ಕಾರವಾರ: ಸಕಲ ಸರಕಾರಿ ಗೌರವದೊಂದಿಗೆ ಯೋಧನ ಅಂತ್ಯ ಸಂಸ್ಕಾರ

Update: 2018-07-11 16:13 GMT

ಕಾರವಾರ, ಜು.11: ಛತ್ತೀಸಗಡದಲ್ಲಿ ನಕ್ಸಲ್‌ರ ವಿರುದ್ಧದ ಕಾರ್ಯಾಚರಣೆಯಲ್ಲಿ ನೆಲಬಾಂಬ್ ಸ್ಪೋಟಗೊಂಡು ವೀರ ಮರಣ ಹೊಂದಿದ ಯೋಧ ವಿಜಯಾನಂದ ನಾಯ್ಕ ಅವರ ಪಾರ್ಥಿವ ಶರೀರ ಬುಧವಾರ ಕಾರವಾರದ ಕೋಡಿಭಾಗದ ಬಳಿ ಇರುವ ರುಧ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

ಸಿಐಎಸ್‌ಎಫ್‌ನವರು ಛತ್ತಿಸಗಡದಿಂದ ಗೋವಾ ವಿಮಾನ ನಿಲ್ದಾಣದ ಮೂಲಕ ಆಂಬ್ಯುಲೆನ್ಸ್‌ನಲ್ಲಿ ಕಾರ ವಾರಕ್ಕೆ ಆಗಮಿಸಿದ್ದ ಪಾರ್ಥಿವ ಶರೀರವನ್ನು ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಹಸ್ತಾಂತರಿಸಿಕೊಂಡರು. ಬಳಿಕ ಸಲಕ ಸರಕಾರಿ ಗೌರವವನ್ನು ಜಿಲ್ಲಾಧಿಕಾರಿ ಸಲ್ಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಕಾರವಾರ ಶಾಸಕಿ ರೂಪಾಲಿ ನಾಯ್ಕಾ, ಮಾಜಿ ಶಾಸಕ ಸತೀಶ್ ಸೈಲ್ ಸೇರಿದಂತೆ ಹಲವರು ಪುಷ್ಪನಮನ ಗೈದು ಗೌರವಿಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ಮೂಲಕ ತರಲಾಗಿದ್ದ ಪಾರ್ಥಿವ ಶರೀರರವನ್ನು ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕಿಡಲಾಗಿತ್ತು. ನಂತರ ಸರಕಾರಿ ಗೌರವದಂತೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಲಾಯಿತು.
ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು 'ಅಮರ್ ರಹೇ ವಿಜಯಾನಂದ' ಎಂದು ಘೋಷಣೆ ಕೂಗಿದರು. ಅಲ್ಲದೆ, ಈ ನಡುವೆ ಸುರಿದ ಮಳೆಯನ್ನು ಲೆಕ್ಕಿಸದೆ ಮೆರವಣಿಗೆಯಲ್ಲಿ ಸಾರ್ವಜನಿಕರು, ಗಣ್ಯರು ಸೇರಿದಂತೆ ಪೊಲೀಸರು ಹಾಗೂ ಸೈನಿಕರು ಪಾಲ್ಗೊಂಡಿದ್ದರು.

ಈ ವೇಳೆ ಯೋಧನ ಕುಟುಂಬಸ್ಥರು, ಆತ್ಮೀಯರ ರೋಧನ ಮುಗಿಲು ಮುಟ್ಟಿತ್ತು. ವಿಜಯಾನಂದರ ತಾಯಿ, ತಂದೆ, ಅಣ್ಣ ಹಾಗೂ ತಂಗಿ ಪಾರ್ಥಿವ ಶರೀರದ ಮೇಲೆ ಒರಗಿ ಕಣ್ಣೀರಿಡುತ್ತಿರುವುದು ಮನ ಕಲಕುವಂತಿತ್ತು. ಕುಟುಂಬಸ್ಥರ ದರ್ಶನದ ಬಳಿಕ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ನಂತರ ಪಾರ್ಥಿವ ಶರೀರವನ್ನು ಮನೆಗೆ ತೆಗೆದುಕೊಂಡು ಹೋಗಿ ಕುಂಟುಂಬದವರಿಗೆ ಹಸ್ತಾಂತರಿಸಲಾಯಿತು. ಅಲ್ಲಿ ವಿಧಿವಿಧಾನಗಳು ಪೂರೈಸಿದ ಬಳಿಕ ಕೋಡಿಭಾಗದ ಹಿಂದೂ ರುಧ್ರಭೂಮಿಯಲ್ಲಿ ತಂದೆ ಸುರೇಶ ನಾಯ್ಕ ಅಂತಿಮ ವಿಧಿವಿಧಾನ ನೆರವೇರಿಸಿದ ಬಳಿಕ ಅಂತ್ಯ ಸಂಸ್ಕಾರ ಮಾಡಲಾಯಿತು. ಸ್ಥಳದಲ್ಲಿ ಬಿಎಸ್‌ಎಫ್ ಯೋಧರು, ಪೊಲೀಸರು, ಉಪವಿಭಾಗಾಧಿಕಾರಿ, ಯೋಧನ ಸ್ನೇಹಿತರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News