×
Ad

ಮಂಡ್ಯ: ಟ್ರ್ಯಾಕ್ಟರ್ ಪಲ್ಟಿ; ನಿವೃತ್ತ ಐಎಎಸ್ ಅಧಿಕಾರಿ ಮೃತ್ಯು

Update: 2018-07-12 23:16 IST

ಮಂಡ್ಯ, ಜು.12: ಸ್ವತ: ಜಮೀನು ಉಳುಮೆಯಲ್ಲಿ ತೊಡಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ  ಪಾಂಡವಪುರ ತಾಲೂಕಿನ ದೊಡ್ಡಬ್ಯಾಡರಹಳ್ಳಿ ಗ್ರಾಮದ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ.

ಮಂಡ್ಯ ತಾಲೂಕಿನ ಸಿದ್ದಯ್ಯನಕೊಪ್ಪಲು ಗ್ರಾಮದ ನಿವೃತ್ತ ಐಎಎಸ್ ಅಧಿಕಾರಿ ನಾಗರಾಜು(62) ಮೃತಪಟ್ಟ ವ್ಯಕ್ತಿಯಾಗಿದ್ದು, ಇವರು, ದೊಡ್ಡಬ್ಯಾಡರಹಳ್ಳಿ ಬಳಿ ಖರೀದಿಸಿದ್ದ ಜಮೀನಿನಲ್ಲಿ ಉಳುಮೆ ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಪಾಂಡವಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ದೇಹವನ್ನು ಮಂಡ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶವ ಪರೀಕ್ಷೆ ನಡೆಸಲಾಯಿತು.

ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಂದಾಯ ಅಧಿಕಾರಿಯಾಗಿ ಸೇವೆ ಆರಂಭಿಸಿದ ನಾಗರಾಜು, ಮೈಸೂರಿನ ಮುಡಾ ಆಯುಕ್ತರಾಗಿ, ಮೈಸೂರು ವಿವಿಯ ರಿಜಿಸ್ಟ್ರಾರ್ ಆಗಿ, ಮಂಡ್ಯ ಜಿಪಂ ಅಭಿವೃದ್ಧಿ ಕಾರ್ಯದರ್ಶಿಯಾಗಿ, ಬೆಂಗಳೂರು ವಿಶೇಷ ಜಿಲ್ಲಾಧಿಕಾರಿಯಾಗಿ, ರಾಯಚೂರು ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ 2016ರಲ್ಲಿ ನಿವೃತ್ತಿ ಹೊಂದಿದ್ದರು. ನಂತರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.

ಮೃತರಿಗೆ ಪತ್ನಿ ಮಮತಾ, ಪುತ್ರ, ಪುತ್ರಿ ಇದ್ದಾರೆ. ಇವರ ಶವಸಂಸ್ಕಾರ ಜು.13ರಂದು ಬೆಳಗ್ಗೆ ಸಿದ್ದಯ್ಯನ ಕೊಪ್ಪಲಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News