ಕೊಡಗು: ಮಳೆ ಶಾಂತವಾದರೂ ತಗ್ಗದ ಪ್ರವಾಹ; ಜು.14ರ ವರೆಗೆ ಶಾಲಾ-ಕಾಲೇಜುಗಳಿಗೆ ರಜೆ

Update: 2018-07-12 17:24 GMT

ಮಡಿಕೇರಿ, ಜು.12: ಕೊಡಗು ಜಿಲ್ಲೆಯಾದ್ಯಂತ ಮಳೆಯ ತೀವ್ರತೆ ಗುರುವಾರ ಕೊಂಚ ತಗ್ಗಿದೆಯಾದರೂ, ಜೀವನದಿ ಕಾವೇರಿಯ ಪ್ರವಾಹ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಇದರಿಂದಾಗಿ ಜಿಲ್ಲೆಯಾದ್ಯಂತ ಅಂಗನವಾಡಿ ಸೇರಿದಂತೆ ಶಾಲಾ ಕಾಲೇಜುಗಳಿಗೆ ರಜೆಯನ್ನು ಜು.14 ರ ವರೆಗೆ ವಿಸ್ತರಿಸಲಾಗಿದೆ.

ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ತಗ್ಗಿ, ಬಿರುಸಿನ ಗಾಳಿ ಕಂಡು ಬಂದು ಆತಂಕವನ್ನು ಮೂಡಿಸಿತು. ಕಾವೇರಿಯ ಕ್ಷೇತ್ರ ಬಾಗಮಂಡಲದಲ್ಲಿ ರಾತ್ರಿ ವೇಳೆ ಮಳೆಯ ಪ್ರಮಾಣ ಇಳಿಮುಖಗೊಂಡರೂ ಪ್ರವಾಹದ ಮಟ್ಟ ತಗ್ಗಿಲ್ಲ. ಕಳೆದ ಒಂದು ದಿನದ ಅವಧಿಯಲ್ಲಿ ಭಾಗ ಮಂಡಲ ಮತ್ತು ತಲಕಾವೇರಿ ಕ್ಷೇತ್ರ ವ್ಯಾಪ್ತಿಯಲ್ಲಿ 4 ಇಂಚಿಗೂ ಹೆಚ್ಚಿನ ಮಳೆಯಾಗಿದ್ದು, ಮಡಿಕೇರಿ ಮತ್ತು ಅಯ್ಯಂಗೇರಿ ರಸ್ತೆ ಪ್ರವಾಹದ ನೀರಿನಿಂದ ಆವೃತ್ತವಾಗಿದೆ.

ಜಿಲ್ಲಾಧಿಕಾರಿ ಭೇಟಿ: ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಳೆ ಹಾನಿ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ತಿತಿಮತಿ ಬಳಿ ನೂತನ ವಾಗಿ ನಿರ್ಮಾಣಗೊಳ್ಳುತ್ತಿರುವ ಸೇತುವೆ, ಸುಂಟಿ ಕೊಪ್ಪದಲ್ಲಿ ಕುಸಿದಿರುವ ಶಾಲೆ ತಡೆಗೋಡೆ ಸೇರಿದಂತೆ ವಿವಿಧ ಭಾಗಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದರು.
  
