×
Ad

ಮಲೆನಾಡಲ್ಲಿ ಮುಂದುವರೆದ ಮಳೆಯ ಅಬ್ಬರ: ಕಾಂಪೌಂಡ್ ಕುಸಿದು ಮಹಿಳೆ ಮೃತ್ಯು

Update: 2018-07-12 19:06 IST

ಶಿವಮೊಗ್ಗ, ಜು. 12: ಮಲೆನಾಡು ಅಕ್ಷರಶಃ 'ಮಳೆನಾಡಾ'ಗಿ ಪರಿವರ್ತಿತವಾಗಿದ್ದು, ಶಿವಮೊಗ್ಗ ಜಿಲ್ಲೆಯಾದ್ಯಂತ 'ಪುನರ್ವಸು' ಮಳೆಯ ಅಬ್ಬರ ಮುಂದುವರೆದಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಹಲವೆಡೆ ಪ್ರವಾಹ ಎದುರಾಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. 

ಜಿಲ್ಲೆಯ ಸಾಗರದಲ್ಲಿ ಕಾಂಪೌಂಡ್ ಗೋಡೆ ಕುಸಿದು ಮಹಿಳೆಯೋರ್ವರು ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಶಾಲಾ - ಕಾಲೇಜುಗಳಿಗೆ ಶುಕ್ರವಾರ ಹಾಗೂ ಶನಿವಾರ ಕೂಡ ರಜೆ ವಿಸ್ತರಣೆ ಮಾಡಲಾಗಿದೆ. ತುಂಗಾ, ಭದ್ರಾ, ಶರಾವತಿ, ಮಾಲತಿ, ವರದಾ, ದಂಡಾವತಿ, ಕುಮದ್ವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಅದರಲ್ಲಿಯೂ ತುಂಗಾ, ವರದಾ ಹಾಗೂ ಮಾಲತಿ ನದಿಗಳು ಉಕ್ಕಿ ಹರಿಯುತ್ತಿವೆ. ತೀರ್ಥಹಳ್ಳಿ ತಾಲೂಕಿನ ಹಲವೆಡೆ ತುಂಗಾ ಹಾಗೂ ಮಾಲತಿ ನದಿಗಳು ಪ್ರವಾಹ ಸೃಷ್ಟಿಸಿವೆ. ಸಾಗರ ತಾಲೂಕಿನಲ್ಲಿ ವರದಾ ನದಿ ಭೀತಿ ಉಂಟು ಮಾಡಿದೆ. 

ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಘಟ್ಟ ಪ್ರದೇಶಗಳಲ್ಲಿ ಭಾರೀ ವರ್ಷಧಾರೆಯಾಗಿದೆ. ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ 168 ಮಿ.ಮೀ., ಮಾಣಿಯಲ್ಲಿ 252 ಮಿ.ಮೀ., ಯಡೂರಿನಲ್ಲಿ 232 ಮಿ.ಮೀ., ಹುಲಿಕಲ್‍ನಲ್ಲಿ 186 ಮಿ.ಮೀ., ಮಾಸ್ತಿಕಟ್ಟೆಯಲ್ಲಿ 113 ಮಿ.ಮೀ. ಮಳೆಯಾಗಿದೆ. ಉಳಿದಂತೆ ತೀರ್ಥಹಳ್ಳಿಯಲ್ಲಿ 107 ಮಿ.ಮೀ., ಭದ್ರಾವತಿಯಲ್ಲಿ 18.20 ಮಿ.ಮೀ., ಹೊಸನಗರದಲ್ಲಿ 121 ಮಿ.ಮೀ., ಶಿವಮೊಗ್ಗದಲ್ಲಿ 22.60 ಮಿ.ಮೀ., ಸಾಗರದಲ್ಲಿ 85.40 ಮಿ.ಮೀ., ಶಿಕಾರಿಪುರದಲ್ಲಿ 26.40 ಹಾಗೂ ಸೊರಬದಲ್ಲಿ 32 ಮಿ.ಮೀ. ಮಳೆಯಾಗಿದೆ. 

ಮಹಿಳೆ ಮೃತ್ಯು: ಸಾಗರ ಪಟ್ಟಣದ ಬೆಳಲಮಕ್ಕಿ ಪ್ರದೇಶದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಮನೆಯೊಂದರ ಕಾಂಪೌಂಡ್ ಗೋಡೆ ಕುಸಿದು ಬಿದ್ದು ನೆರೆಮನೆಯ ಕಲ್ಲಮ್ಮ (65) ಎಂಬ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ತಾಲೂಕು ಆಡಳಿತದ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. 

ಸಾಗರ ತಾಲೂಕಿನ ತಾಳಗುಪ್ಪ ಭಾಗದಲ್ಲಿ ವರದಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಸುಮಾರು ಸಾವಿರಕ್ಕೂ ಅಧಿಕ ಎಕರೆ ಕೃಷಿ ಜಲಾವೃತವಾಗಿದೆ. ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸುತ್ತಿದ್ದು, ಇನ್ನಷ್ಟೆ ನಷ್ಟದ ಅಂದಾಜು ತಿಳಿದುಬರಬೇಕಾಗಿದೆ. ಉಳಿದಂತೆ ಬೀಸನಗದ್ದೆ ಗ್ರಾಮವು ಕೂಡ ಜಲಾವೃತವಾಗುವ ಆತಂಕ ಉಂಟಾಗಿದೆ. 

