ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಜು.11 ರಂದು ಪದಗ್ರಹಣ
ಬೆಂಗಳೂರು, ಜು.10: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷರಾಗಿ ನೇಮಕವಾಗಿರುವ ಈಶ್ವರ ಖಂಡ್ರೆ ನಾಳೆ ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪದಗ್ರಹಣ ಸ್ವೀಕರಿಸಲಿದ್ದಾರೆ.
ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಎಂ.ರೇವಣ್ಣ, ರಾಜ್ಯ ಯುವ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿ, ರಾಜ್ಯಾದ್ಯಂತ ಸುತ್ತಾಡಿರುವ ದಿನೇಶ್ ಗುಂಡೂರಾವ್ ಅಪಾರವಾದ ಅನುಭವವನ್ನು ಹೊಂದಿದ್ದಾರೆ. ಈಗ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಿದ್ದು, ಗುಂಡೂರಾವ್ ಹಾಗೂ ಈಶ್ವರ್ ಖಂಡ್ರೆ ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಅವರ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅವರು ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ಸಮ್ಮಿಶ್ರ ಸರಕಾರ ಸುಸೂತ್ರವಾಗಿ ಮುನ್ನಡೆಯಬೇಕಿದೆ ಎಂದ ಅವರು, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ 7 ವರ್ಷಗಳ ಕಾಲ ಅಧ್ಯಕ್ಷರಾಗಿ ಸಮರ್ಥವಾಗಿ ಪಕ್ಷವನ್ನು ಮುನ್ನಡೆಸಿದ್ದಾರೆ. ಅವರಿಗೂ ಇದೇ ಸಂದರ್ಭದಲ್ಲಿ ಅಭಿನಂದನೆ ಸಮಾರಂಭ ಹಮ್ಮಿಕೊಂಡಿದ್ದು, ಈ ಸಮಾವೇಶ ಅತ್ಯಂತ ಮಹತ್ವವಾದುದಾಗಿದೆ ಎಂದು ತಿಳಿಸಿದರು.
ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ ಸೇರಿದಂತೆ ಎಲ್ಲ ಸಂಸದರು, ಶಾಸಕರು, ವಿಧಾನಪರಿಷತ್ತು ಸದಸ್ಯರು ಹಾಗೂ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ವಿ.ಎಸ್.ಉಗ್ರಪ್ಪ ಸೇರಿದಂತೆ ಹಲವರಿದ್ದರು.