×
Ad

ಮಂಡ್ಯ: ಸಾಲಮನ್ನಾಗೆ ಒತ್ತಾಯಿಸಿ ರೈತರಿಂದ ಹೆದ್ದಾರಿ ತಡೆ

Update: 2018-07-12 23:13 IST

ಮಂಡ್ಯ, ಜು.12: ರೈತರ ಎಲ್ಲಾ ಬಗೆಯ ಕೃಷಿ ಹಾಗೂ ಸ್ತ್ರೀಶಕ್ತಿ ಸಂಘಗಳ ಸಂಪೂರ್ಣ ಸಾಲಮನ್ನಾ ಮಾಡುವಂತೆ ಆಗ್ರಹಿಸಿ ರೈತಸಂಘ(ಮೂಲ ಸಂಘಟನೆ) ದ ವತಿಯಿಂದ ಮದ್ದೂರಿನ ಶಿವಪುರದಲ್ಲಿ ಬಳಿ ಗುರುವಾರ ಬೆಂಗಳೂರು ಮೈಸೂರು ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.

ಹೆದ್ದಾರಿಗೆ ಆಗಮಿಸಿದ ರೈತಸಂಘದ ಕಾರ್ಯಕರ್ತರು, ರೈತರ ಹಾಗೂ ಸ್ತ್ರಿಶಕ್ತಿ ಸಂಘಗಳ ಸಾಲಮನ್ನಾ ಮಾಡುವುದಾಗಿ ಹೇಳಿ ಮಾತು ತಪ್ಪಿದ್ದಾರೆಂದು ಸಿಎಂ ಕುಮಾರಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು.

ಸಂಘದ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ ಮಾತನಾಡಿ, ಸಿಎಂ ಕುಮಾರಸ್ವಾಮಿ ಚುನಾವಣಾ ಪೂರ್ವದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದಂತೆ ರೈತರ ಮತ್ತು ಸ್ತ್ರೀಶಕ್ತಿ ಸಂಘಗಳ ಸಂಪೂರ್ಣ ಸಾಲಮನ್ನಾ ಮಾಡದೆ ಬಜೆಟ್‍ನಲ್ಲಿ 2 ಲಕ್ಷ ರೂ. ಸುಸ್ತಿಸಾಲ ಮಾತ್ರ ಮಾಡಿದ್ದಾರೆ. ಇದು ರೈತ ವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸಿಎಂ ವಚನ ಭ್ರಷ್ಟರಾಗದೆ ನೀಡಿರುವ ಭರವಸೆಯಂತೆ ಸಾಲಮನ್ನಾ ಮಾಡಿ, ಮುಂಗಾರು ಬಿತ್ತನೆ ಕಾರ್ಯ ಪ್ರಾರಂಭಿಸಲು ಹೊಸದಾಗಿ ಸಾಲ ನೀಡಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬಾಕಿ ಹಣ ಕೊಡಿಸಬೇಕು. ಪ್ರಸಕ್ತ ಸಾಲಿಗೆ ಟನ್ ಕಬ್ಬಿಗೆ 3,500 ರೂ. ನಿಗದಿಪಡಿಸಿ ಕಾರ್ಖಾನೆ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.

ಪಡಿತರದಲ್ಲಿ ನೀಡುವ 2 ಕೆಜಿ ಅಕ್ಕಿ ಕಡಿಮೆ ಮಾಡಬಾರದು. ರೇಷ್ಮೆ ಬೆಲೆ ಕೆಜಿಗೆ 500 ರೂ.ಗಳಗಿಂತ ಕಡಿಮೆಯಾಗದಂತೆ ಸ್ಥಿರ ಬೆಲೆ ನಿಗದಿ ಮಾಡಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು. ರೇಷ್ಮೆ ಆಮದು ಸುಂಕ ಹೆಚ್ಚಳ ಹಾಗೂ ಬಸವರಾಜು ಸಮಿತಿ ವರದಿ ಜಾರಿ ಮಾಡಬೇಕು. ಹಾಲು ಒಕ್ಕೂಟಗಳು ಹಾಲಿನ ದರವನ್ನು ಇಳಿಸದೆ ದರವನ್ನು ಹೆಚ್ಚಿಸಬೇಕು ಎಂದೂ ಅವರು ಆಗ್ರಹಿಸಿದರು.

ಮುಖಂಡರಾದ ಸೊ.ಸಿ.ಪ್ರಕಾಶ್, ಕೆ.ಜಿ.ಉಮೇಶ್, ಮುದ್ದೇಗೌಡ, ರಾಜೇಶ್, ರಾಮಲಿಂಗೇಗೌಡ, ಗಣೇಶ್, ಸತೀಶ್, ಗದ್ದೆನಿಂಗೇಗೌಡ, ಶಿವಲಿಂಗು, ರಾಮೇಗೌಡ, ಕೃಷ್ಣಪ್ಪ, ನಾಗರಾಜು, ಪ್ರಭುಲಿಂಗಂ, ಶ್ರೀಧರ್, ರಮೇಶ್, ಕೆಂಪೇಗೌಡ, ದೇಶಹಳ್ಳಿ ಬೋರಣ್ಣ, ಶೆಟ್ಟಹಳ್ಳಿ ಪ್ರಸನ್ನ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News