ಶಿವಮೊಗ್ಗದ ರಾಜಾಭಕ್ಷ್ ವಲಿ ದರ್ಗಾ ತೆರವು ವಿಚಾರ: ಪ್ರತಿವಾದಿಗಳಿಗೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಜು.13: ಶಿಕಾರಿಪುರ, ಶಿವಮೊಗ್ಗ ರಸ್ತೆ ನಡುವೆ ಇರುವ ಹಜರತ್ ಸೈಯದ್ ರಾಜಾಭಕ್ಷ್ ವಲಿ ದರ್ಗಾ ತೆರವು ನಿರ್ಧಾರಕ್ಕೆ ತಡೆ ನೀಡಬೇಕು ಎಂಬ ಮನವಿಯನ್ನು ಹೈಕೋರ್ಟ್ ಸಾರಾಸಗಟಾಗಿ ತಳ್ಳಿ ಹಾಕಿದೆ.
ಈ ಕುರಿತಂತೆ ಹಜರತ್ ಸೈಯದ್ ರಾಜಾಭಕ್ಷ್ ವಲಿ ದರ್ಗಾ ಸಮಿತಿ ಅಧ್ಯಕ್ಷರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಆರ್.ಕೊತ್ವಾಲ್ ವಾದ ಮಂಡಿಸಿ, ಇದು ಜನರ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ವಿಚಾರ. ಒಂದು ವೇಳೆ ಇದನ್ನು ತೆರವುಗೊಳಿಸಿದರೆ ಕಾನೂನು ಸುವ್ಯವಸ್ಥೆಯ ತೊಂದರೆ ಎದುರಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದರು. ಈ ಮಾತಿಗೆ ಖಡಕ್ಕಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಆ ರೀತಿ ಆದರೆ ಅದನ್ನು ನಿಯಂತ್ರಿಸಲು ಸರಕಾರ ಸಮರ್ಥವಾಗಿದೆ. ಹೀಗೆಲ್ಲಾ ನೀವು ಭಾವನಾತ್ಮಕ ವಿಚಾರ ಹಾಗೂ ಶಾಂತಿ ಪಾಲನೆಯ ನೆಪ ಒಡ್ಡಬಾರದು ಎಂದರು. ಬೇಕಾದರೆ, ದರ್ಗಾವನ್ನು ಸ್ಥಳಾಂತರ ಮಾಡಿ. ಸತ್ತವರೇನು ಸಮಾಧಿಯಿಂದ ಮೇಲೆದ್ದು ಬರ್ತಾರಾ? ಕಟ್ಟಡಗಳನ್ನೇ ಅನಾಮತ್ತಾಗಿ ಒಂದೆಡೆಯಿಂದ ಇನ್ನೊಂದೆಡೆ ಸ್ಥಳಾಂತರ ಮಾಡುವ ಈ ಕಾಲದಲ್ಲಿ ದರ್ಗಾ ಸ್ಥಳಾಂತರಕ್ಕೆ ಏನು ಅಡ್ಡಿ ಎಂದು ಪ್ರಶ್ನಿಸಿದರು. ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.
ಪ್ರಕರಣವೇನು: ರಾಜ್ಯ ಸರಕಾರವು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಶಿವಮೊಗ್ಗ ಶಿಕಾರಿಪುರ ಆನಂದಪುರ ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಂಡಿದೆ. ಈ ಮಾರ್ಗದಲ್ಲಿ ಬರುವ ದರ್ಗಾ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿದೆ ಎಂದು ಇದನ್ನು ತೆರವುಗೊಳಿಸಲು ನಿರ್ಧರಿಸಿದೆ. ಈ ನಿರ್ಧಾರವನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಲಾಗಿದೆ.