ಜಯಂತಿಗಳಿಗೆ ತಿಥಿಯಾಗಲಿ

Update: 2018-07-13 04:19 GMT

ಇತ್ತೀಚಿನ ದಿನಗಳಲ್ಲಿ ಜನರು ಅಭಿವೃದ್ಧಿಯ ಕುರಿತಂತೆ ಚರ್ಚಿಸದಿರಲು ಸರಕಾರ ಸುಲಭ ದಾರಿಗಳನ್ನು ಕಂಡುಕೊಳ್ಳುತ್ತಿದೆ. ಅವುಗಳಲ್ಲಿ ಈ ‘ಜಯಂತಿ ಘೋಷಣೆ’ಯೂ ಒಂದು. ಜನ ಸಾಮಾನ್ಯರ ದೈನಂದಿನ ಸಮಸ್ಯೆಗಳನ್ನು, ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳುವ ಬದಲು, ಜನರನ್ನು ಓಲೈಸಲು ಭಾವನಾತ್ಮಕವಾದ ಕೆಲವು ಘೋಷಣೆಗಳನ್ನು ಮಾಡಿ ಕೈತೊಳೆದುಕೊಳ್ಳಲು ನೋಡುತ್ತಿದೆ. ಬೇಡರ ಜಾತಿಯನ್ನು ಓಲೈಸಲು ವಾಲ್ಮೀಕಿ ಜಯಂತಿ, ಕುರುಬರ ಜಾತಿಯನ್ನು ಓಲೈಸಲು ಕನಕ ಜಯಂತಿ, ಬಿಲ್ಲವರನ್ನು ಓಲೈಸಲು ನಾರಾಯಣ ಗುರು ಜಯಂತಿ, ಬ್ರಾಹ್ಮಣರನ್ನು ಓಲೈಸಲು ಶಂಕರ ಜಯಂತಿ, ಮಧ್ವ ಜಯಂತಿ, ಮುಸ್ಲಿಮರನ್ನು ಓಲೈಸಲು ಟಿಪ್ಪು ಜಯಂತಿ....ಹೀಗೆ ಒಂದೊಂದು ಜಯಂತಿಯನ್ನು ಘೋಷಿಸಿ, ಅದರ ಹೆಸರಲ್ಲಿ ವರ್ಷಕ್ಕೊಮ್ಮೆ ಕಾಟಾಚಾರಕ್ಕೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಆ ಸಮುದಾಯದ ಪರವಾಗಿ ಸರಕಾರವಿದೆ ಎಂದು ಜನರು ಭಾವಿಸುತ್ತಾರೆ ಎಂದು ರಾಜಕೀಯ ನಾಯಕರು ತಿಳಿದುಕೊಂಡಿದ್ದಾರೆ.

