ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ದಾರರಿಗೆ 5 ಕೋಟಿ ರೂ. ವಂಚನೆ: 30 ಮಂದಿಯ ಬಂಧನ

Update: 2018-07-12 04:12 GMT

ಹೈದರಾಬಾದ್, ಜು.12: ಎರಡು ಸಾವಿರಕ್ಕೂ ಹೆಚ್ಚು ಎಸ್‌ಬಿಐ ಕಾರ್ಡ್‌ದಾರರಿಗೆ ಐದು ಕೋಟಿ ರೂಪಾಯಿ ವಂಚಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ 22 ಮಂದಿ ಟೆಲಿ ಕಾಲರ್‌ಗಳು ಸೇರಿದಂತೆ 30 ಮಂದಿಯನ್ನು ಬಂಧಿಸಲಾಗಿದೆ.

ಎಸ್‌ಬಿಐ ಕ್ರೆಡಿಟ್ ಕಾರ್ಡ್ ವಿಭಾಗದ ಸಿಬ್ಬಂದಿ ಎಂದು ಹೇಳಿಕೊಂಡು ಗ್ರಾಹಕರಿಗೆ ಕರೆ ಮಾಡುವ ಅಪರಿಚಿತ ವ್ಯಕ್ತಿಗಳು, ಕಾರ್ಡ್ ವಿವರಗಳನ್ನು ಸಂಗ್ರಹಿಸಿ ಆನ್‌ಲೈನ್ ಪೋರ್ಟೆಲ್ ಮೂಲಕ ಹಣಕಾಸು ವಹಿವಾಟು ನಡೆಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಾಗ ಈ ಜಾಲ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಆಯುಕ್ತ ವಿ.ಸಿ.ಸಜ್ಜನರ್ ಹೇಳಿದ್ದಾರೆ.

ಈ ವಂಚನೆ ಜಾಲದ ಮಾಸ್ಟರ್‌ಮೈಂಡ್ ವಿಜಯ್ ಕುಮಾರ್ ಶರ್ಮಾ ಕೂಡಾ ಬಂಧಿತರಲ್ಲಿ ಸೇರಿದ್ದಾರೆ. ಬಂಧಿತರಲ್ಲಿ 22 ಮಂದಿ ಟೆಲಿಕಾಲರ್‌ಗಳು ಸೇರಿದ್ದು, ಬಹುತೇಕ ಮಹಿಳೆಯರು. ಇವರು ಇತರ ಆರೋಪಿಗಳಿಗೆ ಪ್ರಕರಣದಲ್ಲಿ ನೆರವಾಗಿದ್ದರು ಎನ್ನಲಾಗಿದೆ.

ಫೆಬ್ರವರಿ ಕೊನೆಯ ವಾರದಿಂದ ಮೂವರು ಆರೋಪಿಗಳು 22 ಮಂದಿಯನ್ನು ನಿಯೋಜಿಸಿಕೊಂಡು ನಕಲಿ ಎಸ್‌ಬಿಐ ಕಾರ್ಡ್ ಕಾಲ್‌ಸೆಂಟರ್ ನಡೆಸುತ್ತಿದ್ದರು. ಒಟಿಪಿ ಸೇರಿದಂತೆ ಗ್ರಾಹಕರ ಕ್ರೆಡಿಟ್‌ ಕಾರ್ಡ್ ವಿವರಗಳನ್ನು ಪಡೆದುಕೊಂಡು ದುರುಪಯೋಗ ಮಾಡಿಕೊಳ್ಳುತ್ತಿದ್ದರು. ಇದಕ್ಕಾಗಿ www.jayyshree.com ಎಂಬ ವೆಬ್‌ಸೈಟ್ ಬಳಸುತ್ತಿದ್ದರು.

ಎಲ್ಲ ಆರೋಪಿಗಳನ್ನು ಜುಲೈ 8ರಂದು ಬಂಧಿಸಿ ದಿಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News