ಚಿಕ್ಕಮಗಳೂರು: ನೀರಿನಲ್ಲಿ ಕೊಚ್ಚಿ ಹೋಗಿ ಯುವಕ ಮೃತ್ಯು; ಶಂಕೆ

Update: 2018-07-11 13:31 GMT

ಚಿಕ್ಕಮಗಳೂರು, ಜು.7: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಜಾಸ್ತಿಯಾಗಿದೆ. ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ ಶೃಂಗೇರಿ ಭಾಗದಲ್ಲಿ ಸತತ ಸುರಿಯುತ್ತಿರುವ ಮಳೆಗೆ ತುಂಗಾ, ಹೇಮಾವತಿ, ಭದ್ರಾ ನದಿಗಳು ಸೇರಿದಂತೆ ಹಳ್ಳಕೊಳ್ಳಗಳೂ ತುಂಬಿ ಹರಿಯುತ್ತಿವೆ. ಮಳೆ ಸೃಷ್ಟಿಸುತ್ತಿರುವ ಅವಾಂತರಕ್ಕೆ ಮಂಗಳವಾರ ರಾತ್ರಿ ಯುವಕನೋರ್ವ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆಂದು ಶಂಕಿಸಿ ಹುಡುಕಾಟ ನಡೆಸಿದ ಘಟನೆ ಮಲೆನಾಡು ಭಾಗದಲ್ಲಿ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆತೋಟ ಗ್ರಾಮ ಪಂಚಾಯತ್‍ನ ಮೇಗೂರು ಕಾರೆಮನೆ ಗ್ರಾಮದ ಅಶೋಕ್(21) ನೀರಿನಲ್ಲಿ  ಕೊಚ್ಚಿ ಹೋಗಿದ್ದಾನೆಂದು ಶಂಕಿಸಲಾಗಿರುವ ಯುವಕ ಎಂದು ತಿಳಿದು ಬಂದಿದೆ. ಬುಧವಾರ ಬೆಳಗ್ಗೆ ಹುಲ್ಲನಗದ್ದೆ ಎಂಬಲ್ಲಿರುವ ಸೇತುವೆ ಬಳಿ ಹರಿಯುವ ಹಳ್ಳದಲ್ಲಿ ಯುವಕನ ಬೈಕ್ ಪತ್ತೆಯಾಗಿದ್ದು, ಬೈಕ್ ಪತ್ತೆಯಾದ ಹಿನ್ನೆಲೆಯಲ್ಲಿ ಯುವಕ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯುವಕನಿಗಾಗಿ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸಾರ್ವಜನಿಕರು ಬುಧವಾರ ಹಳ್ಳದಲ್ಲಿ ಶೋಧ ಕಾರ್ಯ ನಡೆಸಿದ್ದರು. ಆದರೆ ಯುವಕನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.

ಕೊಪ್ಪ ತಾಲೂಕಿನ ಕಾರೆಮನೆ ಗ್ರಾಮದ ಅಶೋಕ್(21) ಎಂಬಾತ ಮಂಗಳವಾರ ರಾತ್ರಿ ಬೈಕಿನಲ್ಲಿ ಕೊಗ್ರೆ ಗ್ರಾಮಕ್ಕೆ ಹೋಗಿ ಹಿಂದಿರುಗುತ್ತಿದ್ದಾಗ ಹುಲ್ಲನಗದ್ದೆ ಸೇತುವೆಯಲ್ಲಿ ನೀರು ಅಪಾರ ಪ್ರಮಾಣದಲ್ಲಿ ಹರಿಯುತ್ತಿತ್ತು ಎನ್ನಲಾಗಿದ್ದು, ರಭಸವಾಗಿ ಹರಿಯುತ್ತಿದ್ದ ನೀರನ್ನು ಲೆಕ್ಕಿಸದೇ ಅಶೋಕ್ ಸೇತುವೆ ಮೇಲೆ ಬೈಕ್ ಚಲಾಯಿಸಿದ್ದರಿಂದ ಆತ ಬೈಕಿನೊಂದಿಗೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆಂದು ಹೇಳಲಾಗುತ್ತಿದೆ.

