಭೇಟಿ ನೀಡಿ ಮೂಲಸೌಕರ್ಯಗಳ ಪರಿಶೀಲನೆ ನಡೆಸಿ ಅಗತ್ಯ ಮೂಲಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News