×
Ad

ಕೊಡಗಿನಲ್ಲಿ ಮುಂದುವರೆದ ಧಾರಾಕಾರ ಮಳೆ: ರಸ್ತೆಗುರುಳಿದ ಮರಗಳು

Update: 2018-07-11 19:21 IST

ಮಡಿಕೇರಿ, ಜು.11: ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ನಾಡಿನ ಜೀವನದಿ ಕಾವೇರಿ ಉಗಮ ಸ್ಥಳ ತಲಕಾವೇರಿ, ತ್ರಿವೇಣಿ ಸಂಗಮ ಭಾಗಮಂಡಲ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಕಳೆದ ಐದು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ.   

ಭಾಗಮಂಡಲ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದ್ದು, ಭಾಗಮಂಡಲ-ಅಯ್ಯಂಗೇರಿ ವಾಹನ ಸಂಚಾರ ಕಡಿತಗೊಂಡಿದೆ. ಬೋಟ್ ಬಳಸಿ ಅಲ್ಲಿನ ನಾಗರಿಕರಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಮಡಿಕೇರಿ-ಭಾಗಮಂಡಲ ಮಾರ್ಗದ ರಸ್ತೆಯಲ್ಲಿ ನೀರು ಹೆಚ್ಚಳವಾಗಿದೆ. ಭಾಗಮಂಡಲದಲ್ಲಿ ನುರಿತ ಈಜು ತಜ್ಞರು, ಗೃಹ ರಕ್ಷಕದಳದ ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದು, ಪ್ರವಾಹ ಹೆಚ್ಚಾದ ಸಂದರ್ಭದಲ್ಲಿ ಬೋಟ್ ಬಳಸಿ ಅಲ್ಲಿನ ಜನರು ಹಾಗೂ ಪ್ರವಾಸಿಗರಿಗೆ ಸಂಚಾರಕ್ಕೆ ಅನುವು ಮಾಡಿಕೊಡಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ.    

ಕೊಡಗಿನ ದಕ್ಷಿಣ ಭಾಗದಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಲಕ್ಷ್ಮಣ ತೀರ್ಥ ನದಿ ತುಂಬಿ ಹರಿಯುತ್ತಿದೆ. ವ್ಯಾಪಕ ಮಳೆಯಿಂದಾಗಿ ತಿತಿಮತಿ ರಸ್ತೆಯು ಹದಗೆಟ್ಟಿದ್ದು, ಸರಿಪಡಿಸಿ ಸಂಚಾರಕ್ಕೆ ಅವಕಾಶ ಮಾಡಲಾಗಿದೆ. ಹಾಗೆಯೇ ಪೆರುಂಬಾಡಿ-ಮಾಕುಟ್ಟ ರಸ್ತೆ ಮಾರ್ಗದಲ್ಲಿ ಲಘು ವಾಹನಗಳು ಸಂಚರಿಸುತ್ತಿವೆ. ಹೀಗೆ ಜಿಲ್ಲೆಯಾದ್ಯಂತ ನಿರಂತರ ಸುರಿಯುತ್ತಿರುವುದರಿಂದ ಮಳೆಗೆ ಜನರ ಬದುಕು ದುಸ್ತರವಾಗಿದೆ. ಸಂಚಾರ ಹಾಗೂ ಜನಜೀವನ ಪರಿಸ್ಥಿತಿ ಅಸ್ತವ್ಯಸ್ಥ ಉಂಟಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಸುಗಮ ಸಂಚಾರ ಹಾಗೂ ಜನಜೀವನಕ್ಕೆ ಅಗತ್ಯ ಕ್ರಮಕೈಗೊಂಡಿದೆ.    

ಪ್ರವಾಹ ಪೀಡಿತ ಪ್ರದೇಶವಾಗಿರುವ ಭಾಗಮಂಡಲದ ತ್ರಿವೇಣಿ ಸಂಗಮ ತುಂಬಿಹರಿಯುತ್ತಿದ್ದು, ಇಲ್ಲಿನ ನಿವಾಸಿ ವಸಂತ್ 'ಪ್ರತಿ ವರ್ಷ ಮಳೆಗಾಲದ ಅವಧಿಯಲ್ಲಿ ಭಾಗಮಂಡಲದಲ್ಲಿ ಪ್ರವಾಹ ಉಂಟಾಗುತ್ತಿದ್ದು, ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ನಾಗರಿಕರು, ಪ್ರವಾಸಿಗರು ಸೇರಿದಂತೆ ಎಲ್ಲರಿಗೂ ತೊಂದರೆಯಾಗಿದೆ. ಆದ್ದರಿಂದ ಈಗಾಗಲೇ ಸರ್ಕಾರದ ಪ್ರಸ್ತಾವನೆಯಲ್ಲಿರುವಂತೆ ಆದಷ್ಟು ಶೀಘ್ರ ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು. 

