ಚಿಕ್ಕಮಗಳೂರು: ಹಜ್ ಯಾತ್ರಾರ್ಥಿಗಳ ಸಮಾವೇಶ

Update: 2018-07-11 18:28 GMT

ಚಿಕ್ಕಮಗಳೂರು, ಜು.11: ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಜಿಲ್ಲೆಯ 110 ಯಾತ್ರಾರ್ಥಿಗಳಿಗೆ ಖುದ್ದಾಮಿಲ್ ಹುಜಾಜ್ ವತಿಯಿಂದ ನಗರದಲ್ಲಿ ಬುಧವಾರ ಕಾರ್ಯಾಗಾರ ನಡೆಸಿ, ಆರೋಗ್ಯ ತಪಾಸಣೆ ಮಾಡಿ, ಲಸಿಕೆ ಹಾಕಿ, ಆರೋಗ್ಯಕಾರ್ಡ್‍ನೊಂದಿಗೆ ಮಾಹಿತಿ ಕೈಪಿಡಿಯನ್ನು ವಿತರಿಸಲಾಯಿತು.

ಎಂ.ಜಿ.ರಸ್ತೆಯ ತಾಜರೀನಾ ಶಾದಿಮಹಲ್ ಸಭಾಂಗಣದಲ್ಲಿ ಅಂಜುಮಾನ್ ಖುದ್ದಾಮ್ ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಪವಿತ್ರ ಹಜ್ ಯಾತ್ರಾರ್ಥಿಗಳ ಸಮಾವೇಶ ನಡೆಯಿತು. ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಜಿಲ್ಲಾಸರ್ಜನ್ ಡಾ.ದೊಡ್ಡಮಲ್ಲಪ್ಪ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ನಡೆಸಲಾಯಿತು. ಸೋಂಕು ತಗಲದಂತೆ ಪೋಲಿಯೋ ಮತ್ತು ಮೆನಿಂಜಿಯೋ ಕೋಕಲ್ ಲಸಿಕೆಯನ್ನು ನೀಡಲಾಯಿತು. ಪ್ರತಿಯೊಬ್ಬರ ದೈಹಿಕಸ್ಥಿತಿ ಚಿಕಿತ್ಸೆಯ ವಿವರಗಳನ್ನೊಳಗೊಂಡ 'ಆರೋಗ್ಯ ಕಾರ್ಡ್' ಮೊದಲ ಬಾರಿಗೆ ರಾಜ್ಯ ವಕ್ಫ್ ಮಂಡಳಿಯಿಂದ ವಿತರಿಸಲಾಯಿತು. 

40 ದಿನಗಳ ಯಾತ್ರೆಯಲ್ಲಿ ಅನುಸರಿಸಬೇಕಾದ ವಿಧಿ-ವಿಧಾನಗಳನ್ನು ವಿವರಿಸಿದ ಲಬಾಬೀನ್ ಮಸೀದಿ ಖತೀಬ್ ಮೌಲಾನ ಮಹಮ್ಮದ್‍ ಷಫಿಉಲ್ಲಾ ತಂಡ ಅಗತ್ಯ ಕೈಪಿಡಿಗಳನ್ನು ವಿತರಿಸಿತು. ಅಂಜುಮಾನ್ ಖುದ್ದಾಮ್ ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಮ್ಮದ್‍ ಹನೀಫ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ನಾಸಿರ್ ಹುಸೇನ್, ಅಣೂರು ಗ್ರಾ.ಪಂ.ಅಧ್ಯಕ್ಷ ನಸ್ರುತಾ ಅಲಿ ಒಳಗೊಂಡ 110 ಹಜ್‍ ಯಾತ್ರಾರ್ಥಿಗಳಿಗೆ ಶುಭ ಕೋರಲಾಯಿತು.

ಲಬಾಬೀನ್ ಮಸೀದಿ ಅಧ್ಯಕ್ಷ ಆರ್.ಎ.ಸಲೀಂ, ದಂಡರಮಕ್ಕಿ ಮಸೀದಿ ಅಧ್ಯಕ್ಷ ಮೊಹಮ್ಮದ್ ದಾವೂದ್, ಖುದ್ದಾಮ್ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳಾದ ಅಶ್ವಾಕ್‍ ಪಟೇಲ್, ಡಾ.ಗುಲ್ಲರಾಜ್, ಶಕೀಲ್‍ ಅಹಮ್ಮದ್, ಇಮ್ತಿಯಾಜ್‍ ಅಹಮ್ಮದ್, ಸಲೀಂ ಅಹಮ್ಮದ್ ಮತ್ತಿತರರು ವೇದಿಕೆಯಲ್ಲಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News