ರೈಲು ಮಾರ್ಗಕ್ಕೆ ಅನುಮತಿ ಬೇಡ: ಸಿಎಂ ಗೆ ಮನವಿ ಸಲ್ಲಿಸಿದ ಸಂಸದ ಪ್ರತಾಪ್ ಸಿಂಹ

Update: 2018-07-10 18:30 GMT

ಮಡಿಕೇರಿ, ಜು.10: ಕೊಡಗು–ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್‍ಸಿಂಹ ಅವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದು, ಉದ್ದೇಶಿತ ತಲಶ್ಶೇರಿ-ಮೈಸೂರು ರೈಲು ಮಾರ್ಗ ಅನುಷ್ಠಾನಕ್ಕೆ ರಾಜ್ಯ ಸರಕಾರದಿಂದ ಅನುಮತಿ ನೀಡದಿರುವಂತೆ ಮನವಿ ಮಾಡಿದ್ದಾರೆ.

ಕೊಡಗು ಜಿಲ್ಲೆ ಭೌಗೋಳಿಕ ಮತ್ತು ಸಾಂಸ್ಕೃತಿಕವಾಗಿ ವಿಭಿನ್ನವಾಗಿರುವ ಪುಟ್ಟ ಜಿಲ್ಲೆಯಾಗಿದ್ದು, ಅಪರಿಮಿತ ಪ್ರಕೃತಿ ಸಂಪತ್ತಿನ ನೆಲೆಬೀಡು ಆಗಿದೆ. ಕೇರಳ ಸರಕಾರದ ರೈಲು ಅಭಿವೃದ್ಧಿ ನಿಗಮ ಸಿದ್ಧಪಡಿಸಿರುವ ಈ ರೈಲು ಮಾರ್ಗ ದಕ್ಷಿಣ ಕೊಡಗಿನಲ್ಲಿ ಸುಮಾರು 65 ಕಿ.ಮೀ ದೂರ ಹಾದುಹೋಗಲಿದ್ದು, ಈ ಯೋಜನೆ ಜಾರಿಗೆ ಬಂದಿದ್ದೇ ಆದಲ್ಲಿ ಕೊಡಗಿನಲ್ಲಿ ಸುಮಾರು 2 ಲಕ್ಷ ಮರಗಳ ಮಾರಣಹೋಮವಾಗಲಿದೆ. ಈಗಾಗಲೇ ವ್ಯಾಪಕ ಅರಣ್ಯ ನಾಶದಿಂದಾಗಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣವೇ ಕಡಿಮೆಯಾಗಿದ್ದು, ಈ ಮಾರ್ಗ ನಾಗರಹೊಳೆ ಮೂಲಕ ಹಾದು ಹೋಗುವುದರಿಂದ ಅಮೂಲ್ಯ ವನ್ಯಜೀವಿಗಳಿಗೂ ತೊಂದರೆಯಾಗಲಿದೆ ಅಲ್ಲದೆ ಕಾವೇರಿ ನದಿಯಲ್ಲಿ ನೀರಿನ ಹರಿಯುವಿಕೆ ಕಡಿಮೆಯಾಗಲಿದೆ ಎಂದು ವಿವರಿಸಿದ್ದಾರೆ.

ಉದ್ದೇಶಿತ ರೈಲು ಮಾರ್ಗಕ್ಕೆ ಕೊಡಗು ಜಿಲ್ಲೆಯಾದ್ಯಂತ ತೀವ್ರ ವಿರೋಧವಿದ್ದು ಸ್ಥಳೀಯ ಸಂಘಸಂಸ್ಥೆಗಳು, ಪರಿಸರವಾದಿಗಳು, ಜಿಲ್ಲೆಯ ಶಾಸಕರು ಹಾಗೂ ಸಂಸದನಾಗಿ ತನ್ನ ವಿರೋಧವೂ ಇದೆ. ಆದ್ದರಿಂದ ಉದ್ದೇಶಿತ ರೈಲು ಮಾರ್ಗಕ್ಕೆ ಯಾವುದೇ ಕಾರಣಕ್ಕೂ ರಾಜ್ಯ ಸರಕಾರದಿಂದ ಅನುಮತಿ ನೀಡಬಾರದು ಎಂದು ಪ್ರತಾಪ್‍ ಸಿಂಹ ಕ್ಷೇತ್ರದ ಜನತೆಯ ಪರವಾಗಿ ಮನವಿ ಮಾಡಿಕೊಂಡಿದ್ದಾರೆ. 

ಅನುಮತಿ ನೀಡಿಲ್ಲ
ಮೈಸೂರು-ತಲಶ್ಶೇರಿ ರೈಲು ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ಸರ್ವೇ ನಡೆಸಲು ರಾಜ್ಯ ಸರಕಾರ ಕೇರಳ ಸರಕಾರಕ್ಕೆ ಅನುಮತಿ ನೀಡಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.

ವಿಧಾನಪರಿಷತ್‍ನಲ್ಲಿ ಸದಸ್ಯ ಸುನಿಲ್ ಸುಬ್ರಮಣಿ ಅವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿಗಳು, ಮೈಸೂರು-ತಲಶ್ಶೇರಿ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ಕೇರಳ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಹಂತದಲ್ಲಿ ಎರಡು ಸಭೆಗಳು ನಡೆದಿದ್ದು, ಈ ಸಭೆಯಲ್ಲಿ  ರೈಲು ಮಾರ್ಗವು ಆನೆಗಳ ಕಾರಿಡಾರ್ ಮೂಲಕ ಹಾದು ಹೋಗುವುದರಿಂದ ಆ ಭಾಗದಲ್ಲಿ ಮನುಷ್ಯರು ಮತ್ತು ಆನೆಗಳ ನಡುವಿನ ಸಂಘರ್ಷ ಹೆಚ್ಚಾಗುವ ಬಗ್ಗೆ ರಾಜ್ಯ ಸರಕಾರ ತಿಳಿಸಿದೆ ಎಂದು ಹೇಳಿದ್ದಾರೆ.

ಕೇರಳ ಸರಕಾರವು ಈ ಮಾರ್ಗಕ್ಕೆ ಸಂಬಂಧಿಸಿದಂತೆ ಸರ್ವೆ ಮಾಡಲು ಅನುಮತಿ ನೀಡುವಂತೆ ಕೋರಿದ್ದು, ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಸರಕಾರ ತಿಳಿಸಿದೆಯೇ ಹೊರತು ಸರ್ವೆ ನಡೆಸಲು ಅನುಮತಿ ನೀಡಿಲ್ಲ ಎಂದೂ ಮುಖ್ಯಮಂತ್ರಿಯವರು ಸುನಿಲ್ ಸುಬ್ರಮಣಿ ಅವರ ಪ್ರಸ್ತಾವನೆಗೆ ಉತ್ತರಿಸಿದ್ದಾರೆ.

ಈ ರೈಲು ಮಾರ್ಗದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸ್ಥಳೀಯರ ಭಾವನೆ, ಯೋಜನೆ ಅನುಷ್ಠಾನದಿಂದ ವನ್ಯಜೀವಿ ಹಾಗೂ ಪರಿಸರ ಮೇಲಾಗುವ ಪರಿಣಾಮ ಮತ್ತು ರಾಜ್ಯ ಸರಕಾರದ ಮೇಲಾಗುವ ಆರ್ಥಿಕ ಪರಿಣಾಮ ಮುಂತಾದ ಅಂಶಗಳನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News