ದಾವಣಗೆರೆ: ವೈದ್ಯಕೀಯ ಕೋರ್ಸ್‍ಗಳ ಶುಲ್ಕ ಹೆಚ್ಚಳ ಖಂಡಿಸಿ ಎಬಿವಿಪಿ ಪ್ರತಿಭಟನೆ

Update: 2018-07-13 16:33 GMT

ದಾವಣಗೆರೆ,ಜು.13: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‍ಗಳ ಶುಲ್ಕ ಹೆಚ್ಚಳವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಶುಕ್ರವಾರ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ವಿದ್ಯಾರ್ಥಿ ಮುಖಂಡರು ಮಾತನಾಡಿ, 2018-19ನೇ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಶುಲ್ಕವನ್ನು ಈ ಹಿಂದಿಗಿಂತ ಮೂರುಪಟ್ಟು ಹೆಚ್ಚಳ ಮಾಡಲಾಗಿದೆ. ಇದು ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ರಂಗದ ಕನಸಿನಿಂದ ದೂರವಿಡುವ ಸರ್ಕಾರದ ಕ್ರಮವಾಗಿದೆ ಎಂದು ಅವರು ಆರೋಪಿಸಿದರು.

ಕಳೆದ ವರ್ಷ ಸರ್ಕಾರಿ ಕಾಲೇಜುಗಳಲ್ಲಿ ವೈದ್ಯಕೀಯ ಕೋರ್ಸ್‍ಗಳಿಗೆ 16,700 ರು. ಶುಲ್ಕವನ್ನು ಪಡೆಯಲಾಗುತ್ತಿತ್ತು. ಆದರೆ, ಪ್ರಸ್ತುತ ವರ್ಷದಲ್ಲಿ ಶುಲ್ಕವನ್ನು ಒಂದೇ ಬಾರಿಗೆ 50 ಸಾವಿರ ಅಂದರೆ ಶೇ. 300ರಷ್ಟು ದಿಢೀರ್ ಏರಿಕೆ ಮಾಡಲಾಗಿದೆ. ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಸೀಟುಗಳಿಗೆ 77 ಸಾವಿರ ರು. ಶುಲ್ಕವಿತ್ತು. ಆದರೆ, ಈ ಬಾರಿ 97,350 ರೂ. ಶೇ. 25ರಷ್ಟು ಹೆಚ್ಚು ಶುಲ್ಕ ಪಡೆಯಲಾಗುತ್ತಿದೆ ಎಂದರು.

ಅಲ್ಲದೆ, ಖಾಸಗಿ ಕಾಲೇಜುಗಳಲ್ಲಿ ಖಾಸಗಿ ಸೀಟು ಪಡೆದ ವಿದ್ಯಾರ್ಥಿಗಳಿಗೆ 6,32,500 ರು. ಶುಲ್ಕವಿತ್ತು. ಇದೀಗ ಶೇ. 8 ರಷ್ಟು ಅಂದರೆ 6,83,100 ರೂ. ಶುಲ್ಕವನ್ನು ಪಡೆಯಲಾಗುತ್ತಿದೆ,. ಸರ್ಕಾರಿ ದಂತ ವೈದ್ಯಕೀಯ ಕಾಲೇಜುಗಳಲ್ಲಿ ಈ ಬಾರಿ ಶೇ. 250ರಷ್ಟು ಹಾಗೂ ಖಾಸಗಿ ಕಾಲೇಜಿನಲ್ಲಿ ಶೇ, 27ರಷ್ಟು ಏರಿಕೆ ಮಾಡಲಾಗಿದೆ. ಈ ರೀತಿ ಒಂದೇ ಬಾರಿಗೆ ಶುಲ್ಕ ಏರಿಸಿರುವುದರಿಂದ ಉನ್ನತ ಶಿಕ್ಷಣವೆಂಬುದು ಕೇವಲ ಶ್ರೀಮಂತರ ಸೊತ್ತು ಆದಂತಾಗುತ್ತದೆ. ಆದರೆ, ಸರ್ಕಾರದ ಕಣ್ಣಿಗೆ ಇದು ಕಾಣದಿರುವುದು ವಿಪರ್ಯಾಸ ಎಂದು ಅವರು ದೂರಿದರು.

ಖಾಸಗಿ ಕಾಲೇಜುಗಳ ಅಭಿವೃದ್ಧಿ, ಓಲೈಕೆಗೆ ಸರ್ಕಾರ ವಾಲಿದಂತೆ ಕಾಣುತ್ತಿದೆ. ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಎಂಬುದು ಕನಸಾಗಲಿದೆ. ವಿದ್ಯಾಭ್ಯಾಸಕ್ಕೆ ಸಹಕರಿಸಬೇಕಾದ ಸರ್ಕಾರ ಈ ರೀತಿ ಶುಲ್ಕ ಹೆಚ್ಚಿಸಿರುವುದು ಖಂಡನೀಯ. ಆದ್ದರಿಂದ ಈ ಕೂಡಲೇ ಸರ್ಕಾರ ಶುಲ್ಕ ಹೆಚ್ಚಳ ಮಾಡಿರುವ ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರಾಮುವರ್ಣೇಕರ್, ಗಗನ್, ಕೊಟ್ರೇಶ್, ಹರ್ಷ, ಶರತ್, ವಿವೇಕ್, ಸುಹಾಸ್, ಸ್ನೇಹ ಹಾಗೂ ವೈದ್ಯಕೀಯ, ದಂತವೈದ್ಯಕೀಯ ವಿದ್ಯಾರ್ಥಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News