ತ್ಯಾಜ್ಯ ಗುಂಡಿಯಲ್ಲಿ ತೇಲುತ್ತಿರುವ ಸ್ವಚ್ಛತಾ ಆಂದೋಲನ

Update: 2018-07-11 03:32 GMT

ಮಂಗಳವಾರದ ಪತ್ರಿಕೆಗಳಲ್ಲಿ ಎರಡು ಘಟನೆಗಳು ಸಣ್ಣದಾಗಿ ಸುದ್ದಿಯಾದವು. ಉತ್ತರ ಭಾರತದ ಗಾಝಿಯಾಬಾದ್‌ನ ಲೋನಿ ಪ್ರದೇಶದಲ್ಲಿ ಮಲದ ಗುಂಡಿಗೆ ಇಳಿದ ಮೂವರು ಕಾರ್ಮಿಕರು ಮೃತಪಟ್ಟರು. ಗುಂಡಿಯೊಳಗೆ ತುಂಬಿದ್ದ ತ್ಯಾಜ್ಯಗಳನ್ನು ಹೊರತೆಗೆಯಲು ಇಳಿದಾಗ ಈ ದುರಂತ ಸಂಭವಿಸಿದೆ. ಇಂತಹ ಘಟನೆಗಳು ಪದೇ ಪದೇ ಸಂಭವಿಸುತ್ತಿರುವುದರಿಂದ ಮತ್ತು ಮೃತರ ಹೆಸರಿನಲ್ಲಿ ಯಾವುದೇ ರಾಜಕೀಯ ಮಾಡಲು ಸಾಧ್ಯವಿಲ್ಲದೇ ಇರುವುದರಿಂದ ಈ ಬಗ್ಗೆ ರಾಜಕೀಯ ನಾಯಕರು ಅತಿಯಾದ ಆಸಕ್ತಿಯನ್ನು ಹೊಂದಿಲ್ಲ. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಆರು ತಿಂಗಳುಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರತ್ಯೇಕ ಘಟನೆಗಳೇ ಆಗಿದ್ದರೂ ಇವೆರಡಕ್ಕೂ ಆಳದಲ್ಲಿ ಸಂಬಂಧವಿದೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ದಿನದಿಂದ ‘ಸ್ವಚ್ಛತೆ’ಯ ಬಗ್ಗೆ ಮಾತನಾಡುತ್ತಿದ್ದಾರೆ. ಸ್ವಚ್ಛತಾ ಆಂದೋಲನಕ್ಕಾಗಿ ಕೋಟ್ಯಂತರ ರೂಪಾಯಿಯನ್ನು ಸುರಿಯುತ್ತಿದ್ದಾರೆ. ಆ ಹಣದಲ್ಲಿ ಬಹುತೇಕ ಜಾಹೀರಾತಿಗಾಗಿಯೇ ವ್ಯಯವಾಗಿದೆ. ಸ್ವಚ್ಛತಾ ಆಂದೋಲನದ ಹೆಸರಿನಲ್ಲಿ ಸರಕಾರ, ಪ್ರತ್ಯೇಕ ತೆರಿಗೆಯನ್ನೂ ಜನರ ಮೇಲೆ ಹೇರಿದೆ. ಇಷ್ಟೆಲ್ಲ ಆಗಿ ಈ ದೇಶದಲ್ಲಿ ಸ್ವಚ್ಛತೆಯ ವಿಷಯದಲ್ಲಿ ಏನಾದರೂ ಮಾರ್ಪಾಡಾಗಿದೆಯೇ ಎಂದು ನೋಡಿದರೆ; ನಿರಾಸೆ ನಮ್ಮದಾಗುತ್ತದೆ. ಈಗಲೂ ಮಲದ ಗುಂಡಿಗೆ ಮನುಷ್ಯರನ್ನೇ ಇಳಿಸಲಾಗುತ್ತಿದೆ. ಅವರು ಸತ್ತರೆ ಅವರ ಬದುಕಿಗೆ ಯಾವುದೇ ಬೆಲೆಯೂ ಇಲ್ಲ. ಯಾವ ಪರಿಹಾರವೂ ಇಲ್ಲ. ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಸರಿಯಾದ ವೇತನವನ್ನು ಸರಿಯಾದ ಸಮಯದಲ್ಲಿ ನೀಡುವುದಕ್ಕೂ ನಮ್ಮ ಸರಕಾರ ವಿಫಲವಾಗುತ್ತಿದೆ. ಇವೆಲ್ಲವೂ ಸ್ವಚ್ಛತಾ ಆಂದೋಲನದ ಸಂಪೂರ್ಣ ವೈಫಲ್ಯವನ್ನು ನಮ್ಮ ಮುಂದೆ ತೆರೆದಿಡುತ್ತದೆ.

