ಅಕ್ರಮ ಗಣಿಗಾರಿಕೆಗೆ ಸಿಎಂ ಕುಮಾರಸ್ವಾಮಿ ಸಾಥ್: ಹಿರೇಮಠ್ ಆರೋಪ

Update: 2018-07-13 14:40 GMT

ಹುಬ್ಬಳಿ/ಬೆಂಗಳೂರು, ಜು.13: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸ್ವಾಮಿ ಮಲೈ ಅರಣ್ಯ ಪ್ರದೇಶದಲ್ಲಿ ಖಾಸಗಿ ಗಣಿ ಕಂಪನಿಗಳಿಗೆ ಗಣಿಗಾರಿಕೆ ಮಾಡಲು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಕಾನೂನು ಬಾಹಿರವಾಗಿ ಅವಕಾಶ ಮಾಡಿಕೊಟ್ಟಿದ್ದನ್ನು ಇಂದಿನ ಸಿಎಂ ಕುಮಾರಸ್ವಾಮಿ ಬೆಂಬಲಿಸಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಆರೋಪ ಮಾಡಿದ್ದಾರೆ.

ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯಿಂದ ಸಾವಿರಾರು ವರ್ಷಗಳ ಇತಿಹಾಸ ಇರುವ ಐತಿಹಾಸಿಕ ಸ್ಮಾರಕವಾದ ಪಾರ್ವತಿ-ಕಾರ್ತಿಕೆಯನ್ ದೇಗುಲವನ್ನು ಬಳ್ಳಾರಿ ಪ್ರಮುಖ ಗಣಿ ಕಂಪನಿಗಳಾದ ಜಿಂದಾಲ್ ಮತ್ತು ಬಾಲ್ಡೋಟಾ ಕಂಪನಿಗಳು ನಾಶ ಮಾಡಲು ಮುಂದಾಗಿವೆ ಎಂದು ದೂರಿದರು.

ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರಕಾರ ಆಗಸ್ಟ್ 18, 2017 ರಂದು ಸ್ಮಾರಕ ಇರುವ ಜಾಗದಲ್ಲಿ ಕೇವಲ 300 ಮೀಟರ್ ಅಂತರದಲ್ಲಿ ಗಣಿಗಾರಿಕೆ ನಡೆಸಲು ಕಾಯ್ದೆಗೆ ತಿದ್ದುಪಡಿ ಮಾಡಿದೆ. ಇದು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಹುನ್ನಾರವಾಗಿತ್ತು. ಸುಪ್ರೀಂ ಕೋರ್ಟ್ ತೀರ್ಪು ಮತ್ತು ನಮ್ಮದೇ ರಾಜ್ಯ ಸರಕಾರ ಈ ಹಿಂದೆ ಮಾಡಿದ ಕಾನೂನು ಮುರಿದು ಈ ರೀತಿಯ ಅವಕಾಶ ಮಾಡಿಕೊಡುತ್ತಿರಲಿಲ್ಲ ಎಂದು ಹಿರೇಮಠ್ ಹೇಳಿದರು.
ಜೂನ್ 18, 1978 ರಲ್ಲಿ ದೇವರಾಜ್ ಅರಸು ಸರಕಾರ ಐತಿಹಾಸಕ ಸ್ಮಾರಕಗಳ ಬಳಿ ಗಣಿಗಾರಿಕೆ ಮಾಡಲು 2 ಕಿ.ಮೀ. ಅಂತರ ಕಾಯ್ದುಕೊಳ್ಳಬೇಕು ಎಂದು ಕಟ್ಟುನಿಟ್ಟಿನ ನಿಯಮ ರೂಪಿಸಲಾಗಿತ್ತು. ಅಲ್ಲದೆ, ಜುಲೈ 9, 2013ರಂದು ಸುಪ್ರೀಂ ಕೋರ್ಟ್ ಹೊಸಪೇಟೆ ತಾಲೂಕಿನ ಜಂಬುನಾಥೇಶ್ವರ ದೇಗುಲದ ಬಳಿ ಗಣಿಗಾರಿಕೆ ಮಾಡಲು 1 ಕಿ.ಮೀ. ಅಂತರ ಕಾಯ್ದುಕೊಳ್ಳಬೇಕು ಎಂದು ಮಹತ್ವದ ತೀರ್ಪು ನೀಡಿದೆ. ಸಿದ್ದರಾಮಯ್ಯ ಸರಕಾರದಲ್ಲಿ ಇದೆಲ್ಲವನ್ನೂ ಗಾಳಿಗೆ ತೂರಿ ಅಕ್ರಮ ಗಣಿಗಾರಿಕೆಗೆ ಅನುವು ಮಾಡಿಕೊಟ್ಟಿದ್ದಾರೆ. ಅಲ್ಲದೆ, ಈಗ ಅಧಿಕಾರಕ್ಕೆ ಬಂದಿರುವ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯೂ ಸಿದ್ದರಾಮಯ್ಯ ಮಾಡಿದ ತಪ್ಪನ್ನು ಬೆಂಬಲಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News