ಧಾರವಾಡ: ರಾಜ್ಯಮಟ್ಟದ ಜಿ.ಪಂ.ಸದಸ್ಯರ ಒಕ್ಕೂಟ ರಚನೆಗೆ ಚಿಂತನೆ

Update: 2018-07-13 16:24 GMT

ಧಾರವಾಡ, ಜು.13: ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಅಧ್ಯಕ್ಷ, ಉಪಾದ್ಯಕ್ಷ ಮತ್ತು ಸದಸ್ಯರ ರಾಜ್ಯ ಮಟ್ಟದ ಒಕ್ಕೂಟ ರಚಿಸುವ ಸಂಬಂಧ ಶುಕ್ರವಾರ ಧಾರವಾಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷೆ ಚೈತ್ರಾ ಶಿರೂರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.

ಜಿಲ್ಲಾ ಪಂಚಾಯತ್ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರಕಾರವು ಅತ್ಯಂತ ಕಡಿಮೆ ಅನುದಾನ ಬಿಡುಗಡೆ ಮಾಡುತ್ತಿದೆ. ಅದರಿಂದ ಗ್ರಾಮ ಪಂಚಾಯತ್ ಗಳಿಗೆ ನೀಡುವಂತೆ ಅನುದಾನವನ್ನು ನೇರವಾಗಿ ಜಿಲ್ಲಾ ಪಂಚಾಯತ್ ಗಳಿಗೆ ಬಿಡುಗಡೆ ಮಾಡುವುದು ಸೇರಿದಂತೆ ರಾಜ್ಯ ಪಂಚಾಯತ್ ರಾಜ್ ಕಾಯ್ದೆಗೆ ಅನುಗುಣವಾಗಿ ಸ್ವತಂತ್ರವಾಗಿ ಮತ್ತು ಸಮರ್ಥವಾಗಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕೆಂದು ವಿವಿಧ ವಿಷಯಗಳ ಕುರಿತು ಜಿಲ್ಲಾ ಪಂಚಾಯತ್ ಸದಸ್ಯರು ಸಭೆಯಲ್ಲಿ ಚರ್ಚಿಸಿದರು.

ರಾಜ್ಯ ಮಟ್ಟದ ಒಕ್ಕೂಟ ರಚನೆಗಾಗಿ ಈಗಾಗಲೇ ರಾಜ್ಯದ 18ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರವಾಸ ಕೈಕೊಳ್ಳಲಾಗಿದೆ. ಪ್ರತಿ ಜಿಲ್ಲಾ ಪಂಚಾಯತ್ ನಿಂದ 4 ರಿಂದ 5 ಸದಸ್ಯರನ್ನು ರಾಜ್ಯ ಕಾರ್ಯಕಾರಿಣಿಗೆ ನೇಮಿಸಿಕೊಂಡು ಒಕ್ಕೂಟ ಕಾರ್ಯ ಮಾಡಲಿದೆ. ಉಳಿದ ಜಿಲ್ಲಾ ಪಂಚಾಯತ್ ಗಳಿಗೆ ಶೀಘ್ರದಲ್ಲಿ ಭೇಟಿ ನೀಡಿ ಚರ್ಚಿಸಲಾಗುವುದು. ಮುಂದಿನ ತಿಂಗಳು ರಾಜ್ಯ ಮಟ್ಟದ ಸಮಾವೇಶ ಮಾಡುವ ಮೂಲಕ ಒಕ್ಕೂಟದ ಉದ್ಘಾಟನೆ ಮಾಡಲಾಗುವುದೆಂದು ಚಾಮರಾಜನಗರ ಜಿಲ್ಲಾ ಪಂಚಾಯತ್ ಯ ಕೃಷಿ ಮತ್ತು ಕೈಗಾರಿಕಾ ಸಮಿತಿಯ ಅಧ್ಯಕ್ಷ ನವೀನ್ ತಿಳಿಸಿದರು. 

ಸಭೆಯಲ್ಲಿ ಧಾರವಾಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕರಿಗಾರ, ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿವಾಕರ ಬಾಬು ಸೇರಿದಂತೆ ಚಾಮರಾಜ ನಗರ, ಉಡುಪಿ, ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News