ರಸ್ತೆ ಬದಿಯಲ್ಲಿ ಕೋಟಿ ಕೋಟಿ ರೂ.ಯನ್ನುಸುರಿದು ಜಾಹಿರಾತು ಫಲಕ ಹಾಕಿದಾಕ್ಷಣ ನಮ್ಮ ಬೀದಿ ಚೊಕ್ಕವಾಗುವುದಿಲ್ಲ. ಕೋಟಿ ಕೋಟಿ ಹಣವನ್ನು ಇಲಾಖೆಗಳಿಗೆ ಬಿಡುಗಡೆ ಮಾಡಿದಾಕ್ಷಣ, ಮಲದ ಗುಂಡಿ ಶುಚಿಯಾಗುವುದಿಲ್ಲ. ನರೇಂದ್ರ ಮೋದಿಯ ಭಾಷಣ ಕೇಳಿದಾಕ್ಷಣ ಕಸಗಳೆಲ್ಲ ತನ್ನಷ್ಟಕ್ಕೆ ಹೋಗಿ ಕಸದ ಬುಟ್ಟಿ ಸೇರುವುದಿಲ್ಲ. ಇಂದು ನಮ್ಮ ರಸ್ತೆ, ನಮ್ಮ ಚರಂಡಿ ಬೆಳ್ಳಂಬೆಳಗ್ಗೆ ಶುಚಿಯಾಗಿದ್ದರೆ ಅದರ ಹಿಂದೆ ಲಕ್ಷಾಂತರ ಪೌರ ಕಾರ್ಮಿಕರ ಬೆವರಿದೆ. ನೋವು, ದುಮ್ಮಾನಗಳಿವೆ. ನರೇಂದ್ರ ಮೋದಿಯವರು ಸ್ವಚ್ಛತಾ ಆಂದೋಲನ ಶುರು ಮಾಡುವುದಕ್ಕೆ ಮೊದಲೇ ಅವರು ನಮ್ಮ ರಸ್ತೆಯನ್ನು ಗುಡಿಸುತ್ತಾ ಬಂದಿದ್ದಾರೆ. ಕಸದ ತೊಟ್ಟಿಯೊಳಗಿರುವ ಕೊಳಚೆಗಳನ್ನು ಲಾರಿಗಳಿಗೆ ಏರಿಸುತ್ತಾ ಬಂದಿದ್ದಾರೆ. ಕೋಟ್ಯಂತರ ಹಣ ವ್ಯಯಿಸಿದರೂ ಸ್ವಚ್ಛತಾ ಆಂದೋಲನ ಯಾಕೆ ಯಶಸ್ವಿಯಾಗಲಿಲ್ಲ ಎಂದರೆ, ಈ ಆಂದೋಲನದ ಬೆನ್ನೆಲುಬಾಗಿರುವ ಪೌರ ಕಾರ್ಮಿಕರನ್ನೇ ನಮ್ಮ ನಾಯಕರು ನಿರ್ಲಕ್ಷಿಸಿದ್ದಾರೆ. ಬರೇ ಸಮಾರಂಭ, ಘೋಷಣೆ, ಭಾಷಣ ಇತ್ಯಾದಿಗಳಲ್ಲೇ ಈ ದೇಶವನ್ನು ಸ್ವಚ್ಛ ಮಾಡಲು ಹೊರಟಿದ್ದಾರೆ. ಸ್ವಚ್ಛತಾ ಆಂದೋಲನ ಆರಂಭವಾಗಬೇಕಾದುದು ಈ ಕಾರ್ಮಿಕರಿಗೆ ಮೂಲಭೂತವಾದ ಸೌಕರ್ಯಗಳನ್ನು ಒದಗಿಸುವ ಮೂಲಕ. ಸ್ವಚ್ಛತಾ ಕಾರ್ಯಗಳಲ್ಲಿ ಅತ್ಯಾಧುನಿಕ ಯಂತ್ರಗಳನ್ನು ಬಳಕೆ ಮಾಡುವ ಮೂಲಕ. ಆದರೆ ಸಂಗ್ರಹಿಸಿ, ವ್ಯಯಿಸಿದ ಹಣದಲ್ಲಿ ಐದು ಪೈಸೆಯೂ ಈ ಕಾರ್ಮಿಕರಿಗಾಗಿ ವ್ಯಯವಾಗಲಿಲ್ಲ ಎನ್ನುವುದನ್ನು ಗಾಝಿಯಾ ಬಾದ್‌ನಲ್ಲಿ ನಡೆದ ದುರಂತ ಹೇಳುತ್ತದೆ. ನಾವಿಂದು, ಚೀನಾ, ಸಿಂಗಾಪುರವಾಗುವ ಬಗ್ಗೆ ಮಾತನಾಡುತ್ತೇವೆ. ಬುಲೆಟ್ ಟ್ರೈನ್ ಆರಂಭಿಸಿ ವಿಶ್ವದ ಗಮನವನ್ನು ನಮ್ಮೆಡೆಗೆ ಸೆಳೆಯಲು ಹೊರಟಿದ್ದೇವೆ. ಆದರೆ, ಇದೇ ಸಂದರ್ಭದಲ್ಲಿ, ಮಲದ ಗುಂಡಿಯಲ್ಲಿ ತೇಲುತ್ತಿರುವ ಪೌರ ಕಾರ್ಮಿಕರ ಹೆಣಗಳು ಈ ದೇಶದ ಕುರಿತಂತೆ ವಿಶ್ವಕ್ಕೆ ಬೇರೆಯೇ ಸಂದೇಶವನ್ನು ನೀಡುತ್ತಿವೆ. ನಮ್ಮ ಇಸ್ರೋ ಮಂಗಳಕ್ಕೆ, ಚಂದ್ರನೆಡೆಗೆ ಮನುಷ್ಯನನ್ನು ಕಳುಹಿಸುವ ಬಗ್ಗೆ ಯೋಜನೆ ಹಾಕಿಕೊಂಡಿದೆ. ವಿವಿಧ ರೊಬೋಟ್‌ಗಳನ್ನು ನಾವು ನಮ್ಮ ದೈನಂದಿನ ಕೆಲಸಗಳಲ್ಲಿ ಬಳಸಲು ಹೊರಟಿದ್ದೇವೆ. ಡಿಜಿಟಲ್ ಬ್ಯಾಂಕಿಂಗ್‌ನ ಬಗ್ಗೆ ದಿನ ನಿತ್ಯ ಪ್ರಧಾನಿಯವರು ಮಾತನಾಡುತ್ತಿರುವಾಗ. ಮಲದ ಗುಂಡಿಯೊಳಗೆ ಇಳಿಸಲು ಮಾತ್ರ ಯಂತ್ರಗಳು ಯಾಕೆ ಬಳಕೆಯಾಗುತ್ತಿಲ್ಲ? ಚೀನಾ, ಸಿಂಗಾಪುರದಲ್ಲಿ ತ್ಯಾಜ್ಯಗುಂಡಿಗಳನ್ನು, ಮ್ಯಾನ್‌ಹೋಲ್‌ಗಳನ್ನು ಶುಚಿಗೊಳಿಸಲು ಯಂತ್ರಗಳನ್ನು ಯಶಸ್ವಿಯಾಗಿ ಬಳಸುತ್ತಿದ್ದಾರೆ. ಇದು ಭಾರತದಂತಹ ದೇಶದಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ? ಮೋದಿಯ ಸ್ವಚ್ಛತಾ ಆಂದೋಲನ ಯಾಕೆ ಈ ಕಡೆಗೆ ಗಮನ ಹರಿಸುತ್ತಿಲ್ಲ? ಯಾಕೆಂದರೆ, ಈ ದೇಶದಲ್ಲಿ ಮಲದ ಗುಂಡಿಗೆ ಇಳಿಸುವುದಕ್ಕಾಗಿಯೇ ಒಂದು ಮನುಷ್ಯ ಜಾತಿಯಿದೆ. ಅವರು ಅದರಲ್ಲೇ ತಮ್ಮ ಅಧ್ಯಾತ್ಮ, ಮೋಕ್ಷವನ್ನು ಕಾಣಬೇಕು ಎಂದು ಈ ಹಿಂದೊಮ್ಮೆ ನಮ್ಮ ಪ್ರಧಾನಿಯವರೇ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಈ ಮನಃಸ್ಥಿತಿಯ ಕಾರಣದಿಂದಲೇ, ಮಲದ ಗುಂಡಿಗೆ ಇಳಿಯುವುದು ಅವರ ಕರ್ತವ್ಯ ಎಂದು ಪ್ರಧಾನಿಯವರು ಭಾವಿಸಿದ್ದಾರೆ ಮತ್ತು ಆ ಜಾತಿಯ ಜನರು ಭಾವನೆಗಳಿಲ್ಲದ ನಿರ್ಜೀವಿಗಳು ಎಂದು ತಿಳಿದುಕೊಂಡಿದ್ದಾರೆ. ಸ್ವಚ್ಛತಾ ಆಂದೋಲನಕ್ಕಾಗಿ ಸಂಗ್ರಹವಾಗುವ ಹಣ ಈ ಕಾರಣದಿಂದಲೇ ಪೌರ ಕಾರ್ಮಿಕರ ಬದುಕನ್ನು ಮೇಲೆತ್ತುವ ಕಾರಣಕ್ಕಾಗಿ ಬಳಕೆಯಾಗುತ್ತಿಲ್ಲ.

ಬೆಂಗಳೂರಿನಲ್ಲಿ ನಡೆದಿರುವ ಪೌರಕಾರ್ಮಿಕನ ಆತ್ಮಹತ್ಯೆ ಪ್ರಕರಣವಂತೂ ಕ್ರೌರ್ಯದ ಪರಮಾವಧಿಯಾಗಿದೆ. ಈ ಕಾರ್ಮಿಕನಿಗೆ ಆರು ತಿಂಗಳುಗಳಿಂದ ವೇತನ ನೀಡದೆ ಬಿಬಿಎಂಪಿ ಸತಾಯಿಸುತ್ತಿತ್ತು. ನಮ್ಮ ರಸ್ತೆಯನ್ನು ಗುಡಿಸುವವರಿಗೆ, ಬೀದಿಯನ್ನು ಸ್ವಚ್ಛಗೊಳಿಸುವವರಿಗೆ, ಮ್ಯಾನ್‌ಹೋಲ್‌ಗಿಳಿದು ತ್ಯಾಜ್ಯತೆಗೆಯುವ ಕಾರ್ಮಿಕರಿಗೆ ವೇತನವನ್ನೇ ಕೊಡಲು ಸತಾಯಿಸುವ ಅಧಿಕಾರಿಗಳು ನಮ್ಮ ನಡುವೆ ಇರುವಾಗ, ಸ್ವಚ್ಛತೆಯ ಕುರಿತಂತೆ ನಾವು ಮಾತನಾಡುವುದಕ್ಕೆ ಏನು ಅರ್ಥವಿದೆ? ಈ ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು, ವ್ಯಕ್ತಿತ್ವವನ್ನು ಒತ್ತೆಯಿಟ್ಟು ಈ ಕೆಲಸ ಮಾಡುತ್ತಾರೆ. ಇಂತಹ ಕಾರ್ಮಿಕರಿಗೆ ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸುವುದು, ಬೂಟು, ಕೈಗವಸು ನೀಡುವುದು ಸರಕಾರದ ಕರ್ತವ್ಯ. ಆದರೆ ವೇತನವನ್ನೇ ನೀಡಲು ಸಿದ್ಧರಿಲ್ಲದ ಅಧಿಕಾರಿಗಳಿಂದ ಇವರು ಇನ್ನಿತರ ಸಲಕರಣೆಗಳನ್ನು ನಿರೀಕ್ಷಿಸುವುದು ಸಾಧ್ಯವೇ? ಇಂದು ಹಲವು ಮಹಾನಗರಗಳಲ್ಲಿ ಸ್ವಚ್ಛತೆಯ ಗುತ್ತಿಗೆಯನ್ನು ಖಾಸಗಿಯವರಿಗೆ ನೀಡಲಾಗಿದೆ. ಸರಕಾರ ಒಂದಿಷ್ಟು ಕೊಡುಗೆಗಳನ್ನು ಕಾರ್ಮಿಕರಿಗಾಗಿ ನೀಡಿದೆಯಾದರೂ, ಅದು ಈ ಖಾಸಗಿ ಗುತ್ತಿಗೆದಾರರಿಂದಾಗಿ ಕಾರ್ಮಿಕರನ್ನು ತಲುಪುತ್ತಿಲ್ಲ. ಕಾರ್ಮಿಕರಿಗೆ ಕೊಟ್ಟಿರುವುದೆಲ್ಲ ದಾಖಲೆಗಳಲ್ಲಿರುತ್ತವೆ. ಆದರೆ ಕಾರ್ಮಿಕರಿಗೆ ತಲುಪಿರುವುದಿಲ್ಲ. ಇಂದು ಕಾರ್ಮಿಕರು ಒಂದು ವಾರ, ತಾವು ಮಾಡುವ ಕೆಲಸವನ್ನು ನಿಲ್ಲಿಸಿದ್ದೇ ಆದರೆ, ನಮ್ಮ ದೇಶದ ನಗರಗಳೆಲ್ಲ ಕೊಳೆಗೇರಿಗಳಾಗಿ ಪರಿವರ್ತನೆಯಾಗುತ್ತವೆೆ. ಈ ದೇಶ ಸುಂದರವಾಗಿರಬೇಕಾದರೆ, ಆರೋಗ್ಯಕರವಾಗಿರಬೇಕಾದರೆ, ಶುಚಿಯಾಗಿರಬೇಕಾದರೆ, ಸರಕಾರ ಮೊದಲು ಪೌರ ಕಾರ್ಮಿಕರ ಬದುಕನ್ನು ಮೇಲೆತ್ತುವುದಕ್ಕೆ ಪ್ರಯತ್ನಿಸಬೇಕು. ತ್ಯಾಜ್ಯಗುಂಡಿ ಶುಚಿಗೊಳಿಸುವ ಸಂದರ್ಭದಲ್ಲಿ ಮೃತಪಟ್ಟರೆ ಕನಿಷ್ಠ 25 ಲಕ್ಷ ರೂಪಾಯಿಯಾದರೂ ಅವರಿಗೆ ಪರಿಹಾರವಾಗಿ ನೀಡಬೇಕು. ಜೊತೆಗೆ ಅವರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುವ ವ್ಯವಸ್ಥೆ ಮಾಡಬೇಕು. ಕುಟುಂಬಕ್ಕೆ ಪಿಂಚಣಿ ನೀಡಬೇಕು. ಯಾಕೆಂದರೆ, ಪೌರ ಕಾರ್ಮಿಕರು ಗಡಿ ಕಾಯುವ ಯೋಧರಷ್ಟೇ ಮುಖ್ಯ. ನಮ್ಮ ನಗರ, ನಾಡು ಶುಚಿಯಾಗಿರಬೇಕು ಎನ್ನುವ ಕಾಳಜಿಯಿಂದ ತಮ್ಮ ಬದುಕನ್ನು ಒತ್ತೆಯಿಟ್ಟು ಅವರು ಮಲದಗುಂಡಿಗೆ ಇಳಿದಿರುತ್ತಾರೆ. ತಮ್ಮ ಪ್ರಾಣವನ್ನು ಅರ್ಪಿಸುತ್ತಾರೆ. ಆ ತ್ಯಾಗವನ್ನು ಗೌರವಿಸುವ ಮೂಲಕ ನಾವು ಸ್ವಚ್ಛತಾ ಆಂದೋಲನದ ಧ್ವಜವನ್ನು ಎತ್ತಿಕೊಳ್ಳಬೇಕು. ಆಗ ಮಾತ್ರ ಸ್ವಚ್ಛತಾ ಆಂದೋಲನ ಅರ್ಥ ಪಡೆದುಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News