ತತ್ತರ: ತೀರ್ಥಹಳ್ಳಿ ತಾಲೂಕಿನಲ್ಲಿ ಎಡಬಿಡದೆ ಬೀಳುತ್ತಿರುವ ವರ್ಷಧಾರೆಯಿಂದ ನಾಗರಿಕರು ತತ್ತರಿಸಿ ಹೋಗಿದ್ದಾರೆ. ತೀರ್ಥಹಳ್ಳಿಯ ಸೀಗಿನಕೆರೆಯಲ್ಲಿ ಗುಡ್ಡ ಕುಸಿದು ಮೂರು ಅಂಗಡಿಗೆ ಹಾನಿಯಾಗಿದೆ. ಹೊನ್ನೆತಾಳು ಗ್ರಾಮದ ನಾಬಳ ಸೇತುವೆ ಮುಳುಗಡೆಯಾಗಿದೆ. ಗುಡ್ಡೆಕೆರೆ-ಬಿದರುಗೋಡು ನಡುವೆ ಸಂಚಾರ ಸ್ಥಗಿತಗೊಂಡಿದೆ. 

ತೀರ್ಥಹಳ್ಳಿ ತಾಲೂಕಿನಾದ್ಯಂತ ಭಾರೀ ವರ್ಷಧಾರೆ ಮುಂದುವರೆದಿರುವುದರಿಂದ ಕಳೆದ ಸೋಮವಾರದಿಂದ ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಕೊಂಡು ಬರಲಾಗುತ್ತಿದ್ದು, ಮಳೆ ಕಡಿಮೆಯಾಗದಿರುವ ಕಾರಣದಿಂದ ಶುಕ್ರವಾರ ಹಾಗೂ ಶನಿವಾರ ಕೂಡ ಶಾಲಾ - ಕಾಲೇಜುಗಳಿಗೆ ತಾಲೂಕು ಆಡಳಿತ ರಜೆ ಘೋಷಿಸಿದೆ. 

ಲಿಂಗನಮಕ್ಕಿ, ಭದ್ರಾ, ತುಂಗಾ ಡ್ಯಾಂಗಳಿಗೆ ಉತ್ತಮ ಒಳಹರಿವು
ಜಲಾನಯನ ಪ್ರದೇಶಗಳಲ್ಲಿ ಮಳೆ ಮುಂದುವರಿದಿರುವುದರಿಂದ ಜಿಲ್ಲೆಯ ಲಿಂಗನಮಕ್ಕಿ, ಭದ್ರಾ ಹಾಗೂ ತುಂಗಾ ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳ ಕಂಡುಬಂದಿದೆ. ಲಿಂಗನಮಕ್ಕಿ ಡ್ಯಾಂನ ನೀರಿನ ಮಟ್ಟ 1785.90 (ಗರಿಷ್ಠ ಮಟ್ಟ : 1819) ಅಡಿಗೆ ಏರಿಕೆಯಾಗಿದೆ. 51,675 ಕ್ಯೂಸೆಕ್ ಒಳಹರಿವಿದ್ದು, ಹೊರಹರಿವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಭದ್ರಾ ಡ್ಯಾಂನ ನೀರಿನ ಮಟ್ಟ 162.10 (ಗರಿಷ್ಠ ಮಟ್ಟ : 186) ಅಡಿಯಿದೆ. 33,674 ಕ್ಯೂಸೆಕ್ ಒಳಹರಿವಿದ್ದು, ಹೊರಹರಿವನ್ನು ಸ್ಥಗಿತಗೊಳಿಸಲಾಗಿದೆ. ಉಳಿದಂತೆ ತುಂಗಾ ಡ್ಯಾಂ ಕಳೆದ ತಿಂಗಳೇ ಗರಿಷ್ಠ ಮಟ್ಟವಾದ 588.24 ಅಡಿ ತಲುಪಿದೆ. ಪ್ರಸ್ತುತ ಡ್ಯಾಂನ ಒಳಹರಿವು 66,274 ಕ್ಯೂಸೆಕ್ ಇದ್ದು, 65,115 ಕ್ಯೂಸೆಕ್ ನೀರನ್ನು ಹೊಸಪೇಟೆಯ ಟಿ.ಬಿ. ಡ್ಯಾಂಗೆ ಹರಿ ಬಿಡಲಾಗುತ್ತಿದೆ. 

