ಅಂಕೋಲಾ: ಕಿರು ಸೇತುವೆ ಕುಸಿತ; ನೀರಲ್ಲೇ ಮೃತದೇಹ ಸಾಗಿಸಿದ ಗ್ರಾಮಸ್ಥರು

Update: 2018-07-12 17:12 GMT

ಅಂಕೋಲಾ, ಜು.12: ಕಿರು ಸೇತುವೆ ಕುಸಿದ ಹಿನ್ನೆಲೆಯಲ್ಲಿ ಶವಸಂಸ್ಕಾರಕ್ಕೆ ಮೃತದೇಹವನ್ನು ನೀರಿನಲ್ಲಿಯೇ ಸಾಗಿಸಿದ ಘಟನೆ ಪುರಸಭೆ ವ್ಯಾಪ್ತಿಯ ಕೇಣಿಯ ಗಾಂವರವಾಡಾದಲ್ಲಿ ಗುರುವಾರ ನಡೆದಿದೆ.

ಕೇಣಿ ಗ್ರಾಮದ 80 ವರ್ಷದ ಸುಶೀಲಾ ಎನ್ನುವ ವೃದ್ದೆ ಮೃತಪಟ್ಟಿದ್ದಳು. ಗ್ರಾಮದ ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕಾಗಿ ದೇಹವನ್ನು ತೆಗೆದುಕೊಂಡು ಹೋಗಿದ್ದರು. ಆದರೆ ರುದ್ರಭೂಮಿಗೆ ಸಾಗುವ ಕಾಲು ಸೇತುವೆಯೊಂದು ಮಳೆ ನೀರಿಗೆ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಮೃತ ದೇಹವನ್ನು ನೀರಿನಲ್ಲಿ ನಡೆದುಕೊಂಡೇ ಸಾಗಿಸಲಾಯಿತು. ಅಲ್ಲದೆ, ಶವವನ್ನು ಸುಡಲು ಕಟ್ಟಿಗೆಯನ್ನು ಸಹ ಸಂಬಂಧಿಕರು ನೀರಿನಲ್ಲಿ ಹೊತ್ತುಕೊಂಡು ಸಾಗಬೇಕಾಯಿತು.

ಕಳೆದ ಒಂದು ವರ್ಷದ ಹಿಂದೆ ಸೇತುವೆಯನ್ನು ರುದ್ರಭೂಮಿಗೆ ಸಾಗಲು ನಿರ್ಮಿಸಲಾಗಿತ್ತು. ಆದರೆ, ಮಳೆ ನೀರಿಗೆ ಕಾಲು ಸೇತುವೆ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿದು ಅಂಕೋಲಾ ಪುರಸಭೆಯ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಇನ್ನು ಜನರು ಸಹ ಅವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಘಟನೆಯ ಬಗ್ಗೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಜಿಲ್ಲಾಡಳಿತದ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಗ್ರಾಮಸ್ಥ ಸಂತೋಷ ವಿಠೋಬ ಗಾಂವಕರ, ದಯಾನಂದ ಬೂದಿ ಗಾಂವಕರ, ರಾಮಚಂದ್ರ ಗುಣವಂತ ಗಾಂವಕರ, ಗಂಗಾದರ ಗಾಂವಕರ, ಉಲ್ಲಾಸ ಬುದವಂತ ಗಾಂವಕರ, ಸತೀಶ ಗಣಪತಿ ಗಾಂವಕರ, ಸತೀಶ ಗಣಪತಿ ಗಾಂವಕರ, ಸಂತೊಷ ಬೀದಿ ಗಾಂವಕರ, ಯಾದು ನಾರಾಯನ ಗಾಂವಕರ, ಶ್ರೀಧರ ಶಂಕರ ಗಾಂವಕರ, ತಾರಾನಾಥ ಡಿ. ಗಾಂವಕರ, ಮಾರುತಿ ಗಾಂವಕರ, ದಿನಕರ ಗಾಂವಕರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಸ್ಥಳಕ್ಕೆ ಪುರಸಭೆಯ ಮುಖ್ಯಾಧಿಕಾರಿ ಎನ್.ಎಮ್. ಮೇಸ್ತ, ಪಿಸ್ಸೈ ಶ್ರೀಧರ, ಪುರಸಭೆಯ ಸದಸ್ಯ ಸಂದೀ ಬಂಟ ಭೇಟಿ ನೀಡಿ ಈ ಬಗ್ಗೆ ಪರಿಶೀಲಿಸಿ,
ಕೂಡಲೇ ಸ್ಮಶಾನಭೂಮಿಗೆ ಕಿರು ಸೇತುವೆಯನ್ನ ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವದು ಎಂದರು.

ಕಿರು ಸೇತುವೆ ದುರಸ್ತಿಗೆ ಆಗ್ರಹ
ಕೇಣಿಯ ಗಾಂವಕರವಾಡಾದಲ್ಲಿ ಕಳೆದ ಒಂದು ವರ್ಷದ ಹಿಂದೆ ಸ್ಮಶಾನಕ್ಕೆ ಸಾಗಲು ನಿರ್ಮಿಸಲಾದ ಕಿರು ಸೇತುವೆಯನ್ನು ಪುರಸಭೆ ಕಾಟಾಚಾರಕ್ಕೆ ಎಂಬಂತೆ ನಿರ್ಮಿಸಿ ಕೈ ತೊಳೆದುಕೊಂಡಿತ್ತು. ಸೇತುವೆ ನಿರ್ಮಾಣದ ವೇಳೆ ಯಾವುದೇ ವೈಜ್ಞಾನಿಕ ತಳಹದಿ ಇಲ್ಲದಿರುವದು ಕೂಡ ಪುರಸಭೆ ಒಪ್ಪಿಕೊಂಡಿರುವದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿತ್ತು. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸೇತುವೆ ಆದಷ್ಟು ಬೇಗ ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News