ಮುಳುಗು ತಜ್ಞರಾದ ರವಿಮುತ್ತಪ್ಪ ಅವರು, 'ಭಾಗಮಂಡಲ-ಅಯ್ಯಂಗೇರಿ ರಸ್ತೆ ಮಾರ್ಗದಲ್ಲಿ ಬೋಟ್ ಬಳಸಲಾಗುತ್ತಿದೆ. ಮಡಿಕೇರಿ-ಭಾಗಮಂಡಲ ಮಾರ್ಗದಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಬೋಟ್ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಸಂಬಂಧಪಟ್ಟ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು. 

ಶನಿವಾರಸಂತೆಯಲ್ಲೂ ಮಳೆ ತೀವ್ರ
ಶನಿವಾರಸಂತೆ ಕೊಡ್ಲಿಪೇಟೆ ಸೇರಿದಂತೆ ಸುತ್ತಮುತ್ತ ಭಾರೀ ಮಳೆ ಗಾಳಿಯಾಗುತ್ತಿದ್ದು, ಕೆಲವೆಡೆ ರಸ್ತೆಗೆ ಅಡ್ಡಲಾಗಿ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಇದರಿಂದ ಅನೇಕ ಗ್ರಾಮಗಳು ಕಳೆದ ಮೂರು ದಿನಗಳಿಂದ ಕತ್ತಲೆಯಲ್ಲಿ ದಿನದೂಡುತ್ತಿದೆ. ಕೊಡ್ಲಿಪೇಟೆ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು.

ಆಲೂರುಸಿದ್ಧಾಪುರ ಪಂಚಾಯತ್ ಗೆ ಒಳಪಡುವ ಕಣಿವೆ ಬಸವನಹಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಗ್ರಾಮೀಣ ಭಾಗದ ರಸ್ತೆಗಳಲಲಿ ಒಳ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ರಸ್ತೆಯೆಲ್ಲ ಕೆರೆಗಳಾಂತಾಗಿದೆ. ಶನಿವಾರಸಂತೆ ಕುಶಾಲನಗರ ಮುಖ್ಯ ರಸ್ತೆಯ ಆಲೂರುಸಿದ್ಧಾಪೂರ ಸೇರಿದಂತೆ ಅಲ್ಲಲ್ಲಿ ರಸ್ತೆಯ ಒಳ ಚರಂಡಿಗಳು ಮುಚ್ಚಿರುವುದರಿಂದ ಮುಖ್ಯ ರಸ್ತೆಯಲ್ಲೆ ಮಳೆ ನೀರು ಹರಿಯುತ್ತಿದೆ. ಇದರಿಂದ ಗುಂಡಿ ಇರುವ ರಸ್ತೆಗಳು ಕೆರೆಯಂತಾಗಿದೆ.

ಆಟೋದ ಮೇಲೆ ಮರ
ಸೋಮವಾರಪೇಟೆಯ ಐಬಿ ಬಳಿ ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ಆಟೋರಿಕ್ಷಾದ ಮೇಲೆ ಮರ ಉರುಳಿ ಬಿದ್ದಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಮಡಿಕೇರಿ ಮಾರ್ಗದ ಹಟ್ಟಿಹೊಳೆ ಬಳಿಯೂ ಮರ ಬಿದ್ದಿದೆ. ಹಾಲೇರಿ ರಸ್ತೆಯಲ್ಲಿ ಬಿದ್ದ ಬೃಹತ್ ನಂದಿ ಮರವನ್ನು ಸ್ಥಳೀಯ ಯುವಕರು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರು. 

ಕೊಡಗಿನ ಮಳೆ ವಿವರ
ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 87.30 ಮಿ.ಮೀ. ಆಗಿದ್ದು, ಕಳೆದ ವರ್ಷ ಇದೇ ದಿನ 5.44 ಮಿ.ಮೀ ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1855.98 ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 821.09 ಮಿ.ಮೀ ಮಳೆಯಾಗಿತ್ತು.                               

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News