ಅಂಗನವಾಡಿ ನೌಕರರ ಸಮಸ್ಯೆ ಬಗೆಹರಿಸಲು ಬದ್ಧ: ಶಾಸಕ ರಾಜೇಗೌಡ

Update: 2018-07-11 18:18 GMT

ಕೊಪ್ಪ, ಜು.11: ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಮಲೆನಾಡು ಭಾಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಸಮಸ್ಯೆಗಳ ಬಗ್ಗೆ ಸರಕಾರದ ಗಮನಸೆಳೆದು ಬಗೆಹರಿಸಲು ಶ್ರಮಿಸುವುದಾಗಿ ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದ್ದಾರೆ.

ಪಟ್ಟಣದ ಪುರಭವನದಲ್ಲಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ವತಿಯಿಂದ ಆಯೋಜಿಸಿದ್ದ ಶಾಸಕರೊಂದಿಗೆ ಸಂವಾದ ಮತ್ತು ಶಾಸಕರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಅಂಗನವಾಡಿ ಕಾರ್ಯಕರ್ತೆಯರು ಸಣ್ಣ ಮಕ್ಕಳ ಲಾಲನೆ-ಪಾಲನೆ ಮಾಡುತ್ತಾ ಶಿಕ್ಷಣ ನೀಡುವ ಮಹತ್ವದ ಕಾರ್ಯವನ್ನು ಮಾಡುತ್ತಿದ್ದಾರೆ. ಇದರ ಜೊತೆಗೆ ಸರಕಾರದ ಅನೇಕ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಮತ್ತು ತಲುಪಿಸುವ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಆದರೂ ಅವರಿಗೆ ಸಿಗುವ ಗೌರವಧನ ತೀರಾ ಕಡಿಮೆ. ಪ್ರಾಥಮಿಕ ಶಾಲೆಗಳ ಶಿಕ್ಷಕಿಯರಿಗಿಂತ ಹೆಚ್ಚಿನ ಕೆಲಸ ಮಾಡಿದರೂ ವೇತನದಲ್ಲಿ ತಾರತಮ್ಯ ಆಗುತ್ತಿದೆ. ಸಿದ್ದರಾಮಯ್ಯ ಸರಕಾರದ ಮಹತ್ವದ ಕಾರ್ಯಕ್ರಮವಾದ ಮಾತೃಪೂರ್ಣ ಯೋಜನೆ ಮಲೆನಾಡಿನಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕಷ್ಟವಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಐರಿನ್ ಡಿಸೋಜ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ತುಂಬಾ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ಜಾಗದಲ್ಲಿ ವ್ಯಕ್ತಿತ್ವಕ್ಕೆ ತಕ್ಕ ಗೌರವ ಸಿಗುತ್ತಿಲ್ಲ. ಸರಕಾರ ನೀಡುವ ಗೌರವಧನವೂ 3 ತಿಂಗಳಿಗೊಮ್ಮೆ ಸಿಗುತ್ತಿದ್ದು, ಇದರಿಂದ ನಮ್ಮ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಸರಕಾರ ವರ್ಷಕ್ಕೆ ಎರಡು ಸೀರೆ ನೀಡಿದ್ದು ಅದನ್ನು ಪ್ರತಿದಿನ ಧರಿಸುವಂತೆ ಒತ್ತಾಯಿಸಲಾಗುತ್ತಿದೆ. ಆದರೆ ನಿರ್ವಹಣಾ ವೆಚ್ಚ, ಹೆರಿಗೆ ರಜೆ ನೀಡುತ್ತಿಲ್ಲ. ಆದ್ದರಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಯೂನಿಫಾರ್ಮನ್ನು ವಾರಕ್ಕೆ ಎರಡು ದಿನ ಧರಿಸಲು ಅವಕಾಶ ನೀಡಬೇಕು.

ಅಲ್ಲದೆ ಎಲ್ಲಾ ಅಂಗನವಾಡಿ ನೌಕರರಿಗೆ ಬಿಪಿಎಲ್ ಪಡಿತರ ಚೀಟಿ, ಉಚಿತ ನಿವೇಶನ ಹಂಚಿಕೆ, 6 ತಿಂಗಳು ಹೆರಿಗೆ ರಜೆ ನೀಡಿ ಗೌರವ ಧನ ನೀಡಬೇಕು. ವರ್ಷದ 15 ದಿನದ ರಜೆಯನ್ನು ಒಂದು ತಿಂಗಳಿಗೆ ಹೆಚ್ಚಿ ಸಬೇಕು. ವೇತನದಲ್ಲಿ ಸಮಾನತೆ ತರಬೇಕು. ವೈಯಕ್ತಿಕ ನಿವೃತ್ತಿ ಬಯಸಿದವರಿಗೆ ಅವಕಾಶ ಮಾಡಿಕೊಟ್ಟು, ನಿವೃತ್ತಿ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಶಾಸಕ ಟಿ.ಡಿ. ರಾಜೇಗೌಡ ದಂಪತಿಗಳನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಕಾರ್ಯದರ್ಶಿ ವಿದ್ಯಾಶಾಲಿನಿ ಪದಾಧಿಕಾರಿಗಳಾದ ಉಪಾಧ್ಯಕ್ಷೆ ಸೆಲ್ಮಾ ಸಾಲ್ಡನಾ, ಪ್ರೇಮಾ, ಕಲ್ಪನಾ, ಶೋಭಾ, ಗಿರಿಜಾ, ನಂದಿನಿ, ಆಶಾ, ಯಶೋಧಾ, ಇಂದಿರಾಪ್ರಭು ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News