 ಸರಕಾರದ ಕೆಲಸ ಜಯಂತಿಯನ್ನು ಹಮ್ಮಿಕೊಳ್ಳುವುದಲ್ಲ. ಈ ನಾಡಿನಲ್ಲಿ ಹಲವು ಶ್ರೇಷ್ಠ ನಾಯಕರು ಆಗಿ ಹೋಗಿದ್ದಾರೆ. ಅವರನ್ನು ಸರಕಾರ ಗೌರವಿಸಬೇಕು ನಿಜ. ಆದರೆ ಸರಕಾರಿ ಜಯಂತಿಗಳು ಅವರಿಗೆ ಗೌರವ ಸಲ್ಲಿಸಿದ್ದಕ್ಕಿಂತ ಅವರನ್ನು ಅವಮಾನಿಸಿದ್ದೇ ಹೆಚ್ಚು. ಸರಕಾರದ ಈ ಘೋಷಣೆಗಳು ಶ್ರೇಷ್ಟ ನಾಯಕರನ್ನು ಕೆಲವು, ಜಾತಿ, ಧರ್ಮಗಳಿಗೆ ಕಟ್ಟಿ ಹಾಕಿ ಅವರ ವ್ಯಕ್ತಿತ್ವವನ್ನೇ ಸಂಕುಚಿತಗೊಳಿಸುತ್ತದೆ. ಗೌರವಿಸುವ ಪ್ರಾಮಾಣಿಕ ಉದ್ದೇಶವಿದ್ದರೆ ಅಂತಹ ನಾಯಕರ ಚಿಂತನೆ, ಆಲೋಚನೆಗಳನ್ನು ಸಮಾಜದಲ್ಲಿ ಅನುಷ್ಠಾನ ಗೊಳಿಸಬೇಕು. ಬಸವ ಜಯಂತಿಯ ದಿನ ಶಾಲೆಗಳಿಗೆ ರಜೆ ಘೋಷಿಸಿ, ಸಭೆ ನಡೆಸಿ, ವೇದಿಕೆಯಲ್ಲಿ ಒಂದಿಷ್ಟು ರಾಜಕಾರಣಿಗಳು, ಅಧಿಕಾರಿಗಳು ಭಾಷಣ ಮಾಡಿದರೆ ಬಸವಣ್ಣನಿಗೆ ಗೌರವ ಸಲ್ಲಿಸಿದಂತಾಗುತ್ತದೆಯೇ? ಬಸವಣ್ಣ ಪ್ರತಿಪಾದಿಸಿದ ಕಾಯಕ, ಜಾತಿ ರಹಿತ ಸಮಾಜವನ್ನು ಜಾರಿಗೆ ತರುವಲ್ಲಿ ಯಾವ ಕಾರ್ಯಕ್ರಮಗಳನ್ನೂ ಹಾಕಿಕೊಳ್ಳದೆ, ಬಸವಣ್ಣನ ಮೂರ್ತಿಗೆ ಹಾರ ಹಾಕುವುದರಿಂದ ಪ್ರಯೋಜನವೇನು? ವಿಪರ್ಯಾಸವೆಂದರೆ, ಜಾತಿಯನ್ನು ವಿರೋಧಿಸಿದ ಬಸವಣ್ಣನ ಜಯಂತಿ ಮಾಡುತ್ತಿರುವ ಸರಕಾರವೇ, ಜಾತಿಯನ್ನು ಪ್ರತಿಪಾದಿಸಿದ ಶಂಕರಾಚಾರ್ಯರ ಜಯಂತಿಯನ್ನೂ ಆಚರಿಸಲು ಹೊರಟಿರುವುದು. ಇಂತಹ ವಿರೋಧಾಭಾಸಗಳನ್ನು ಒಳಗೊಂಡಿರುವ ಜಯಂತಿಯನ್ನು ಆಚರಿಸುವುದರಿಂದ ಸಮಾಜಕ್ಕೆ ಏನಾದರೂ ಲಾಭವಿದೆಯೇ?