ಕರಡಿಗೋಡು ಬೆಟ್ಟದ ಕಾಡು ಬಳಿ ಕೆಲವು ಮನೆಗಳಿಗೆ ನದಿನೀರು ನುಗ್ಗಿರುವ ಹಿನ್ನೆಲೆಯಲ್ಲಿ 5-6 ಕುಟುಂಬಗಳು, ತಾತ್ಕಲಿಕವಾಗಿ ಬೇರೆ ಕಡೆಗಳಿಗೆ ಸ್ಥಳಾಂತರವಾಗಿದ್ದು, ಕೆಲವು ಮನೆಗಳ ಗೋಡೆಗಳು ಮಳೆಯಿಂದ ಬಿರುಕು ಬಿಟ್ಟ ಬಗ್ಗೆ ವರದಿಯಾಗಿದೆ. ಕರಡಿಗೋಡು ವ್ಯಾಪ್ತಿಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಹಲವು ವರ್ಷಗಳಿಂದ ಮಳೆಗಾಲದಲ್ಲಿ, ಕಾವೇರಿ ನದಿ ನೀರು ಮನೆಗಳಿಗೆ ನುಗ್ಗುತ್ತಿದ್ದು, ದಿಡ್ಡಳ್ಳಿ ನಿವಾಸಿಗಳಿಗೆ ಪುರ್ನವಸತಿ ಕಲ್ಪಿಸಿದಂತೆ ತಮಗೆ ಪರ್ಯಾಯ ವ್ಯವಸ್ಥೆ ಮಾಡಿದಲ್ಲಿ ಕರಡಿಗೋಡುವಿನಿಂದ ತೆರಳಲು ಸಿದ್ಧರಿರುವುದಾಗಿ ಸಂತ್ರಸ್ತರು ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಸಿದ್ದಾಪುರ ವ್ಯಾಪ್ತಿಯಿಂದ ಪೈಸಾರಿ ಭೂಮಿಗಳು ಒತ್ತುವರಿಯಾಗಿದ್ದು, ಅವುಗಳನ್ನು ತೆರವುಗೊಳಿಸಿ ನದಿ ದಡ ನಿವಾಸಿಗಳಿಗೆ ನಿವೇಶನಗಳ ರೀತಿಯಲ್ಲಿ ವಿತರಿಸಿದರೆ ಶಾಶ್ವತ ಪರಿಹಾರ ಕಾಣಬಹುದೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮತ್ತು ಕಾರ್ಮಿಕ ಮುಖಂಡ ಪಿ.ಆರ್. ಭರತ್ ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.

ನದಿಯಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಕಂದಾಯಾಧಿಕಾರಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸೂಚನೆ ನೀಡಿದರು. ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ಕರಡಿಗೋಡು ಸರಕಾರಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ ಎಂದು ಕಂದಾಯಾಧಿಕಾರಿ ತಿಳಿಸಿದರು.

ಪ್ರವಾಹದಲ್ಲಿ ಸಿಲುಕಿದ ಕಾರು: ಪ್ರಯಾಣಿಕರು ಪಾರು
ಬಾಗಮಂಡಲದ ಅಯ್ಯಂಗೇರಿ ರಸ್ತೆಯ ಮೇಲೆ ಮೂರು ಅಡಿಗಳಿಗೂ ಹೆಚ್ಚಿನ ಪ್ರವಾಹದ ನೀರು ಆವರಿಸಿದೆ. ಈ ರಸ್ತೆಯಲ್ಲಿ ಅಪಾಯದ ಅರಿವಿಲ್ಲದೆ ಚಲಿಸಿದ ತಮಿಳು ನಾಡಿನ ಪ್ರವಾಸಿಗರನ್ನು ಹೊಂದಿದ್ದ ಕಾರೊಂದು ನೀರಿನಲ್ಲಿ ಸಿಲುಕಿಕೊಂಡ ಘಟನೆ ಗುರುವಾರ ಬೆಳಗ್ಗೆ ನಡೆಯಿತು.

ತಲಕಾವೇರಿಗೆ ತೆರಳಿ ಹಿಂದಿರುಗುತ್ತಿದ್ದ ಪ್ರವಾಸಿಗರ ಕಾರು ಅಯ್ಯಂಗೇರಿ ರಸ್ತೆಯ ಪ್ರವಾಹದ ನೀರಿನಲ್ಲಿ ಸಾಗಿತ್ತು. ಈ ಸಂದರ್ಭ ಅಲ್ಲೇ ಸಮೀಪದಲ್ಲಿದ್ದ ಅಗ್ನಿ ಶಾಮಕ ದಳದ ಸಿಬ್ಬಂದಿ ಅಪಾಯದ ಮುನ್ಸೂಚನೆ ನೀಡಿದರಾದರು, ಇದನ್ನು ಚಾಲಕ ನಿರ್ಲಕ್ಷಿಸಿದ ಪರಿಣಾಮ ಕಾರು ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿತು.

ಬಳಿಕ ಅಗ್ನಿಶಾಮಕ ದಳ, ಗೃಹ ರಕ್ಷಕ ದಳದ ಸಿಬ್ಬಂದಿ ಕಾರಿನಲ್ಲ್ಲಿದ್ದ ಪ್ರವಾಸಿಗರನ್ನು ಬೋಟಿನ ಮೂಲಕ ರಕ್ಷಿಸಿ ದಡ ಸೇರಿಸುವಲ್ಲಿ ಸಫಲರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News