ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ನೌಕರರ ಧರಣಿ

Update: 2018-07-10 17:46 GMT

ಮಂಡ್ಯ, ಜು.10: ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಉಳಿವು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ನೌಕರರು ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಿಂದ ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿ ಹಾಗೂ ಕೇಂದ್ರ ಸರಕಾರಕ್ಕೆ ಬೇಡಿಕೆ ಪತ್ರವನ್ನು ಸಲ್ಲಿಸಿದರು. ಶೂನ್ಯ ಜಂಟೀ ಖಾತೆ ತೆರೆಯಲು ವಿರೋಧವಿಲ್ಲ. ಆದರೆ, ಅದರಲ್ಲಿರುವ ನಕಾರಾತ್ಮಕ ಅಂಶಗಳನ್ನು ತೆಗೆಯಬೇಕು. ಬಾಲವಿಕಾಸ ಸಮಿತಿಯಲ್ಲಿನ ಕೆಲವು ನಿರ್ಬಂಧಗಳನ್ನು ತೆಗೆದುಹಾಕಿ ಇಲಾಖೆಯೇ ಮೇಲ್ವಿಚಾರಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳು ಕಡಿಮೆಯಾಗುವ ಹಿನ್ನೆಲೆಯಲ್ಲಿ ಸರಕಾರಿ ಶಾಲೆಗಳಲ್ಲಿ ಎಲ್‍ಕೆಜಿ-ಯುಕೆಜಿ ತರಗತಿ ನಿಲ್ಲಿಸಿ, ಅಂಗನವಾಡಿ ಕೇಂದ್ರಗಳಲ್ಲೇ ತರಗತಿ ಪ್ರಾರಂಭಿಸಬೇಕು. ಪ್ರತಿ ತಿಂಗಳು ಗೌರವಧನ ಪಾವತಿಸಬೇಕು ಎಂದು ಆಗ್ರಹಿಸಿದರು.

ಇತರ ಬೇಡಿಕೆಗಳು: ಮೇಲ್ವಿಚಾರಕಿ ಹುದ್ದೆಗಳ ನೇಮಕಾತಿಯಲ್ಲಿ ಶೇ.50 ರಷ್ಟನ್ನು ಅಂಗನವಾಡಿ ನೌಕರರಿಗೆ ಮುಂಬಡ್ತಿ ಕೊಡಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಸಂಪೂರ್ಣ ಅಂಗನವಾಡಿ ಕೇಂದ್ರಗಳನ್ನಾಗಿ ಪರಿವರ್ತಿಸಿ, ಅಂಗನವಾಡಿ ನೌಕರರಿಗೆ ಇರುವ ಸೌಲಭ್ಯವನ್ನು ಅವರಿಗೂ ಅನ್ವಯಿಸಬೇಕು.  ಕೇಂದ್ರ ಸರಕಾರದ ಮಾತೃವಂದನಾ ಕಾರ್ಯಕ್ರಮಕ್ಕೆ 300 ರೂ. ನಿಗದಿಪಡಿಸಬೇಕು. ಅಂಗನವಾಡಿ ಸಹಾಯಕಿ, ಕಾರ್ಯಕರ್ತೆಯಾಗಿ ಮುಂಬಡ್ತಿ ಪಡೆಯಲು ಇರುವ ವಯಸ್ಸಿನ ಭೌಗೋಳಿಕ ವಿಸ್ತೀರ್ಣದ ಮಿತಿಯನ್ನು ಸಡಿಲಿಸಬೇಕು. ಅನುಕಂಪದ ಕೇವಲ ಮದುವೆಯಾಗದ ಹೆಣ್ಣು ಮಕ್ಕಳಿಗೆ ಎಂಬ ಷರತ್ತು ತೆಗೆದು ಕುಟುಂಬದವರಿಗೆಂದು ತಿದ್ದುಪಡಿ ತರಬೇಕು. ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು.  ಸೇವಾ ನಿಯಮಾವಳಿ ರಚಿಸಬೇಕು.  ಕೇಂದ್ರ ಸರಕಾರ ಕಡಿತ ಮಾಡಿರುವ ಅನುದಾನ ವಾಪಸ್ಸು ಆಗಬೇಕು. ಅಂಗನವಾಡಿ ಕೇಂದ್ರದ ಪಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಸೂಚನೆಯನ್ನು ರಾಜ್ಯ ಸರಕಾರ ಒಪ್ಪಬಾರದು.  

ಕೇಂದ್ರ ಸರಕಾರಕ್ಕೆ ಬೇಡಿಕೆಗಳು:
ಕೇಂದ್ರ ಸರಕಾರ ರಾಜ್ಯ ಸರಕಾರದಷ್ಟೆ ಗೌರವಧನ ಹೆಚ್ಚಳ ಮಾಡಡಬೇಕು. ಇಲಾಖೆಗೆ ನೀಡುವ ಕೇಂದ್ರ ಸರಕಾರದ ಅನುದಾನ ಕಡಿತ ಮಾಡಬಾರದು. ಐಸಿಡಿಎಸ್ ಆಹಾರದ ಕುರಿತು ನೇರ ನಗದು ವರ್ಗಾವಣೆ ಪ್ರಸ್ತಾವ ಕೈಬಿಡಬೇಕು. ಮಕ್ಕಳ ಮನೆ ತೆರೆಯಬಾರದು, ಯಾವುದೇ ಹಂತದ ಖಾಸಗೀಕರಣ ಕೈಬಿಡಬೇಕು. ಸರಕಾರಿ ಯೋಜನೆಗಳಲ್ಲಿ ದುಡಿಯುವ ಎಲ್ಲರಿಗೂ ಕನಿಷ್ಠ ವೇತನ ಜಾರಿಗೆ ತರಬೇಕು. 

ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಮಂಡಲಿಗಳು ಮತ್ತು ಸಾಮಾಜಿಕ ಭದ್ರತಾ ನಿಧಿ ಸ್ಥಾಪನೆ, ಸಾಮಾಜಿಕ ರಕ್ಷಣಾ ಯೋಜನೆಗಳ ಸಮರ್ಪಕ ಜಾರಿ, ವಸತಿಹೀನ ಕಾರ್ಮಿಕರಿಗೆ ವಸತಿ ಯೋಜನೆಗಳ ಜಾರಿ, ರಾಜ್ಯದಲ್ಲಿನ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮಾಡಬಾರದು. ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವ ಕಾನೂನು ಜಾರಿಗೊಳಿಸಬೇಕು.

ಕರ್ನಾಟಕ ರಾಜ್ಯ ಅಂಗವನಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಜಯಲಕ್ಷ್ಮಮ್ಮ, ಗೌರವಾಧ್ಯಕ್ಷೆ ಮಂಜುಳಾರಾಜ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಪ್ರಮೀಳಕುಮಾರಿ, ಲತಾ, ಕಮಲ, ಶಿವಮ್ಮ, ರೋಹಿಣಿ, ಜಯಶೀಲ, ಎಂ. ಗೀತಾ, ಎಂ.ಬಿ.ಸವಿತಾ, ಪುಷ್ಪಾವತಿ, ಮೀನಾಕ್ಷಿ, ಚಂಪಾಕುಮಾರಿ, ಶೋಭಾ, ಗಾಯಿತ್ರಿ, ಇತರ ಮುಖಂಡರು ನೇತೃತ್ವವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News