ಅಂಚೆ ಕಚೇರಿಗಳನ್ನು ಜನಸ್ನೇಹಿಯಾಗಿಸುವುದು ಪ್ರಧಾನಿ ಗುರಿ: ಶೋಭಾ ಕರಂದ್ಲಾಜೆ

Update: 2018-07-13 13:31 GMT

ಚಿಕ್ಕಮಗಳೂರು, ಜು.13: ಅಂಚೆ ಕಚೇರಿಯನ್ನು ಜನಸ್ನೇಹಿಯನ್ನಾಗಿಸಲು ಪ್ರಧಾನಿ ನರೇಂದ್ರ ಮೋದಿಯವರು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ನಗರದ ಜ್ಯೋತಿ ನಗರದಲ್ಲಿ ನೂತನ ವಿಭಾಗೀಯ ಕಚೇರಿ ಮತ್ತು ಅಂಚೆ ಕಚೇರಿ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ವೃದ್ಧರು, ಸಾರ್ವಜನಿಕರು, ದಿವ್ಯಾಂಗರು ತಮ್ಮ ಮಾಶಾಸನ ಸೇರಿದಂತೆ ಅನೇಕ ಯೋಜನೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಂಚೆ ಕಚೇರಿಯನ್ನು ಅವಲಂಭಿಸಿದ್ದಾರೆ. ಅವರಿಗೆ ಅನುಕೂಲವಾಗುವಂತೆ ಕಟ್ಟಡ ನಿರ್ಮಾಣ ಮಾಡಿರುವುದು ತುಂಬಾ ಖುಷಿ ತಂದಿದೆ. ದೇಶದ ಎಲ್ಲಾ ಅಂಚೆ ಕಚೇರಿಗಳನ್ನು ಸುಂದರವಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಪ್ರಸ್ತುತ ಇಮೇಲ್, ಮೊಬೈಲ್ ಯುಗದಲ್ಲೂ ಅಂಚೆ ಇಲಾಖೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಅಂಚೆ ಇಲಾಖೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಹೊಸ ಹೊಸ ಯೋಜನೆಗಳನ್ನು ಜೋಡಿಸುವ ಕೆಲಸ ಮಾಡಲಾಗುತ್ತಿದೆ ಎಂದ ಅವರು, ಜಿಲ್ಲೆಯಲ್ಲಿ ಸ್ವಂತ ಕಟ್ಟಡದ ವಿಭಾಗೀಯ ಕಚೇರಿ ಬೇಡಿಕೆ ಅನೇಕ ವರ್ಷಗಳಿಂದ ಇತ್ತು. ನೂತನ ಕಟ್ಟಡವನ್ನು 1 ಕೋಟಿ 67ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 2014ರಿಂದ ಜಿಲ್ಲೆಯಲ್ಲಿ 2 ಕೋಟಿ 86 ಲಕ್ಷ ವೆಚ್ಚದಲ್ಲಿ ಕಟ್ಟಡ ರಿಪೇರಿ ಹಾಗೂ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಚಿಕ್ಕಮಗಳೂರು ಪೊಸ್ಟಲ್ ಸ್ಟಾಫ್ ಕ್ವಾಟ್ರಾಸ್ 23 ಲಕ್ಷ 77ಸಾವಿರ, ತರೀಕೆರೆ ಗ್ರೇಡ್ 2 ಅಂಚೆ ಕಚೇರಿ ನಿರ್ಮಾಣಕ್ಕೆ 25ಲಕ್ಷ ರೂ., ಕಳಸ ಎ ಕ್ಲಾಸ್ ಅಂಚೆ ಕಚೇರಿಗೆ 17ಲಕ್ಷ ರೂ. ಜಾವಳ್ಳಿಯ ಅಂಚೆ ಕಚೇರಿಗೆ 16 ಲಕ್ಷ ರೂ. ಬಾಳೆಹೊನ್ನೂರಿನ ಅಂಚೆ ಕಚೇರಿಗೆ 3ಲಕ್ಷದ 86 ಸಾವಿರ, ಶಾಂತವೇರಿಯ ಸಿ ಕ್ಲಾಸ್ ಅಂಚೆ ಕಚೇರಿಗೆ 16 ಲಕ್ಷ 98 ಸಾವಿರ, ಶೃಂಗೇರಿ ಗ್ರೇಡ್ 1 ಅಂಚೆ ಕಚೇರಿಗೆ 10 ಲಕ್ಷ ಖರ್ಚು ಮಾಡಿ  ಸುಂದರ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರದ ಅನೇಕ ಸರಕಾರಿ ಇಲಾಖೆಗಳ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಈ ಕಟ್ಟಡಗಳಿಗೆ ನೀಡುವ ಬಾಡಿಕೆ ಹಣದಲ್ಲಿಯೇ ಸ್ವಂತ ಕಟ್ಟಡ ನಿರ್ಮಾಣ ಮಾಡಬಹುದು. ಈ ಉದ್ದೇಶದಿಂದ ಅಂಚೆ ಇಲಾಖೆ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಗ್ರಾಮೀಣ ಅಂಚೆ ನೌಕರರ ವೇತನ ಹೆಚ್ಚಳದ ಬೇಡಿಕೆ ಅನೇಕ ವರ್ಷಗಳ ಕೂಗಿಗೆ ಕೇಂದ್ರ ಸರ್ಕಾರ ಸ್ಪಂಧಿಸಿ 7ನೇ ವೇತನ ಆಯೋಗದಲ್ಲಿ ಗ್ರಾಮೀಣ ಅಂಚೆ ನೌಕರರ ವೇತನವನ್ನು 12 ಸಾವಿರದಿಂದ 18 ಸಾವಿರದ ವರೆಗೂ ಹೆಚ್ಚಳ ಮಾಡಲಾಗುತ್ತಿದೆ ಎಂದ ಅವರು, ಜಿಲ್ಲೆಯಲ್ಲಿ 25ಸಾವಿರ ಹೆಣ್ಣು ಮಕ್ಕಳು ಸುಕನ್ಯ ಸಂವೃದ್ಧಿ ಯೋಜನೆ ಖಾತೆ ತೆರೆದಿದ್ದಾರೆ. ಜೀವನ್ ಜ್ಯೋತಿ ಭೀಮಾ ಯೋಜನೆ, ಸುರಾಕ್ಷ ಭೀಮಾ ಯೋಜನೆ ಸೇರಿದಂತೆ ಅನೇಕ ಸೌಲಭ್ಯ ಅಂಚೆ ಇಲಾಖೆ ಮೂಲಕ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದರು.

ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಡಾ. ಚಾರ್ಲ್ಸ್ ಲೋಬೋ ಮಾತನಾಡಿ, ರಾಜ್ಯದಲ್ಲಿ 33 ಅಂಚೆ ವಿಭಾಗೀಯ ಕಚೇರಿಗಳಿವೆ. ಅದರಲ್ಲಿ ಚಿಕ್ಕಮಗಳೂರು ವಿಭಾಗೀಯ ಕಚೇರಿ ಮಾತ್ರ ಸ್ವಂತ ಕಟ್ಟಡ ಹೊಂದಿರಲಿಲ್ಲ. ಆ ಕೊರತೆಯನ್ನು ನೀಗಿಸಲಾಗಿದೆ. ಭಾರತದಲ್ಲಿಯೇ ಹೆಚ್ಚು ಸ್ವಂತ ಕಟ್ಟಡದಲ್ಲಿಯೇ ಅಂಚೆ ಕಚೇರಿ ತೆರೆದಿರುವ ಹೆಗ್ಗಳಿಕೆಗೆ ರಾಜ್ಯದ್ದಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರ್ಮಾಣ ಮಾಡಿರುವ ವಿಭಾಗೀಯ ಅಂಚೆ ಕಚೇರಿಯೂ ಪರಿಸರ ಸ್ನೇಹಿ, ಜನಸ್ನೇಹಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕರ್ನಾಟಕ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್, ಚಿಕ್ಕಮಗಳೂರು ವಿಭಾಗ ಅಂಚೆ ಅಧೀಕ್ಷಕ ಶ್ರೀನಿವಾಸ್, ಕಾಫಿಮಂಡಳಿ ಅಧ್ಯಕ್ಷ ಎಂ.ಎಸ್. ಬೋಜೇಗೌಡ, ಅಂಚೆ ಇಲಾಖೆಯ ನೌಕರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News