ಶಿವಮೊಗ್ಗದಲ್ಲಿ ಮುಳುಗಡೆಯಾದ ಮಂಟಪ
ಗಾಜನೂರಿನ ತುಂಗಾ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿರುವುದರಿಂದ ಶಿವಮೊಗ್ಗ ನಗರದಲ್ಲಿ ಹಾದು ಹೋಗಿರುವ ತುಂಗಾ ನದಿಯು ಮೈದುಂಬಿ ಹರಿಯಲಾರಂಭಿಸಿದೆ. ನಗರದ ಕೋರ್ಪಳಯ್ಯನ ಛತ್ರದ ಬಳಿ ತುಂಗಾ ನದಿಯಲ್ಲಿರುವ, ಅಪಾಯದ ಮಟ್ಟ ಸೂಚಿಸುವ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ಆದರೆ ತುಂಗಾ ನದಿಯ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಿರುವುದರಿಂದ ನದಿ ಪಾತ್ರದ ತಗ್ಗು ಪ್ರದೇಶಗಳು ಜಲಾವೃತವಾಗುವ ಸಾಧ್ಯತೆ ಕಡಿಮೆಯಾಗಿದೆ. 

ಆರು ಮನೆ ಗೋಡೆ ಕುಸಿತ: ಸಾಗರ ತಹಶೀಲ್ದಾರ್ 
'ಸಾಗರ ತಾಲೂಕಿನಲ್ಲಿ ಮಳೆ ಸಂಬಂಧಿತ ಅನಾಹುತಗಳು ವರದಿಯಾಗಿವೆ. ಸಾಗರ ಪಟ್ಟಣದಲ್ಲಿಕಾಂಪೌಂಡ್ ಗೋಡೆ ಕುಸಿದು ಮಹಿಳೆಯೋರ್ವರು ಮೃತಪಟ್ಟಿದ್ಧಾರೆ. ಆನಂದಪುರಂ ಹೋಬಳಿ ಹಾಗೂ ಆವಿನಹಳ್ಳಿ ಸುತ್ತಮುತ್ತಲು ತಲಾ ಮೂರು ಮನೆಗಳ ಗೋಡೆ ಭಾಗಶಃ ಕುಸಿತವಾಗಿದೆ. ಯಾವುದೇ ಅನಾಹುತ ಸಂಭವಿಸಿಲ್ಲ. ತಾಳಗುಪ್ಪ ಭಾಗದಲ್ಲಿ ವರದಾ ನದಿ ಪ್ರವಾಹದಿಂದ ಸಾವಿರಕ್ಕೂ ಹೆಚ್ಚು ಕೃಷಿ ಭೂಮಿ ಜಲಾವೃತವಾಗಿದೆ. ನಷ್ಟದ ಅಂದಾಜು ಮಾಡಲಾಗುತ್ತಿದೆ' ಎಂದು ಸಾಗರದ ತಹಶೀಲ್ದಾರ್ ತುಷಾರ್ ಬಿ. ಹೊಸೂರುರವರು ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. 

ಮುನ್ನಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಮನವಿ
ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸಂಭಾವ್ಯ ದುರ್ಘಟನೆಗಳನ್ನು ತಪ್ಪಿಸಲು ಎಲ್ಲರೂ ಮುಂಜಾಗರೂಕತೆ ವಹಿಸುವಂತೆ ಜಿಲ್ಲಾಧಿಕಾರಿ ಎಂ.ಲೋಕೇಶ್ ಅವರು ಮನವಿ ಮಾಡಿದ್ದಾರೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದ್ದು, ಎಲ್ಲಾ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಕರ್ತವ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ. ಮೇಲಧಿಕಾರಿಗಳ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡದಂತೆ ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರು ಯಾವುದೇ ತೊಂದರೆ ಎದುರಾದರೆ ಅಥವಾ ದುರ್ಘಟನೆಗಳು ಸಂಭವಿಸಿದರೆ ತಕ್ಷಣ ತಾಲೂಕು ಆಡಳಿತ ಅಥವಾ ಸ್ಥಳೀಯಾಡಳಿತದ ಗಮನಕ್ಕೆ ತರಬೇಕು. ಜಿಲ್ಲಾಡಳಿತ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ಶಿಥಿಲಾವಸ್ಥೆಯಲ್ಲಿರುವ ಮನೆ, ಕಟ್ಟಡಗಳಲ್ಲಿರುವ ವಾಸ್ತವ್ಯವನ್ನು ಸ್ಥಳಾಂತರಿಸಬೇಕು. ಕಾಲುಹಾದಿ, ಕಾಲು ಸಂಕ, ಹರಿಯುವ ನೀರಿನ ಬದಿಗಳಲ್ಲಿ ನಡೆಯುವ ಸಂದರ್ಭಗಳಲ್ಲಿ ಅತ್ಯಂತ ಎಚ್ಚರಿಕೆ ವಹಿಸಬೇಕು. ಸಣ್ಣ ಮಕ್ಕಳನ್ನು ಅಂತಹ ಸ್ಥಳಗಳಿಗೆ ಒಬ್ಬಂಟಿಯಾಗಿ ಕಳುಹಿಸಬಾರದು. ಮಕ್ಕಳು ಆದಷ್ಟು ಮನೆಯೊಳಗೆ ಸುರಕ್ಷಿತವಾಗಿರಬೇಕು ಎಂದು ಅವರು ಮನವಿ ಮಾಡಿದ್ದಾರೆ,.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News