ಬುಧವಾರ ಬೆಳಗ್ಗೆ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆತನಿಗಾಗಿ ಹುಡುಕಾಟ ಆರಂಭಿಸಿದರು. ಕೆಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೈಕ್ ಪತ್ತೆಯಾಗಿದೆ. ಆದರೆ ಸಂಜೆಯವರೆಗೂ ಅಶೋಕನ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಘಟನೆ ಸಂಬಂಧ ಅಶೋಕ್‍ನ ಸಂಬಂಧಿಗಳು ಜಯಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ ಮೇರೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇನ್ನು ಕೊಪ್ಪ ತಾಲೂಕುವ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆಯಿಂದಲೇ ಭಾರೀ ಮಳೆ ಸುರಿಯುತ್ತಿದ್ದು,  ತಾಲೂಕಿನ ಜಯಪುರ ಠಾಣಾ ವ್ಯಾಪ್ತಿಯ ಅಗಳಗಂಡಿ ಬಳಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಇಟ್ಟಿಗೆ ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ಬುಧವಾರ ಬೆಳಗಿನ ಜಾವದ ಭಾರೀ ಮಳೆಗೆರಸ್ತೆ ಕಾಣದಂತಾಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಲಾರಿಯಲ್ಲಿದ್ದ ಚಾಲಕ ಸೇರಿದಂತೆ ನಾಲ್ವರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಉಳಿದಂತೆ ಮೂಡಿಗೆರೆ ತಾಲೂಕಿನ ಕಳಸ, ಕುದುರೆಮುಖ ಭಾಗಗಳಲ್ಲಿಯೂ ಭಾರೀ ಮಳೆ ಮುಂದುವರಿದಿದೆ. ಮಳೆಯಿಂದಾಗಿ ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮಂಗಳವಾರ ರಾತ್ರಿ ಪುನಃ ನೀರಿನಲ್ಲಿ ಮುಳುಗಿ ಹೋಗಿತ್ತು. ಮಳೆ ಸ್ವಲ್ಪ ಕಡಿಮೆಯಾದ ನಂತರ ನದಿಯ ನೀರಿನ ಮಟ್ಟ ಇಳಿಕೆಯಾಗಿದ್ದು, ರಸ್ತೆ ಸಂಚಾರಕ್ಕೆ ಪುನಃ ತೆರೆದುಕೊಂಡಿದೆ. ಕಳೆದ 20 ದಿನಗಳಲ್ಲಿ ಈ ಸೇತುವೆಯು 4ನೇ ಬಾರಿಗೆ ನೀರಿನಲ್ಲಿ ಮುಳುಗಿದಂತಾಗಿದೆ.

ಶೃಂಗೇರಿ ತಾಲೂಕಿನಲ್ಲಿ ಮಂಗಳವಾರ ರಾತ್ರಿ ಬಾರೀ ಮಳೆಯಾಗಿತ್ತು. ಬುಧವಾರ ಬೆಳಗಿನಿಂದ ಮಧ್ಯಾಹ್ನದವರೆಗೆ ಮಳೆ ಸ್ವಲ್ಪ ಕಡಿಮೆಯಾಗಿತ್ತು. ಮಧ್ಯಾಹ್ನದ ನಂತರ ಮಳೆಯ ಆರ್ಭಟ ಮತ್ತೆ ಆರಂಭವಾಯಿತು. ಭಾರೀ ಮಳೆಯಿಂದಾಗಿ ಶೃಂಗೇರಿ-ಆಗುಂಬೆ ರಸ್ತೆಯ ವಿವಿಧೆಡೆಗಳಲ್ಲಿ ಹಲವು ಮರಗಳು ರಸ್ತೆಗೆ ಬಿದ್ದಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ದಿಢೀರ್ ಕಾರ್ಯಾಚರಣೆ ನಡೆಸಿ ರಸ್ತೆಗೆ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನರಸಿಂಹರಾಜಪುರ ಮತ್ತು ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಬುಧವಾರ ಮಳೆಯ ಪ್ರಮಾಣ ಕಡಿಮೆ ಇತ್ತು. ಈ ಎರಡೂ ತಾಲೂಕುಗಳಲ್ಲಿ ಬುಧವಾರ ಆಗಾಗ ಉತ್ತಮ ಮಳೆಯಾಗುತ್ತಿತ್ತು. ಬಯಲು ಭಾಗಗಳಾದ ಕಡೂರು ಮತ್ತು ತರೀಕೆರೆ ತಾಲೂಕುಗಳಲ್ಲಿ ಬೆಳಗಿನಿಂದಲೂ ಸೋನೆ ಮಳೆ ಸುರಿಯುತ್ತಿದ್ದ ಬಗ್ಗೆ ವರದಿಯಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News