ಸಂವಿಧಾನ-ಪ್ರಜಾಪ್ರಭುತ್ವ ರಕ್ಷಣೆಗಾಗಿ ಬಿಜೆಪಿಗೆ ಕಡಿವಾಣ: ಮಲ್ಲಿಕಾರ್ಜುನ ಖರ್ಗೆ

Update: 2018-07-13 14:21 GMT

ಕಲಬುರಗಿ, ಜು.13: ದೇಶದಲ್ಲಿ ಆರೆಸೆಸ್ಸ್ ಹಾಗೂ ಬಿಜೆಪಿಯ ಹಾವಳಿ ಹೆಚ್ಚಾಗಿದೆ. ಸಂವಿಧಾನ ರಕ್ಷಣೆ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಬೇಕಾದರೆ ಬಿಜೆಪಿಗೆ ಕಡಿವಾಣ ಹಾಕಬೇಕು. ಇದಕ್ಕಾಗಿ ಉಳಿದ ಎಲ್ಲ ಸಮಾನ ಮನಸ್ಕ ಪಕ್ಷಗಳು ಒಗ್ಗಟ್ಟಾಗಿ ಮುನ್ನಡೆಯಬೇಕಿದೆ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾವಳಿಯನ್ನು ನಿಯಂತ್ರಿಸಬೇಕಾದರೆ ಪರ್ಯಾಯ ರಂಗ ರಚನೆಯಾಗಲೇಬೇಕು. ಎನ್‌ಡಿಎ ಮೈತ್ರಿಕೂಟ ಹೊರತುಪಡಿಸಿ ಉಳಿದ ಪಕ್ಷಗಳನ್ನು ಒಂದುಗೂಡಿಸಿಕೊಂಡು ಹೋಗುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ರಾಷ್ಟ್ರಮಟ್ಟದಲ್ಲಿ ಪರ್ಯಾಯ ರಂಗವನ್ನು ಹುಟ್ಟು ಹಾಕುತ್ತಿದೆ ಎಂದರು.

ತೃತೀಯ ರಂಗ, ನಾಲ್ಕನೆ ರಂಗದ ರಚನೆ ಬಗ್ಗೆ ನನಗೆ ಯಾವುದೆ ಮಾಹಿತಿ ಇಲ್ಲ. ಆದರೆ, ಕಾಂಗ್ರೆಸ್ ಪಕ್ಷವು ಸಮಾನ ಮನಸ್ಕ, ಜಾತ್ಯತೀತ ತತ್ವದಲ್ಲಿ ನಂಬಿಕೆ ಇರಿಸಿಕೊಂಡಿರುವ ಎಲ್ಲರನ್ನೂ ಜೊತೆಯಲ್ಲಿ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವಲ್ಲಿ ಸಮ್ಮಿಶ್ರ ಸರಕಾರ ನಡೆಸುತ್ತಿದ್ದ ಬಿಜೆಪಿ-ಪಿಡಿಪಿ ವಿಫಲವಾಗಿವೆ. ಮಾನವ ಹಕ್ಕುಗಳ ರಕ್ಷಣೆ, ಭಯೋತ್ಪಾದನೆಗೆ ಕಡಿವಾಣ ಹಾಕುವುದಾಗಿ ಜನತೆಗೆ ಅವರು ನೀಡಿದ್ದ ವಾಗ್ದಾನಗಳು ಹುಸಿಯಾಗಿವೆ ಎಂದು ಅವರು ಟೀಕಿಸಿದರು.

ಜನರಿಗೆ ಹತ್ತಾರು ಭರವಸೆಗಳನ್ನು ನೀಡಿ ಸರಕಾರವನ್ನು ರಚನೆ ಮಾಡಿದ ಈ ಪಕ್ಷಗಳು, ಈಗ ಪರಸ್ಪರ ಕೆಸರು ಎರಚಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಮ್ಮು-ಕಾಶ್ಮೀರದ ಜನತೆಯೆ ಬಿಜೆಪಿ ಮತ್ತು ಪಿಡಿಪಿ ಪಕ್ಷಗಳಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News