×
Ad

ಮನೆ ಮಾಲಿಕನ ಮಗಳ ಅತ್ಯಾಚಾರ: ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

Update: 2018-07-10 23:07 IST

ಮೈಸೂರು,ಜು.10: ಮನೆ ಮಾಲೀಕನ ಮಗಳ ಮೇಲೆಯೇ ಅತ್ಯಾಚಾರವೆಸಗಿ ಆಕೆ ಗರ್ಭಿಣಿಯಾಗಲು ಕಾರಣವಾಗಿದ್ದ ವ್ಯಕ್ತಿಗೆ ಮೈಸೂರು ನ್ಯಾಯಾಲಯ 10 ವರ್ಷ ಕಠಿಣ ಸಜೆ ಹಾಗೂ 50 ಸಾವಿರ ರೂ.ದಂಡ ವಿಧಿಸಿದೆ.

ಮೂಲತಃ ವಿರಾಜಪೇಟೆ ತಾಲೂಕು ಬೋಪಿನಕೇರಿಯವನಾದ ಮೈಸೂರಿನ ಶ್ರೀರಾಂಪುರ ನಿವಾಸಿ ಶ್ರೀನಿವಾಸ್ ಅಲಿಯಾಸ್ ನವೀನ್ ಶಿಕ್ಷೆಗೊಳಗಾಗ ವ್ಯಕ್ತಿ. ಈತ ಶ್ರೀರಾಂಪುರದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ತನ್ನ ತಂಗಿಯೊಂದಿಗೆ ವಾಸವಾಗಿದ್ದ. 2011ರಲ್ಲಿ ತಂಗಿ ಊರಿಗೆ ಹೋಗಿದ್ದ ಸಮಯದಲ್ಲಿ ಮನೆಯ ಮಾಲಿಕನ ಮಗಳನ್ನು ನಾಯಿಗೆ ಅನ್ನ ಮಾಡಿಕೊಡುವಂತೆ ಕರೆದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಆದರೆ ಸಂತ್ರಸ್ತೆ ಈ ವಿಚಾರವನ್ನು ಯಾರಲ್ಲಿಯೂ ಹೇಳಿರಲಿಲ್ಲ. ಆರೋಗ್ಯದಲ್ಲಿ ಏರುಪೇರಾದ ಕಾರಣ ಆಕೆ ಗರ್ಭಿಣಿ ಎನ್ನುವುದು ತಿಳಿದು ಬಂದಿದ್ದು, ನಿಜಾಂಶ ತಿಳಿದು ಬಂದ ಹಿನ್ನೆಲೆಯಲ್ಲಿ ನವೀನ್ ನನ್ನು ಕೇಳಿದಾಗ ಒಪ್ಪಿಕೊಂಡಿರಲಿಲ್ಲ ಎನ್ನಲಾಗಿದೆ.

ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದ. ಮನೆಯವರೆಲ್ಲ ಸೇರಿ ಇಬ್ಬರಿಗೂ ಮದುವೆ ಮಾಡಿಸಲು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕಾಯುತ್ತಿದ್ದಾಗ ನವೀನ್ ಬಾರದೇ ತಲೆ ಮರೆಸಿಕೊಂಡಿದ್ದ. ಅತ್ಯಾಚಾರ ಪ್ರಕರಣ ದಾಖಲಿಸಿ, ಮಹಿಳಾ ಠಾಣೆ ಪೊಲೀಸರು ಆತನ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಮೈಸೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಚಂದ್ರಶೇಖರ್ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅತ್ಯಾಚಾರ ಕಾಯ್ದೆಯಡಿ ಆರೋಪಿಗೆ 10ವರ್ಷ ಕಠಿಣ ಸಜೆ ಮತ್ತು 50,000 ರೂ.ದಂಡ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News