ಮಂಡ್ಯ: ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು

Update: 2018-07-13 16:45 GMT

ಮಂಡ್ಯ, ಜು.13: ಮೂರು ದಿನಗಳ ಹಿಂದೆ ವಿಚಾರಣೆಗೆಂದು ಕರೆತಂದಿದ್ದ ವ್ಯಕ್ತಿ ಠಾಣೆಯಲ್ಲಿಯೇ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ನಡೆದಿದೆ.

ಮದ್ದೂರು ತಾಲೂಕಿನ ಬೆಳ್ತೂರು ಗ್ರಾಮದ ದಲಿತ ಕೂಲಿ ಕಾರ್ಮಿಕ ಮೂರ್ತಿ(45) ಅನುಮಾನಾಸ್ಪದವಾಗಿ ಠಾಣೆಯಲ್ಲಿ ಮೃತಪಟ್ಟ ವ್ಯಕ್ತಿ. ಇವರನ್ನು ಕಳೆದ ಸೋಮವಾರ ಬಂಧಿಸಲಾಗಿತ್ತು ಎನ್ನಲಾಗಿದೆ.

ಮೂರ್ತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಮೂರ್ತಿ ಪೊಲೀಸರ ಹಲ್ಲೆಯಿಂದ ಸಾವನ್ನಪ್ಪಿದ್ದಾನೆ ಎಂದು ದಲಿತ ಸಂಘಟನೆಗಳು ಮುಖಂಡರು ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ. ಮೂರ್ತಿ ಗಾರೆ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದ್ದು, ಈತನನ್ನು ಕಳೆದ ಸೋಮವಾರ ಪಶ್ಚಿಮ ಠಾಣೆ ಪೊಲೀಸರು ಬೈಕ್ ಕಳ್ಳತನದಡಿ ಬಂಧಿಸಿ ಠಾಣೆಯಲ್ಲಿರಿಸಿಕೊಂಡಿದ್ದರು ಎನ್ನಲಾಗಿದ್ದು, ಇಂದು (ಜು.13) ಬೆಳಗ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಠಾಣೆಗೆ ಧಾವಿಸಿದ ದಲಿತ ಸಂಘರ್ಷ ಸಮಿತಿ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಎಂ.ಬಿ.ಶ್ರೀನಿವಾಸ್, ವೆಂಕಟಗಿರಿಯಯ್ಯ, ಎಂ.ವಿ.ಕೃಷ್ಣ, ದಲಿತ ಮುಖಂಡರಾದ ಎಸ್.ಡಿ.ಜಯರಾಂ, ಇತರ ಮುಖಂಡರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಂಧಿಸಿದ ವ್ಯಕ್ತಿಯನ್ನು ಮೂರು ದಿನ ಠಾಣೆಯ ಲಾಕಪ್‍ನಲ್ಲಿ ಇರಿಸಿಕೊಂಡಿರುವುದು ಏಕೆಂದು ಪ್ರಶ್ನಿಸಿದ ಅವರು, ನ್ಯಾಯಾಲಯಕ್ಕೆ ಹಾಜರುಪಡಿಸಿದೆ ಕರ್ತವ್ಯಲೋಪ ಎಸಗಲಾಗಿದೆ. ಪೊಲೀಸರ ಥಳಿತದಿಂದ ಮೃತಪಟ್ಟಿದ್ದಾನೆ ಎಂದು ಆರೋಪಿಸಿದರು.

ನ್ಯಾಯಾಧೀಶರ ಭೇಟಿ: ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ವದವಾಗಿ ಮೂರ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಅವರು ಠಾಣೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ನಂತರ, ಶವದ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು.
ಜಿಲ್ಲಾಸ್ಪತ್ರೆ ಶವಾಗಾರದ ಎದುರೂ ಪ್ರತಿಭಟನೆ ನಡೆಸಿದ ದಲಿತ ಮುಖಂಡರು ಹಾಗೂ ಮೃತ ವ್ಯಕ್ತಿಯ ಸಂಬಂಧಿಕರು, 'ಠಾಣೆಯ ಅಧಿಕಾರಿಗಳನ್ನು ಅಮಾನುತಪಡಿಸಿ ತನಿಖೆ ನಡೆಸಬೇಕು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ನ್ಯಾಯಾಧೀಶರ ಸಮ್ಮುಖದಲ್ಲೇ ಶವಪರೀಕ್ಷೆ ನಡೆಸಬೇಕು' ಎಂದು ಆಗ್ರಹಿಸಿದರು.

ಮೃತನ ಮಾವ ಪುಟ್ಟರಾಮಣ್ಣ ಮಾತನಾಡಿ, ಮೂರ್ತಿ ಕಟ್ಟಡ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮದುವೆಯಾಗಿ 30 ವರ್ಷ ಕಳೆದಿದ್ದು, ಮೂವರು ಹೆಣ್ಣು ಮಕ್ಕಳಿದ್ದಾರೆ. ಆತ ಯಾವುದೇ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರಲು ಸಾಧ್ಯವಿಲ್ಲ ಎಂದರು. 'ಮೂರು ದಿನಗಳಿಂದಲೂ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದೇನೆ. ಪೊಲೀಸರು ಮೂರ್ತಿಯನ್ನು ಕರೆತಂದಿಲ್ಲ ಎನ್ನುತ್ತಿದ್ದರು. ಆದರೆ, ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುತ್ತಿದ್ದಾರೆ.  ಆತ ಪೊಲೀಸರ ಹಲ್ಲೆಯಿಂದ ಸಾವನ್ನಪ್ಪಿದ್ದಾನೆ ಎಂದು ಅವರು ಆರೋಪಿಸಿದರು.

'ಕಳೆದ ಸೋಮವಾರ ಮೂರ್ತಿ ಜತೆ ನಾನು ಸೇರಿದಂತೆ ಮೂವರನ್ನು ಠಾಣೆಗೆ ಕರೆತಂದಿದ್ದರು. ವಿಚಾರಣೆ ಸಂದರ್ಭದಲ್ಲಿ ಪೊಲೀಸರು ಹೊಡೆಯುತ್ತಿದ್ದರು. ನನ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಜಾಮೀನಿನ ಮೇಲೆ ನಾನು ಬಿಡುಗಡೆಯಾಗಿ ಬಂದೆ. ಮೂರ್ತಿ ಸಾವಿನ ಬಗ್ಗೆ ನನಗೇನು ಗೊತ್ತಿಲ್ಲ' ಎಂದು ಮೂರ್ತಿ ಜತೆ ಬಂಧಿತನಾಗಿದ್ದ ಮದ್ದೂರು ತಾಲೂಕು ಅಂತರಹಳ್ಳಿಯ ನಾಗರಾಜು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News