ಕೋಲಾರ: ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುವಿನ ಅಪಹರಣ; ದೂರು ದಾಖಲು

Update: 2018-07-11 17:47 GMT

ಕೋಲಾರ,ಜು.11: ಇಲ್ಲಿನ ಸರ್ಕಾರಿ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ ನವಜಾತ ಶಿಶು ಅಪಹರಣವಾಗಿದೆ. ಈ ಘಟನೆಯಿಂದ ಆಸ್ಪತ್ರೆಯ ರೋಗಿಗಳು ಮತ್ತು ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ಪ್ರಕರಣದ ಬಗ್ಗೆ ಕೋಲಾರದ ಟೌನ್ ಪೊಲೀಸರಿಗೆ ದೂರು ನೀಡಲಾಗಿದೆ. ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ವಿರುದ್ಧ ಆಂತರಿಕ ತನಿಖೆ ಆರಂಭವಾಗಿದೆ.

ಮುಳಬಾಗಿಲು ತಾಲೂಕಿನ ಹೆಚ್ ಗೊಲ್ಲಹಳ್ಳಿ ಪಂಚಾಯತ್ ವ್ಯಾಪ್ತಿಯ ವೇಣು ಕುಮಾರಿ ನಿನ್ನೆ ಹೆರಿಗೆಗೆ ದಾಖಲಾಗಿದ್ದರು. ಬೆಳಿಗ್ಗೆ 8:30 ಕ್ಕೆ ಸಹಜ ಹೆರಿಗೆಯಾಗಿದ್ದು, ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದರು. ನಂತರ ತಾಯಿ-ಮಗುವನ್ನು ಹೆರಿಗೆ ವಾರ್ಡಿಗೆ ದಾಖಲು ಮಾಡಲಾಗಿತ್ತು. ಆ ಬಳಿಕ ರಾತ್ರಿ ಸುಮಾರು 2 ಗಂಟೆಗೆ ತಾಯಿ ನೋಡಿದಾಗ ಮಗು ನಿದ್ರಿಸುತ್ತಿತ್ತು. ಆದರೆ ಮುಂಜಾನೆ 3 ಗಂಟೆಗೆ ಎಚ್ಚರವಾದಾಗ ಹಾಸಿಗೆಯ ಮೇಲೆ ಇದ್ದ ಶಿಶು ನಾಪತ್ತೆಯಾಗಿತ್ತು ಎನ್ನಲಾಗಿದೆ. 

ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಪ್ರಸೂತಿ ತಜ್ಞೆ ಡಾ. ಶಾಂತಿ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಸಂತೋಷ್ ಪ್ರಭುರವರಿಗೆ ವಿಷಯ ತಿಳಿಸಿದರು. ಜಿಲ್ಲಾ ಸರ್ಜನ್ ಕೂಡಲೇ ಆಸ್ಪತ್ರೆಗೆ ಧಾವಿಸಿದ್ದು, ಆಸ್ಪತ್ರೆಯ ವಾರ್ಡ್ ಹಾಗೂ ಇತರೆ ಕಡೆ ಸೆಕ್ಯೂರಿಟಿ ಸಿಬ್ಬಂದಿಯೊಂದಿಗೆ ಹುಡುಕಾಡಿದರು. ಆದರೆ ಯಾವುದೇ ಸುಳಿವು ದೊರೆಯಲಿಲ್ಲ. ಘಟನೆಯ ನಂತರ ಜಿಲ್ಲಾ ಸರ್ಜನ್ ಕೋಲಾರ ಟೌನ್ ಪೊಲೀಸರಿಗೆ ಮತ್ತು ಎಸ್ ಪಿ ಡಾ ರೋಹಿಣಿ ಕಠೋಚ್ ರವರಿಗೆ ಮಾಹಿತಿ ನೀಡಿದರು. ಘಟನೆಯ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿ ಕರ್ತವ್ಯದಲ್ಲಿದ್ದ ವೈದ್ಯರು, ನರ್ಸಿಂಗ್ ಸಿಬ್ಬಂದಿ ಹಾಗು ಸೆಕ್ಯೂರಿಟಿ ಸಿಬ್ಬಂದಿ ವಿರುದ್ಧ ಆಂತರಿಕ ತನಿಖೆ ಆರಂಭಿಸಿದೆ. ಕರ್ತವ್ಯ ಲೋಪ ಕಂಡು ಬಂದಲ್ಲಿ ಕ್ರಮ ಜರುಗಿಸುವುದಾಗಿ ಡಾ. ಸಂತೋಷ್ ಪ್ರಭು ತಿಳಿಸಿದ್ದಾರೆ.

ಶಿಶುವಿನ ತಂದೆ ನಾರಾಯಣಸ್ವಾಮಿ ಕೋಲಾರ ಟೌನ್ ಪೊಲೀಸರಿಗೆ ದೂರು ನೀಡಿದ್ದು, ಡಿವೈಎಸ್.ಪಿ ಉಮೇಶ್ ಮತ್ತು ಎಸ್.ಪಿ ಡಾ ರೋಹಿಣಿ ಕಠೋಚ್ ಶಿಶುವಿನ ಅಪಹರಣ ಆದಾಗ ಕರ್ತವ್ಯದಲ್ಲಿದ್ದ ವೈದ್ಯರು, ನರ್ಸಿಂಗ್ ಸಿಬ್ಬಂದಿ ಮತ್ತು ಸೆಕ್ಯೂರಿಟಿ ಸಿಬ್ಬಂದಿ ಶಿಶುವಿನ ತಂದೆ ತಾಯಿ ಹಾಗು ವಾರ್ಡ್ ನಲ್ಲಿದ್ದ ಇತರರನ್ನು ವಿಚಾರಣೆ ನಡೆಸಿದರು. ಪ್ರಕರಣದ ಬಗ್ಗೆ ಸುಳಿವು ದೊರೆತಿದ್ದು, ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಎಸ್.ಪಿ ಡಾ ರೋಹಿಣಿ ಕಠೋಚ್ ತಿಳಿಸಿದ್ದಾರೆ.

ಮುಂಜಾನೆ ಸುಮಾರು 3 ಗಂಟೆಗೆ ಅಪರಿಚಿತ ವ್ಯಕ್ತಿ ಮತ್ತು ಮಹಿಳೆ ಮುಸುಕು ಹಾಕಿಕೊಂಡು ಆಸ್ಪತ್ರೆಯಿಂದ ಹೊರ ಹೋಗಿರುವ ದೃಶ್ಯಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News