ಚಾಮರಾಜನಗರ: ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

Update: 2018-07-11 15:11 GMT

ಚಾಮರಾಜನಗರ, ಜು.11: ಎಕಾಏಕಿ ಜಗಳ ತೆಗೆದು ವ್ಯಕ್ತಿಯೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಸಾವಿಗೆ ಕಾರಣರಾಗಿದ್ದ ಉಮ್ಮತ್ತೂರು ಗ್ರಾಮದ ನಟರಾಜು ಎಂಬವರಿಗೆ ಅಧಿಕ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ.

ಸಿದ್ದರಾಜು ಹಲ್ಲೆಗೆ ಒಳಗಾಗಿ ಸಾವಿಗೀಡಾದ ವ್ಯಕ್ತಿ. ಕಳೆದ 2013ರ ಜೂನ್ 20ರಂದು ಉಮ್ಮತ್ತೂರು ಗ್ರಾಮದಲ್ಲಿ ನಟರಾಜು ಸಿದ್ದರಾಜುವಿನೊಂದಿಗೆ ಜಗಳ ತೆಗೆದು ಎದೆಗೆ ಮತ್ತು ಹೊಟ್ಟೆಗೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿದ್ದ. ತೀವ್ರ ಗಾಯಗೊಂಡಿದ್ದ ಸಿದ್ದರಾಜುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸಿದ್ದರಾಜು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದರು. 

ಪ್ರಕರಣ ದಾಖಲಾಗಿ ಆರೋಪ ಸಾಭೀತಾದ ಹಿನ್ನಲೆಯಲ್ಲಿ ಆರೋಪಿ ನಟರಾಜುವಿಗೆ ಅಧಿಕ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಡಿ. ವಿನಯ್ ಅವರು ಇಂದು ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ.ದಂಡವನ್ನು ವಿಧಿಸಿ ತೀರ್ಪು ನೀಡಿದರು.

ಪ್ರಕರಣ ಸಂಬಂಧಪಟ್ಟಂತೆ ಮೃತರ ಪತ್ನಿ ಪರಿಹಾರ ಕೋರಿ ಸಿ.ಆರ್.ಪಿ.ಸಿ ಕಲಂ 357 ಎ (2)ರಡಿಯಲ್ಲಿ ಸಲ್ಲಿಸಿರುವ ಮನವಿಯನ್ನು ನ್ಯಾಯಾಲಯ ಪುರಸ್ಕರಿದ್ದು, ಪರಿಹಾರ ಮೊತ್ತವನ್ನು ನಿರ್ದಿಷ್ಟ ಪಡಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಕಳುಹಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಬಿಯೋಜಕರಾದ ಎಂ.ಎಸ್. ಉಷಾ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News