ಉ.ಕ ಜನತೆ ಪ್ರತ್ಯೇಕ ರಾಜ್ಯ ಕೇಳುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ: ಶಾಸಕ ಶ್ರೀರಾಮುಲು

Update: 2018-07-10 17:22 GMT

ಮೈಸೂರು,ಜು.10: ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ತಾರತಮ್ಯ ಮಾಡಿದ್ದು, ಉತ್ತರ ಕರ್ನಾಟಕದ ಜನರು ಇಂದು ಪ್ರತ್ಯೇಕ ರಾಜ್ಯ ಕೇಳುತ್ತಿದ್ದಾರೆ. ಆದರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಮೊಣಕಾಲ್ಮೂರು ಶಾಸಕ ಶ್ರೀರಾಮುಲು ಕಳವಳ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಅರ್ಜುನ್ ಗುರೂಜೀ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಕೇವಲ 3-4 ಜಿಲ್ಲೆಗೆ ಸೀಮಿತಗೊಳಿಸಿ ಬಜೆಟ್ ಮಂಡಿಸಿದ್ದಾರೆ. ಅದಕ್ಕೆ ಪುಷ್ಠಿ ನೀಡುವಂತೆ ಉತ್ತರ ಕರ್ನಾಟಕದ ಜನರು ಹೋರಾಟ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇದಕ್ಕೆ ನನ್ನ ಸಹಮತ ಇಲ್ಲ. ಈ ಬಗ್ಗೆ ನಾಳೆ ವಿಧಾನಸಭೆಯಲ್ಲಿ ಮಾತಾಡುತ್ತೇನೆ. ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಬಜೆಟ್‍ನಲ್ಲಿ ಆ ಭಾಗಕ್ಕೆ ಯಾವುದೇ ರೀತಿ ಪ್ಯಾಕೇಜ್ ನೀಡಿಲ್ಲ ಎಂದರು.

ರೇವಣ್ಣ, ಕುಮಾರಸ್ವಾಮಿ ವಚನ ಭ್ರಷ್ಟರೆಂದು ರಾಜ್ಯದ ಜನರಿಗೆ ಗೊತ್ತಿದೆ. ಮೊದಲು ಯಡಿಯೂರಪ್ಪನವರಿಗೆ ಅಧಿಕಾರ ಕೊಡದೆ ವಚನ ಭ್ರಷ್ಟರಾದರು. ಇದೀಗ ರೈತರ ಸಾಲಮನ್ನಾ ಮಾಡದೆ ವಚನ ಭ್ರಷ್ಟರಾಗಿದ್ದಾರೆ. ಇದು ಅಣ್ಣ ತಮ್ಮಂದಿರ ಬಜೆಟ್ ಎಂದು ರಾಜ್ಯದ ಜನರಿಗೆ ಗೊತ್ತಾಗಿದೆ. ಅದಕ್ಕೆ ರಾಜ್ಯದ ಜನ ನಂಬದೆ ಕಾಂಗ್ರೆಸ್-ಜೆಡಿಎಸ್‍ಗೆ ಬಹುಮತ  ಕೊಟ್ಟಿಲ್ಲ. ಇವರಿಬ್ಬರಿಗೂ ಪ್ರಧಾನಿ ಮೋದಿ ಏಟು ಕೊಡ್ತಾರೆ. ಮತ್ತೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಮತ್ತೆ ಲೋಕಸಭೆ ಚುನಾವಣೆಗೆ ನಿಲ್ಲೋದಿಲ್ಲ. ನಾನು ಶಾಸಕನಾಗಿಯೇ ಮುಂದುವರೆಯುತ್ತೇನೆ. ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಇಂಗಿತವಿಲ್ಲ. ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಸ್ಪಷ್ಟಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News