ಕಳಸ: ಮನೆ ಕುಸಿದು ಬೀಳುವ ಆತಂಕದಲ್ಲಿ ಬಡ ಕುಟುಂಬಗಳು
ಕಳಸ, ಜು.12: ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯಾದ್ಯಂತ ಬುಧವಾರ ಸುರಿದ ಭಾರೀ ಮಳೆಗೆ ಕಳಸ ಹೋಬಳಿಯ ಮರಸಣಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಡೂರು ಗ್ರಾಮದ ಚನ್ನಹಡ್ಲು ಎಂಬಲ್ಲಿ ಕೃಷಿ ಜಮೀನು ಸಹಿತ ಭೂ ಕುಸಿತ ಉಂಟಾಗಿ ಹಿರೇಬೈಲು-ಬಾಳೆಹೊಳೆ ರಸ್ತೆ ಸಂಪೂರ್ಣ ಮುಚ್ಚಿ ಹೋಗಿದೆ.
ಜಮೀನಿನ ಮೇಲ್ಬಾಗದಲ್ಲಿ ಮೂರು ಮನೆಗಳಿದ್ದು, ಮಳೆ ಮತ್ತೆ ಸುರಿದಲ್ಲಿ ಧರೆಯ ಮಣ್ಣು ಸಡಿಲಗೊಂಡು ಮನೆಗಳೂ ಉರುಳುವ ಭೀತಿ ಎದುರಾಗಿದೆ.
ಬುಧವಾರದ ಸಂಜೆಯ ಹೊತ್ತಿಗೆ ಚನ್ನಹಡ್ಲುವಿನ ರಸ್ತೆಯ ಬದಿಯ ಸುರೇಶ ಮತ್ತು ಮಂಜು, ರವಿಗೆ ಎಂಬವರಿಗೆ ಸೇರಿದ ಜಮೀನಿನ ಮೇಲಿದ್ದ ಬೃಹತ್ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಎತ್ತರ ಪ್ರದೇಶದಲ್ಲಿ ಇನ್ನು ಹಲವಾರು ಮರಗಳು ಉರುಳಿವೆ. ರಾತ್ರಿ ಪೂರ್ತಿ ಮಳೆ ಸುರಿದ ಪರಿಣಾಮ ಸುಮಾರು ಅಧರ್ ಎಕರೆ ಭೂಮಿ ಜರಿದು ರಸ್ತೆಗೆ ಬಿದ್ದಿದೆ. ಜಮೀನಿನಲ್ಲಿದ್ದ ತೆಂಕು,ಅಡಿಕೆ,ಕಾಳುಮೆಣಸು,ಏಲಕ್ಕಿ ಸಂಪೂರ್ಣ ಮಣ್ಣು ಪಾಲು ಆಗಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವುಂಟಾಗಿದೆ.
ಸಂಕಷ್ಟದಲ್ಲಿರುವ ಎರಡು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಘಟನೆಯಿಂದ ಸುಮಾರು 10 ವಿದ್ಯುತ್ ಕಂಬಗಳು ಧರೆಗುರೆಗುಳಿದು ಗ್ರಾಮದಲ್ಲಿ ವಿದ್ಯುತ್ ನಿಲುಗಡೆಯಾಗಿದೆ. ಈ ಪ್ರದೇಶದಲ್ಲಿ ರಸ್ತೆಯುದ್ದಕ್ಕೂ ಭೂ ಕುಸಿತ ಉಂಟಾಗಿದೆ. ರಸ್ತೆಯ ಮೇಲಿದ್ದ ಮಣ್ಣನ್ನು ತೆರವು ಮಾಡಲು ಸಾದ್ಯವಿಲ್ಲದಂತಾಗಿದೆ. ಮಣ್ಣು ತೆಗೆದಾಗ ಮೇಲಿದ್ದ ಮನೆಗಳು ಧರೆಗುರುಳುವ ಸಾಧ್ಯತೆಗಳು ಹೆಚ್ಚಿರುವುದರಿಂದ ಸಂಕಷ್ಟದಲ್ಲಿರುವ ಕುಟುಂಬಗಳು ನೆರವಿಗಾಗಿ ಕೈಚಾಚುತ್ತಿವೆ.
ಕಳೆದ ಆರು ವರ್ಷಗಳಿಂದ ಜಮೀನಿನಲ್ಲಿದ್ದ ದೊಡ್ಡ ಮರವನ್ನು ತೆರವು ಮಾಡಿ ಎಂದು ಅರಣ್ಯ ಇಲಾಖೆಗೆ ಕೇಳಿಕೊಂಡಿದ್ದೆವು. ಆದರೆ ಅವರು ತೆರವು ಮಾಡದೆ ಇರುವ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿ ಬಂದು ಉಳಿದ ಮರಗಳನ್ನು ತೆರವು ಮಾಡಿದ್ದಾರೆ. ಘಟನೆ ನಡೆದು 20 ಗಂಟೆಗಳು ಕಳೆದರೂ ಕೂಡ ಯಾವುದೇ ಅಧಿಕಾರಿಗಳಾಗಲೀ ಜನಪ್ರತಿನಿಧಿಗಳಾಗಲೀ ಸ್ಥಳಕ್ಕೆ ಬೇಟಿ ನೀಡಲಿಲ್ಲ. ಬಡವರ ಕಣ್ಣೀರು ಯಾರಿಗೂ ಅರ್ಥವಾಗುತ್ತಿಲ್ಲ. ಸ್ಥಳೀಯರು ಮಾತ್ರ ಬಂದು ಒಂದಷ್ಟು ಸಾಂತ್ವನ ಹೇಳಿದ್ದಾರೆ. ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ನಾವು ಕಣ್ಣೀರಲ್ಲಿ ಕೈತೊಳೆಯುತ್ತಿದ್ದೇವೆ ಎಂದು ಸಂಕಷ್ಟದಲ್ಲಿರುವ ಕುಟುಂಬದವರು ತಮ್ಮ ಅಳಲನ್ನು ಪತ್ರಿಕೆಯೊಂದಿಗೆ ತೋಡಿಕೊಂಡರು.
ಘಟನೆಯ ಸ್ಥಳಕ್ಕೆ ಕಳಸ ಪ್ರಭಾರ ತಹಶೀಲ್ದಾರ್ ರತ್ನಾಕರ್, ವಿಎಗಳಾದ ಪ್ರದೀಪ, ಸರಿತಾ, ತೋಟಗಾರಿಕಾ ಇಲಾಖಾ ಅಧಿಕಾರಿ ಸಿ.ಚಂದ್ರಪ್ಪ, ಮರಸಣಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಸ್ಥಳ ಪರಿಶೀಲನೆ ನಡೆಸಿದ್ದಾರೆ.