ಜಯಂತಿಗಳನ್ನು, ಉತ್ಸವಗಳನ್ನು ಸರಕಾರದ ನೇತೃತ್ವದಲ್ಲಿ ಆಚರಿಸುವಾಗ ಕೆಲವು ನಿಯಮಗಳನ್ನು ತನಗೆ ತಾನೇ ಹೇರಿಕೊಳ್ಳುವುದು ಅತ್ಯಗತ್ಯ. ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಇವುಗಳು ಎಲ್ಲ ಜಾತಿ ಧರ್ಮಗಳನ್ನು ಮೀರಿ, ಜನರನ್ನು ಸಂಘಟಿಸುವ, ಒಂದು ವೇದಿಕೆಯಡಿಯಲ್ಲಿ ಸೇರಿಸುವ ದಿನಗಳು. ಇದರ ಜೊತೆ ಜೊತೆಗೇ ಅಗತ್ಯವಿದ್ದರೆ ಗಾಂಧಿ ಜಯಂತಿ ಮತ್ತು ಅಂಬೇಡ್ಕರ್ ಜಯಂತಿಯನ್ನು ಆಚರಿಸಬಹುದೇನೋ. ಕರ್ನಾಟಕಕ್ಕೆ ಸಂಬಂಧಿಸಿದರೆ, ಕನ್ನಡ ರಾಜ್ಯೋತ್ಸವ ಹೊರತು ಪಡಿಸಿ ಇನ್ನಾವ ಜಯಂತಿಯನ್ನು ಸರಕಾರ ಆಚರಿಸುವ ಅಗತ್ಯವಿಲ್ಲ. ಯಾರಿಗೆ ಯಾವ ನಾಯಕನ ಚಿಂತನೆಗಳು, ತತ್ವಗಳು, ಕೊಡುಗೆಗಳು ಇಷ್ಟವಾಗಿದೆಯೋ ಅವರು ಅದನ್ನು ಆಚರಿಸಲು ಸರ್ವ ಸ್ವತಂತ್ರರಿದ್ದಾರೆ. ಸರಕಾರ ಬೇಕಾದರೆ ವಚನ ಸಾಹಿತ್ಯಗಳನ್ನು ಹೊರಗೆ ತರಲಿ, ಕನಕನ ಗೀತೆಗಳನ್ನು ಕನ್ನಡ ಸಂಸ್ಕೃತಿ ಇಲಾಖೆಯಂತಹ ಸಂಸ್ಥೆಯ ಮೂಲಕ ಪ್ರಕಟಿಸಲಿ.

ಇದೇ ಸಂದರ್ಭದಲ್ಲಿ ಕನಕನನ್ನು ಇಷ್ಟ ಪಡುವವರು ಕನಕನ ಜಯಂತಿ ಆಚರಿಸಲಿ, ಪುರಂದರರನ್ನು ಇಷ್ಟ ಪಡುವವರು ಪುರಂದರ ದಾಸರನ್ನು ಆಚರಿಸಲಿ. ಹಾಗೆಯೇ ಟಿಪ್ಪು ಸುಲ್ತಾನನನ್ನು ಗೌರವಿಸುವವರು ಟಿಪ್ಪು ಜಯಂತಿಯನ್ನು ಆಚರಿಸಲಿ. ಟಿಪ್ಪು ಸುಲ್ತಾನ್ ಒಬ್ಬ ರಾಜನಾಗಿದ್ದ. ಒಬ್ಬ ರಾಜನಾಗಿ ತನ್ನ ನೆಲಕ್ಕಾಗಿ ಹೋರಾಡುವುದು ಅವನಿಗೆ ಅಗತ್ಯವಾಗಿತ್ತು. ನಾವಿಂದು ಟಿಪ್ಪುವನ್ನು ನೆನೆಯಬೇಕಾದುದು ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣ ತ್ಯಾಗ ಮಾಡಿದ ಎನ್ನುವ ಕಾರಣಕ್ಕಾಗಿಯಲ್ಲ. ಒಬ್ಬ ರಾಜನಾಗಿಯೂ ಆತ ರೈತರು, ದಲಿತರು, ಮಹಿಳೆಯರ ಮೇಲೆ ಹೊಂದಿದ್ದ ಕಾಳಜಿಗಾಗಿ. ಒಬ್ಬ ಮುಸ್ಲಿಮ್ ಅರಸನಾಗಿ ಇತರ ಧರ್ಮೀಯರ ನಂಬಿಕೆಗಳನ್ನು ಗೌರವಿಸಿದ್ದಕ್ಕಾಗಿ. ತನ್ನ ಆಡಳಿತದ ಸಂದರ್ಭದಲ್ಲಿ ಆತ ಹೊಂದಿದ್ದ ದೂರಗಾಮಿ ದೃಷ್ಟಿಕೋನಕ್ಕಾಗಿ. ಸರಕಾರ ಬೇಕಾದರೆ ಆತನ ಆಡಳಿತದ ಕಾಲದ ಒಳಿತುಗಳನ್ನು ಜನರಿಗೆ ಪುಸ್ತಕಗಳ ಮೂಲಕ ತಲುಪಿಸುವ ಪ್ರಯತ್ನ ಮಾಡಲಿ. ಆತನ ಸ್ಮಾರಕಗಳನ್ನು ಉಳಿಸುವಲ್ಲಿ ಶ್ರಮ ವಹಿಸಲಿ. ಆದರೆ ಆತನ ಜಯಂತಿಯನ್ನು ಯಾರಿಗೆ ಅಗತ್ಯವಿದೆಯೋ ಅವರಷ್ಟೇ ಮಾಡಿಕೊಳ್ಳಲಿ. ಇದು ಬರೀ ಟಿಪ್ಪುವಿಗೆ ಮಾತ್ರವಲ್ಲ, ಕಿತ್ತೂರು ಚೆನ್ಮಮ್ಮ, ಕೆಳದಿ ಚೆನ್ನಮ್ಮ, ಅಬ್ಬಕ್ಕ, ಕೆಂಪೇಗೌಡ ಎಲ್ಲರಿಗೂ ಅನ್ವಯವಾಗಬೇಕು.

ಇತ್ತೀಚೆಗೆ ಸರಕಾರ ಶಂಕರಾಚಾರ್ಯರ ಜಯಂತಿಯನ್ನು ಮಾಡಿತು. ಇದೇ ಶಂಕರಾಚಾರ್ಯರ ನಿಲುವಿನ ಕುರಿತಂತೆ ಹತ್ತು ಹಲವು ಚಿಂತಕರು ಲೇಖನಗಳನ್ನು ಬರೆದಿದ್ದಾರೆ. ಶಂಕರಾಚಾರ್ಯರು ಜಾತಿವಾದಿಗಳಾಗಿದ್ದರು. ಶೂದ್ರರು, ದಲಿತರ ಕುರಿತಂತೆ ಅವರು ಪೂರ್ವಗ್ರಹಪೀಡಿತರಾಗಿದ್ದರು ಎಂದು ಲೇಖಕರು ಈಗಾಗಲೇ ಸಾಕ್ಷಿ ಸಮೇತ ಸಾಬೀತುಪಡಿಸಿದ್ದಾರೆ. ಇಷ್ಟಕ್ಕೂ ಅವರು ಒಂದು ನಿರ್ದಿಷ್ಟ ಪಂಥದ ಸ್ಥಾಪಕರು ಮತ್ತು ಅವರ ಚಿಂತನೆ ಈ ದೇಶದ ಬಡವರು, ದಲಿತರ ಸಾಮಾಜಿಕ ಬೆಳವಣಿಗೆಯ ಮೇಲೆ ಯಾವ ಪರಿಣಾಮವನ್ನೂ ಬೀರಿಲ್ಲ. ಇಂದು ಅವರ ಸಿದ್ಧಾಂತವನ್ನು ಒಪ್ಪದ ಹಲವು ಪಂಥಗಳಿವೆ. ಸರಕಾರ ಶಂಕರಾಚಾರ್ಯರ ಜಯಂತಿಯನ್ನು ಘೋಷಣೆ ಮಾಡುವ ಮೂಲಕ, ಇನ್ನಷ್ಟು ಜಯಂತಿಗಳನ್ನು ಮೈಮೇಲೆ ಎಳೆದುಕೊಂಡಿದೆ. ನಾಳೆ ಮಧ್ವ ಜಯಂತಿಯನ್ನು ಮಾಡಬೇಕು, ರಾಮಾನುಜ ಜಯಂತಿಯನ್ನು ಮಾಡಬೇಕು ಎಂದು ಒತ್ತಡ ಬಂದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಈ ಹಿಂದೆ ನಾಡಗೀತೆಯಲ್ಲೂ ಸರಕಾರ ಇದೇ ತಪ್ಪನ್ನು ಮಾಡಿತ್ತು. ನಾಡಗೀತೆಯನ್ನು