ಉತ್ತರ ಕರ್ನಾಟಕಕ್ಕೆ ನ್ಯಾಯಬದ್ಧ ಪಾಲು ನೀಡಲು ನಿವೃತ್ತ ಡಿಜಿಪಿ ಶಂಕರ್ ಬಿದರಿ ಆಗ್ರಹ

Update: 2018-07-10 15:24 GMT

ಬೆಂಗಳೂರು, ಜು.10: ಸಮ್ಮಿಶ್ರ ಸರಕಾರವು ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಅವಕಾಶ ಮಾಡಿಕೊಡದೆ ನ್ಯಾಯಬದ್ಧವಾಗಿ ಉತ್ತರ ಕರ್ನಾಟಕ ಭಾಗಕ್ಕೆ ನೀಡಬೇಕಾದ ಪಾಲು ನೀಡಬೇಕು ಎಂದು ನಿವೃತ್ತ ಡಿಜಿಪಿ ಶಂಕರ್ ಬಿದರಿ ಆಗ್ರಹಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಎಲ್ಲಾ ಸರಕಾರಗಳು ಸೇರಿದಂತೆ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಿವೆ. ಹಾಗಾಗಿ ಮತ್ತೆ ಉತ್ತರ ಕರ್ನಾಟಕದ ರೈತ ಮುಖಂಡರು, ಸಂಘಟನೆಗಳು ಪ್ರತ್ಯೇಕ ರಾಜ್ಯದ ಹೋರಾಟದ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಅದಕ್ಕೆ ಅವಕಾಶ ನೀಡದೇ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಪ್ರಮುಖ ಹುದ್ದೆಗಳಾದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಪ್ರಮುಖ ಮೂರು ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಕಾರ್ಯದರ್ಶಿಗಳು, ವಿಧಾನಸಭೆಯ ಸಭಾಧ್ಯಕ್ಷರು ಸೇರಿದಂತೆ ಬಹುತೇಕ ಎಲ್ಲವೂ ದಕ್ಷಿಣ ಕರ್ನಾಟಕದವರ ಪಾಲಾಗಿವೆ. ಉತ್ತರ ಕರ್ನಾಟಕದಿಂದ ಶಾಸನಸಭೆಗೆ 96 ಶಾಸಕರು ಆಯ್ಕೆಯಾಗಿದ್ದರೂ, ಯಾವುದೇ ಪ್ರಾತಿನಿಧ್ಯ ನೀಡದೆ ಕಡೆಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಉತ್ತರ ಕರ್ನಾಟಕವನ್ನು ಕಡೆಗಣಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಲ್ಲದೆ, ಉತ್ತರ ಕರ್ನಾಟಕಕ್ಕಾಗಿ ನೀಡಿರುವ ಯೋಜನೆಗಳು ಯಾವುದೂ ವೈಜ್ಞಾನಿಕವಾಗಿಲ್ಲ, ಬದಲಿಗೆ ಅಸ್ಪಷ್ಟವಾಗಿದೆ. ಆದುದರಿಂದಾಗಿ, ಈಗಾಗಲೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಬೇಕು ಎಂದು ಆಗ್ರಹಿಸಿ ರೈತರು, ಕೂಲಿ ಕಾರ್ಮಿಕರು, ಚಳವಳಿಗಾರರು ತೀವ್ರ ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ, ಕೂಡಲೇ ಜನಪ್ರತಿನಿಧಿಗಳಿಗೆ ಅನುಗುಣವಾಗಿ ರಾಜಕೀಯ ಆದ್ಯತೆ ಹಾಗೂ ಹೆಚ್ಚಿನ ಯೋಜನೆಗಳನ್ನು ನೀಡಬೇಕು. ಇಲ್ಲವಾದರೆ, ಪ್ರತ್ಯೇಕತೆಯ ಹೋರಾಟ ತಡೆಗಟ್ಟುವುದಕ್ಕೆ ಸಾಧ್ಯವಿಲ್ಲ ಎಂದರು.

ಕೃಷ್ಣಾ ಕಣಿವೆಯ ನೀರಾವರಿ ಯೋಜನೆಗಳಿಗಾಗಿ ಸಾವಿರಾರು ಕೋಟಿ ರೂ.ಗಳು ವೆಚ್ಚ ಮಾಡಿದ್ದರೂ, ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿಲ್ಲ ಹಾಗೂ ಯುವಕರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಬರಬೇಕಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕೈಗಾರಿಕೆಗಳ ಸ್ಥಾಪನೆಗೆ ಕೈಗಾರಿಕಾ ನೀತಿ ಬದಲಾವಣೆ ಮಾಡಬೇಕು. ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಜಿಲ್ಲೆಗಳಿಗೆ ಸರಕಾರದ ಕೆಲ ಇಲಾಖೆಗಳನ್ನು ಸ್ಥಳಾಂತರ ಮಾಡಬೇಕು. ಇದರಿಂದ ಬೆಂಗಳೂರು ನಗರ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿ ಎರಡಕ್ಕೂ ಅನುಕೂಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News