ನನ್ನ ಮೃತದೇಹ ಕೂಡ ಬಿಜೆಪಿಯತ್ತ ಸುಳಿಯುವುದಿಲ್ಲ: ಮಾಜಿ ಸಚಿವ ಎಚ್.ಸಿ ಮಹದೇವಪ್ಪ

Update: 2018-07-12 14:44 GMT

ಮೈಸೂರು,ಜು.12: ಸಂವಿಧಾನದ ಆಶಯದಲ್ಲಿ ನಂಬಿಕೆ ಇಟ್ಟಿರುವ ನಾನು ಹೋರಾಟದಿಂದ ಮೇಲೆ ಬಂದವನು. ನಾನಲ್ಲ, ನನ್ನ ಮೃತದೇಹ ಕೂಡ ಬಿಜೆಪಿಯತ್ತ ಸುಳಿಯುವುದಿಲ್ಲ. ಕೋಮುವಾದಿಗಳ ವಿರುದ್ಧ ನನ್ನ ಹೋರಾಟ ನಿರಂತರ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರ್ಪಡೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ 'ನನ್ನ ಮೃತ ದೇಹ ಕೂಡ ಬಿಜೆಪಿಗೆ ಹೋಗಲ್ಲ. ನಾನು ಹುಟ್ಟು ಕಾಂಗ್ರೆಸ್ಸಿಗನಾಗಿದ್ದು, ಕಾಂಗ್ರೆಸ್ ನಲ್ಲೇ ಇರುತ್ತೇನೆ. ಯಾರೋ ಹೇಳಿದ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಸಂಘಟನೆ ಮಾಡಿ ಭದ್ರ ಪಡಿಸುತ್ತೇನೆ ಎಂದು ತಿಳಿಸಿದರು. ನನ್ನ ಹೆಸರನ್ನು ಕೆಡಿಸಬೇಕು ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರದ ಜನ ಮತ್ತು ಜಿಲ್ಲೆಯ ನನ್ನ ಅಭಿಮಾನಿಗಳು ತಲೆಕೆಡಿಸಿಕೊಳ್ಳಬೇಡಿ. ಇಂತಹ ಕುತಂತ್ರಿಗಳಿಗೆ ಮುಂದಿನ ದಿನಗಳಲ್ಲಿ ಜನ ಉತ್ತರಿಸುತ್ತಾರೆ ಎಂದು ಹೇಳಿದರು.

ಅಭಿವೃದ್ಧಿ ಮೇಲೆ ಜಾತಿ ಸವಾರಿ ಮಾಡಿದೆ. ಯಾವುದೇ ಜಾತಿ ನೋಡದೆ ಅಭಿವೃದ್ಧಿ ಮಾಡಿದ್ದ ಸರ್ಕಾರವನ್ನು ಕಡೆಗಣಿಸಿದ್ದಾರೆ. ಚುನಾವಣೆಯ ಸೋಲಿನಿಂದ ಬೇಸರವಾಗಿದ್ದಂತೂ ನಿಜ. ಪಕ್ಷದ ಸೋಲಿನಿಂದ ದಿಗ್ಭ್ರಾಂತನಾಗಿದ್ದೆ. ಚುನಾವಣೆಯಲ್ಲಿ ತುಂಬಾ ಓಡಾಡಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿತ್ತು. ಅದಕ್ಕೆ ಪ್ರಕೃತಿ ಚಿಕಿತ್ಸಾಲಯದಲ್ಲಿದ್ದೆ. ಆದ್ದರಿಂದ ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಲಿಲ್ಲ. ಅದಕ್ಕೆ ಬೇರೆಯವರು ಇಲ್ಲಸಲ್ಲದನ್ನು ಕಲ್ಪನೆ ಮಾಡಿಕೊಂಡು ಮಾತನಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಒಂದೇ ಒಂದು ಹಗರಣ ಇಲ್ಲದೆ ಸರ್ಕಾರವನ್ನು ನಡೆಸಿದ ಹೆಗ್ಗಳಿಕೆ ಕಾಂಗ್ರೆಸ್ ನದ್ದು. ಚುನಾವಣೆ ಮುಗಿದಿದೆ. ಫಲಿತಾಂಶ ಹೊರಬಿದ್ದಿದೆ, ಫಲಿತಾಂಶದಿಂದ ದಿಗ್ಭ್ರಮೆಯಾಗಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಸ್ಥಿರ ಅಭಿವೃದ್ದಿ ಸರ್ಕಾರವನ್ನು ರಾಜ್ಯಕ್ಕೆ ನೀಡಿದ್ದೆವು. ಸಂವಿಧಾನ ಬಯಸಿದ ತುಳಿತಕ್ಕೆ ಒಳಗಾದವರನ್ನು ಮೇಲೆತ್ತಿ ಸರ್ವಾಂಗೀಣ ಆಡಳಿತ ಕೊಟ್ಟಿದ್ದೆವು. ಚುನಾವಣೆಗೆ ಹೋದ ಸಮಯದಲ್ಲಿ ಸಮೀಕ್ಷೆ ಬೇರೆ ಇತ್ತು. ಆದರೆ ಅದು ಉಲ್ಟಾ ಆಯಿತು ಎಂದು ಮೌನವಾದರು.

ಕಾಂಗ್ರೆಸ್ ನಲ್ಲಿ ಎಲ್ಲೂ ಕೂಡ ಆಡಳಿತ ವಿರೋಧಿ ನಡೆ ಇರಲಿಲ್ಲ. ಖಂಡಿತವಾಗಿ 120 ಸ್ಥಾನವನ್ನು ಗೆಲ್ಲುವ ಭರವಸೆ ನಮಗೆ ಇತ್ತು. ಚುನಾವಣೆಯ ನಾಲ್ಕು ದಿನಗಳ ಮುನ್ನ ಎಲ್ಲ ಬುಡಮೇಲಾಗಿದ್ದು ಬೇಸರವಾಗಿದೆ. ಅಭಿವೃದ್ಧಿ ನೋಡಿಯೂ ಕೂಡ ಜನ ಬೆಂಬಲ ಕೊಟ್ಟಿಲ್ಲ ಎಂದರು. ಎಲ್ಲವನ್ನೂ  ಪುರ್ನವಿಮರ್ಶೆ ಮಾಡಿಕೊಂಡು ಪಕ್ಷ ಸಂಘಟನೆ ಮಾಡುತ್ತೇನೆ ಎಂದು ತಿಳಿಸಿದರು. 

ಸಿದ್ದರಾಮಯ್ಯರ ನಡುವಿನ ಸ್ನೇಹ ಚೆನ್ನಾಗಿಯೇ ಇದೆ
ನನ್ನ ಮತ್ತು ಸಿದ್ದರಾಮಯ್ಯ ನಡುವಿನ ಸ್ನೇಹ ಹಳಸಿದೆ ಎಂಬುದು ಸತ್ಯಕ್ಕೆ ದೂರವಾದುದು. ನಾನು ಮತ್ತು ಸಿದ್ದರಾಮಯ್ಯ ಚೆನ್ನಾಗಿಯೇ ಇದ್ದೇವೆ. ಕೆಲವು ವಲಸಿಗರು ನನ್ನ ಮತ್ತು ಸಿದ್ದು ನಡುವೆ ವೈಮನಸ್ಸಿದೆ ಎಂದು ಹೇಳುತ್ತಿದ್ದಾರೆ. ನಾನಾಗಲಿ ಅಥವಾ ಸಿದ್ದರಾಮಯ್ಯ ಅವರಾಗಲಿ ನಮ್ಮ ಸ್ನೇಹ ಹಳಸಿದೆ ಎಂದು ಹೇಳಿದ್ದೇವ ಎಂದು ಖಡಕ್ ಆಗಿ ಮಾಧ್ಯಮದವರನ್ನೇ ಪ್ರಶ್ನಿಸಿದರು.

ಕೆಲವು ಮಂದಿ ನಮ್ಮಿಬ್ಬರ ಸ್ನೇಹ ಕಂಡು ಇಲ್ಲ ಸಲ್ಲದ ವಿಚಾರಗಳನ್ನು ಹುಟ್ಟುಹಾಕಿ ಜಿಲ್ಲೆಯಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಪಾಪ ಅವರಿಗೆ ನಮ್ಮ ಸ್ನೇಹ ಹದಗೆಡಸಿ ಬೆಳೆಯಬೇಕು ಎಂದು ಕೊಂಡಿದ್ದಾರೆ. ನಾನು ಮತ್ತು ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಬೇರೆ ಬೇರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News