ಬರೆದ ಕುವೆಂಪು ಅವರು ಮಧ್ವರನ್ನು ಒಪ್ಪಿಕೊಂಡಿರಲೇ ಇಲ್ಲ. ಲೇಖನಗಳಲ್ಲಿ, ಭಾಷಣಗಳಲ್ಲಿ ಅವರು ಮಧ್ವರ ಜಾತೀಯತೆಯನ್ನು ಅತ್ಯಂತ ಕಟು ಭಾಷೆಯಲ್ಲಿ ಟೀಕಿಸಿದ್ದರು. ಈ ಕಾರಣದಿಂದಲೇ ‘ಜೈ ಭಾರತ ಜನನಿಯ ತನುಜಾತೆ’ ಗೀತೆಯಲ್ಲಿ ಶಂಕರ, ರಾಮಾನುಜರ ಹೆಸರನ್ನು ಹಾಕಿದ್ದರೂ ಮಧ್ವರ ಹೆಸರನ್ನು ಹಾಕಿರಲಿಲ್ಲ. ಆದರೆ ಪೇಜಾವರಶ್ರೀಗಳ ಒತ್ತಡದ ಕಾರಣದಿಂದ ಅಂದಿನ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು, ಕುವೆಂಪು ಅವರ ಹಾಡಿಗೆ ಮಧ್ವರ ಹೆಸರನ್ನು ಸೇರಿಸಿದರು. ಈ ಮೂಲಕ ಅವರು ನಾಡಗೀತೆಗೆ ಜಾತೀಯತೆಯ ಕಳಂಕವನ್ನು ಹಚ್ಚಿದರು. ಕುವೆಂಪು ಅವರ ಮೇಲೆ ಪರೋಕ್ಷವಾಗಿ ಮಧ್ವರನ್ನು ಸರಕಾರವೇ ಹೇರಿತು.

ಈ ನಾಡಿನಲ್ಲಿ ದಲಿತರು, ಮುಸ್ಲಿಮರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಚಿಂತಾಜನಕವಾಗಿದೆ. ಇವರಿಗೆ ಬೇಕಾಗಿರುವುದು ಜಯಂತಿಗಳಲ್ಲ. ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೇತ್ರಗಳಲ್ಲಿ ಆಮೂಲಾಗ್ರವಾಗಿ ಅವರು ಅಭಿವೃದ್ಧಿ ಹೊಂದಬೇಕಾಗಿದೆ. ಈ ನಿಟ್ಟಿನಲ್ಲಿ ಯಾವ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎನ್ನುವುದರ ಆಧಾರದಲ್ಲಿ, ಸರಕಾರ ಯಾರ ಪರವಾಗಿದೆ ಎನ್ನುವುದು ನಿರ್ಧರಿಸಲ್ಪಡುತ್ತದೆ. ಈಗ ಇರುವ ಎಲ್ಲ ಜಯಂತಿಗಳಿಗೆ ತಿಥಿ ಮಾಡಿ, ಅದರಲ್ಲಿ ಉಳಿತಾಯವಾದ ಹಣವನ್ನು ಸರಕಾರಿ ಶಾಲೆಗಳ ಉದ್ಧಾರಕ್ಕೆ ಬಳಸಿದರೂ, ಅದರಿಂದ ನಾಡಿಗೆ ಒಳಿತಿದೆ. ಆದುದರಿಂದ ತಕ್ಷಣ ಸರಕಾರ ಕನ್ನಡ ರಾಜ್ಯೋತ್ಸವ ಹೊರತು ಪಡಿಸಿ ಎಲ್ಲ ಜಯಂತಿಗಳನ್ನು ರದ್ದು ಪಡಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News